ಹಾವೇರಿ: ನಗರದ ಹೊರವಲಯದ ನೆಲೋಗಲ್‌ದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಎರಡನೇ ವರ್ಷದ ಆನ್‌ಲೈನ್ ಮತ್ತು ಆಫ್‌ಲೈನ್ ಪ್ರವೇಶಾತಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯತ್ತಿಗೆ ಜಿಟಿಟಿಸಿ ಕೇಂದ್ರ ಸಹಕಾರಿಯಾಗಿದೆ ಎಂದು ಕೇಂದ್ರದ ಪ್ರಾಚಾರ್ಯ ಅಶ್ವಿನ್‌ಕುಮಾರ ಸೋಮಣ್ಣನವರ ಹೇಳಿದರು.
ಮೂರು ವರ್ಷಗಳ ಡಿಪ್ಲೊಮಾ ಮತ್ತು ಒಂದು ವರ್ಷದ ಕೈಗಾರಿಕಾ ತರಬೇತಿ ಸೇರಿದಂತೆ ಒಟ್ಟು ನಾಲ್ಕು ವರ್ಷಗಳ ಅಧ್ಯಯನ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್, ಡಿಪ್ಲೊಮಾ ಇನ್‌ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ಈ ಎಲ್ಲ ಕೋರ್ಸ್‌ಗೆ ತಲಾ 60 ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಿದ್ದು, ಒಟ್ಟು 180 ಸೀಟ್‌ಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಎಸ್ಸೆಸ್ಸೆಲ್ಸಿ ಪಾಸ್, ಪಿಯುಸಿ, ಐಟಿಐ ಮಾಡಿದವರು ಪ್ರವೇಶ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಮೂರು ವರ್ಷದ ಡಿಪ್ಲೊಮಾ ಪದವಿ ನಂತರ ಕೈಗಾರಿಕಾ ತರಬೇತಿಗೆ ಹೋಗುವವರಿಗೆ ಮಾಸಿಕ ₹15 ಸಾವಿರದಿಂದ ₹ 20 ಸಾವಿರ ಸ್ಟ್ಪೈಫಂಡ್ ಸಿಗಲಿದೆ. ಅಲ್ಲದೇ ಶಿಷ್ಯವೇತನ, ಕ್ಯಾಂಪಸ್ ಆಯ್ಕೆ ನಡೆಯಲಿದ್ದು, ಈ ಎಲ್ಲ ಕೋರ್ಸ್‌ಗಳು ಶೇ. 70ರಷ್ಟು ಪ್ರಾಯೋಗಿಕ ತರಬೇತಿ ಮತ್ತು ಶೇ. 30ರಷ್ಟು ಉಪನ್ಯಾಸ ಮಾದರಿಯಲ್ಲಿವೆ. ಹಾವೇರಿ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಔದ್ಯೋಗಿಕ ಬದುಕನ್ನು ಹಸನಾಗಿಸಲು ತರಬೇತಿ ಕೇಂದ್ರ ಉತ್ತಮವಾಗಿ ಕೆಲಸ ಮಾಡಲಿದೆ. ಜಿಲ್ಲೆಯಲ್ಲಿರುವ ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರತಿ ವರ್ಷ 1800-2000 ಜನರ ತರಬೇತಿ ಪೂರೈಸಿದ ಉತ್ತಮ ಉದ್ಯೋಗಿಗಳಿಗೆ ನಮ್ಮಲ್ಲಿ ಬೇಡಿಕೆ ಬರುತ್ತಿದೆ. ಆದರೆ, ನಿರೀಕ್ಷೆಯಷ್ಟು ಮಕ್ಕಳು ತರಬೇತಿಗೆ ಬರುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿರುವ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಮನವೊಲಿಸಲಾಗುತ್ತಿದೆ. 180 ಸೀಟ್‌ಗಳು ಭರ್ತಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದರು. ಆಡಳಿತ ಅಧಿಕಾರಿ ಬೀರೇಶ ನೆಟಗಲ್ಲಣ್ಣವರ ಇದ್ದರು.