ಧಾರವಾಡ: ಬದಲಾಗುತ್ತಿರುವ ಪತ್ರಿಕೋದ್ಯಮಕ್ಕೆ ತಂತ್ರಜ್ಞಾನ ಸೇರಿದಂತೆ ಭಾಷಾ ಪ್ರಭುತ್ವ, ಅನುವಾದ ಕಲೆಯ ಕೌಶಲ್ಯಗಳನ್ನು ಅಳವಡಿಸಿಕೊಂಡು ಸಿದ್ದರಾಗಬೇಕಾಗಿದೆ ಎಂದು ಪತ್ರಕರ್ತ ಚನ್ನು ಮೂಲಿಮನಿ ಹೇಳಿದರು.
ಪ್ರಸ್ತುತ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಮಾನವ ಸಂಪನ್ಮೂಲಕ್ಕೆ ಹೆಚ್ಚು ಮನ್ನಣೆ ಇದೆ. ಪತ್ರಿಕೋದ್ಯಮ ವೇಗವಾಗಿ ತನ್ನ ಗತಿಯನ್ನು ಬದಲಿಸಿಕೊಳ್ಖುತ್ತಿದೆ. ಹಾಗಾಗಿ, ಎಲ್ಲ ರೀತಿಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಿದ್ದರಾಗಿ ಬನ್ನಿ ಎಂದ ಅವರು, ಪತ್ರಿಕೋದ್ಯಮ ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ. ಪ್ರಸ್ತುತ ಅನುವಾದ ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಹಾಗಾಗಿ, ಇಂದಿನ ವಿದ್ಯಾರ್ಥಿಗಳು ಅನುವಾದದ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಕನಿಷ್ಠ ಮೂರು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕಲಾ ಕಾಲೇಜಿನ ಜಿಮಖಾನದ ಉಪಾಧ್ಯಕ್ಷ ಡಾ. ಐ.ಸಿ. ಮುಳಗುಂದ ಮಾತನಾಡಿ, ಪ್ರಸ್ತುತ ಮಾಧ್ಯಮ ಕ್ಷೇತ್ರ ತಂತ್ರಜ್ಞಾನದ ಪ್ರಭಾವದಿಂದಾಗಿ ಬದಲಾವಣೆ ಹೊಂದುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಕೇಂದ್ರೀಕೃತವಾಗಿ ಅಧ್ಯಯನ ಶೀಲರಾಗಬೇಕು. ತಂತ್ರಜ್ಞಾನದ ಪ್ರಭಾವದಿಂದಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳು ಇವೆ ಎಂದರು.ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಡಾ. ಪ್ರಭಾಕರ ಕಾಂಬಳೆ, ಡಾ. ಮುಕುಂದ ಲಮಾಣಿ, ಡಾ.ರವೀಂದ್ರ ಜಲರಡ್ಡಿ ಇದ್ದರು.