ಹಾನಗಲ್ಲ: ತಾಲೂಕಿನ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಬಾರದು ಎನ್ನುವ ಉದ್ದೇಶದಿಂದ ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಹೊಸ ಪದ್ಧತಿಯಲ್ಲಿ ಮಾರ್ಗದರ್ಶನ ದೊರಕಿಸಿ, ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪ್ರತಿ ಭಾನುವಾರ ಹಾಗೂ ದಸರಾ ರಜೆಯ ಸಂದರ್ಭದಲ್ಲೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯ ಪರಿಣಿತದಿಂದ ತರಬೇತಿ ದೊರಕಿಸುವ ಉದ್ದೇಶವಿದೆ. ಪರೀಕ್ಷೆ ಬಗೆಗಿನ ಭಯ ಹೋಗಲಾಡಿಸಿ, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೇರಣೆ ನೀಡಲಾಗುವುದು. ತರಬೇತಿಗೆ ವಿದ್ಯಾರ್ಥಿಗಳು ಆಸಕ್ತಿ ಪ್ರದರ್ಶಿಸಿದರೆ ನಮಗೂ ಸಹ ಉತ್ಸಾಹ ಬರಲಿದೆ. ಸಾಧನೆ ಬಗ್ಗೆ ವಿದ್ಯಾರ್ಥಿಗಳು ಛಲ ಹೊಂದಬೇಕಿದೆ. ನಿರಂತರ ಜ್ಞಾನಾರ್ಜನೆ ಮೂಲಕ ಹೆಚ್ಚು ಅಂಕ ಸಾಧನೆ ಮಾಡುವಂತೆ ಕಿವಿಮಾತು ಹೇಳಿದರು.
ಕಳೆದ ೪ ವರ್ಷಗಳಿಂದ ಪರಿವರ್ತನ ಕಲಿಕಾ ಕೇಂದ್ರದ ಮೂಲಕ ಎನ್ಎಂಎಂಎಸ್, ಸಿಇಟಿ, ನೀಟ್, ಸ್ಪೋಕನ್ ಇಂಗ್ಲಿಷ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯ ಗಟ್ಟಿಗೊಳಿಸಲು ದೃಢ ಹೆಜ್ಜೆ ಇಡಲಾಗಿದೆ. ಶೈಕ್ಷಣಿಕವಾಗಿ ಸುಧಾರಣೆ ತರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದೆ ಎಂದು ಹೇಳಿದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಮಾರುತಿ ಶಿಡ್ಲಾಪೂರ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ, ಮಾರ್ಗದರ್ಶನದ ಜೊತೆಗೆ ಸ್ಪರ್ಧಾತ್ಮಕ ಜಗತ್ತಿನ ಜ್ಞಾನವನ್ನೂ ಪರಿವರ್ತನ ಕಲಿಕಾ ಕೇಂದ್ರ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನದಲ್ಲಿ ನೀಡುತ್ತಿದೆ. ವರ್ಷದ ೩೬೫ ದಿನಗಳ ಕಾಲವೂ ಒಂದಿಲ್ಲೊಂದು ತರಬೇತಿ, ಮಾರ್ಗದರ್ಶನ ಶಿಬಿರಗಳನ್ನು ವಿದ್ಯಾರ್ಥಿಗಳು, ಯುವ ಸಮೂಹದ ಹಿತದೃಷ್ಟಿಯಿಂದ ನೀಡಲಾಗುತ್ತಿದೆ. ಶೈಕ್ಷಣಿಕ ಸೇವೆಯಲ್ಲಿ ಇದು ಮಾದರಿಯಾಗಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕೆ ಇದು ದಾರಿದೀಪ ಎಂದು ತಿಳಿಸಿದರು.