ಹಾವೇರಿ: ಜೂನ್‌ನಲ್ಲಿ ಮಳೆ ಕೊರತೆಯಾಗಿದೆ. ಇನ್ನೊಂದು ವಾರದಲ್ಲಿ ಆಗಬಹುದು ಎಂಬ ನಿರೀಕ್ಷೆ ಇದೆ. ಶೇ.80ರಷ್ಟು ಬಿತ್ತನೆಯೂ ಮುಗಿದಿದೆ. ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಲೇ ತಯಾರಿ ಮಾಡಲಾಗುತ್ತಿದೆ. ಹಾವೇರಿ ನಗರದ ಕುಡಿಯುವ ನೀರು, ಚರಂಡಿಯ ಸೂಕ್ತ ನಿರ್ವಹಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಒಂದು ವಾರದಲ್ಲಿ ಮಳೆ ಆಗದಿದ್ದರೆ ಸಮಸ್ಯೆಯಾಗಬಹುದು. ನಾವು ಮಳೆ ನಿರೀಕ್ಷೆಯಲ್ಲಿದ್ದೇವೆ. ರೈತರಿಗೆ ಸಾಧ್ಯವಾದಷ್ಟು ಬೆಳೆ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರದಿಂದ ಅನುದಾನ ವಿಳಂಬವಾದಗಲೂ ರೈತರಿಗೆ ಬೆಳೆ ಪರಿಹಾರ ನೀಡಲಾಗಿದೆ ಎಂದರು.ಜು. ೨ರಂದು ನಡೆಯಲಿರುವ ಜಿಲ್ಲಾ ಕೆಡಿಪಿ ಪೂರ್ವ ತಯಾರಿ ಸಭೆ ನಡೆಸಲಾಯಿತು. ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಸದ್ಯಕ್ಕೆ ಐದು ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಜೆಜೆಎಂ ಯೋಜನೆಗೆ ರಾಜ್ಯ ಸರ್ಕಾರವೂ ಶೇ.೪೦ರಷ್ಟು ಅನುದಾನ ಕೊಡುತ್ತದೆ. ರೀಫಿಲ್ಲಿಂಗ್ ಮಾಡುವಲ್ಲಿ ಹಣಕಾಸಿನ ಕೊರತೆ ಉದ್ಭವಿಸುತ್ತಿದೆ. ಆ ಬಗ್ಗೆ ಚರ್ಚೆ ನಡೆದಿವೆ. ಜಿಲ್ಲೆಯಲ್ಲಿ ಶೇ.೭೦ರಷ್ಟು ಕೆಲಸ ಆಗಿದೆ ಎಂದರು.ನಾನು ಜಿಲ್ಲೆಯಿಂದ ಅಂತರ ಕಾಯ್ದುಕೊಂಡಿಲ್ಲ. ಬಾಗಲಕೋಟೆ ಕ್ಷೇತ್ರದ ಚುನಾವಣೆಯಲ್ಲಿ ನಿರತನಾಗಿದ್ದೆ. ಈ ಬಾರಿ ನೀತಿಸಂಹಿತೆ ಅತಿ ಹೆಚ್ಚು ದಿನ ಇತ್ತು. ಆದರೂ, ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.ಹಾವೇರಿ ಶಹರದ ಮೆಹಬೂಬನಗರ ಅನೈರ್ಮಲ್ಯ ಕುರಿತು ಕೇಳಿದ ಪ್ರಶ್ನೆಗೆ, ಶಾಸಕ ರುದ್ರಪ್ಪ ಲಮಾಣಿ ಪ್ರತಿಕ್ರಿಯಿಸಿ, ಈಗಾಗಲೇ ನಗರಸಭೆಯಿಂದ ೨ ಕೋಟಿ ರು. ಮೊತ್ತದ ಟೆಂಡರ್ ಕಡೆಯಲಾಗಿದೆ. ಶೀಘ್ರದಲ್ಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ಶಾಸಕ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಇತರರು ಇದ್ದರು.
ಶಿಗ್ಗಾಂವಿ ಟಿಕೆಟ್-ಪಕ್ಷದ ತೀರ್ಮಾನ ಅಂತಿಮ: ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಇಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ''''''''ಶಿಗ್ಗಾಂವಿ ಉಪ ಚುನಾವಣೆಗೆ ನನಗೇ ಟಿಕೆಟ್ ಆಗುತ್ತದೆ. ಅವರು ಹೇಳಿದ್ದಾರೆ, ಇವರು ಹೇಳಿದ್ದಾರೆ ಎಂದು ಯಾರೂ ಹೇಳಬಾರದು. ಪಕ್ಷದ ತೀರ್ಮಾನವೇ ಅಂತಿಮ ಎಂದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಮಾಜಿ ಶಾಸಕ ಅಜೀಮ್‌ಪೀರ್ ಖಾದ್ರಿ ಅವರು ನನಗೇ ಟಿಕೆಟ್ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಂದು ಹೇಳಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ಟಿಕೆಟ್ ಕೇಳುವುದು ತಪ್ಪಲ್ಲ. ಆದರೆ ನನಗೇ ಆಗಿದೆ ಎಂದು ಯಾರೂ ಹೇಳಬಾರದು. ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಕುರಿತು ಸಿಎಂ, ಡಿಸಿಎಂ ಬಳಿ ಚರ್ಚಿಸಲಾಗಿದೆ. ನಾನು ಉಪಚುನಾವಣೆಯಲ್ಲಿ ಕೆಲಸ ಮಾಡುವೆ. ಹಿಂದಿನಂತೆ ಭಿನ್ನಾಭಿಪ್ರಾಯಗಳಿಂದ ಸೋಲು ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಎರಡು ರು. ಬೆಲೆ ಕಡಿಮೆ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ಏರಿಸಿದ್ದೇವೆ. ಹಾಲಿನ ದರ ಹೆಚ್ಚಿಸಲು ಕೆಎಂಪಿ ಮಂಡಳಿಯಿಂದ ಮೊದಲೇ ಬೇಡಿಕೆ ಇತ್ತು. ಹಾಗಾಗಿ ಹೆಚ್ಚಿಸಲಾಗಿದೆ. ಹಾವೇರಿ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿ ದರ ೨ ರು. ಬೆಲೆ ಕಡಿಮೆ ಮಾಡಿರುವುದರ ಕುರಿತು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.