- ಶ್ರೀ ಗುರು ಸಿದ್ಧರಾಮೇಶ್ವರ ಕುರಿತು ಅನುಭಾವದ ನುಡಿ । ವಿದ್ಯಾರ್ಥಿಗಳಿಗೆ ಪುರಸ್ಕಾರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಜ್ಜಂಪುರ ಶೆಟ್ರು ಕುಟುಂಬದವರ ಮನೆಯಲ್ಲಿ ಅವರ ಹಿರಿಯರು ಗುರು, ಲಿಂಗ, ಜಂಗಮ, ದಾಸೋಹ, ಶಿವಾನುಭವ ಮಾಡಿದ್ದರಿಂದ ಈಗಿನವರಿಗೆ ಈ ಅದೇ ಸಂಸ್ಕಾರ ಬಂದಿದೆ ಎಂದರೆ ಅದು ಮೆಚ್ಚುವಂತಹ ಕಾರ್ಯ ಎಂದು ಸೊಲ್ಲಾಪುರದ ಸಿಂಧೂತಾಯಿ ಶಿವಶಂಕರ ಕಾಡಾದಿ ಹೇಳಿದರು.

ಇಲ್ಲಿನ ಅಕ್ಕ ಮಹಾದೇವಿ ರಸ್ತೆಯಲ್ಲಿರುವ ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಅಜ್ಜಂಪುರ ಶೆಟ್ರು ಪ್ರತಿಭಾ ಪ್ರತಿಷ್ಠಾನದಿಂದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀ ಗುರು ಸಿದ್ಧರಾಮೇಶ್ವರ ಅವರು ನಡೆದು ಬಂದ ದಾರಿ ಕುರಿತು ಅವರು ಅನುಭಾವದ ನುಡಿಗಳನ್ನಾಡಿದರು.


ಒಂದು ಕುಟುಂಬದಲ್ಲಿ ಆಧ್ಯಾತ್ಮಿಕ ಸಂಸ್ಕಾರ ಇದ್ದರೆ ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರದಂತಹ ಕಾರ್ಯಕ್ರಮ ಮಾಡಲು ಸಾಧ್ಯ. ಅಜ್ಜಂಪುರ ಕುಟುಂಬದವರು ತಮ್ಮ ವಂಶಸ್ಥರ ನೆನಪಿಗಾಗಿ ಸಮಾಜದ ಉದ್ಧಾರಕ್ಕೋಸ್ಕರ ಇಂತಹ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರೆ ಅದು ದೇವರು ಮೆಚ್ಚುವಂತಹ ಕೆಲಸವಾಗಿದೆ. ಬಸವಾದಿ ಶರಣರ ವಚನಗಳಲ್ಲಿ ಇರುವುದು ಮಾನವೀಯ ಮೌಲ್ಯಗಳು. ಬಸವಾದಿ ಶರಣರು, ನಡೆ-ನುಡಿ, ಮಾತನ್ನು, ಉಣ್ಣಲು, ಉಡಲು ಕಲಿಸಿದರು, ಅದರ ಜೊತೆಗೆ ಭಕ್ತಿಯನ್ನು, ಜ್ಞಾನವನ್ನು ಕಲಿಸಿದರು ಎಂದರು.

ಪ್ರತಿಭಾವಂತ ಮಕ್ಕಳನ್ನು ಕುರಿತು ಮಾತನಾಡಿದ ಅವರು, ನಿಮ್ಮ ಸಾಧನೆ ಇಷ್ಟಕ್ಕೇ ಮುಗಿಯಲಿಲ್ಲ, ಮುಂದೆ ಪ್ರಗತಿ ಇದೆ ಎಂದು ಅಜ್ಜಂಪುರ ಶೆಟ್ರು ಮನೆತನದವರು ಉತ್ತೇಜನ ಕೊಟ್ಟಿದ್ದಾರೆ. ಉತ್ತೇಜನ ಕೊಡುವುದು ಅಂದರೆ ತಮ್ಮ ತಮ್ಮ ಮಕ್ಕಳಿಗೆ ಕೊಡುವುದಲ್ಲ. ಇಲ್ಲಿರುವವರು ಯಾರೂ ರಕ್ತಸಂಬಂಧಿಗಳಲ್ಲ, ಎಲ್ಲರೂ ಭಕ್ತಿ ಸಂಬಂಧದವರಿಗೆ ಪ್ರತಿಭಾ ಪುರಸ್ಕಾರ ಕೊಡುತ್ತಿರುವುದು ಇದೇ ಜಂಗಮ ತತ್ವ ಎಂದರು.

ಮಠ ಮಾನ್ಯಗಳು ಮಾಡುವಂತಹ ಕೆಲಸವನ್ನು ಒಂದು ಕುಟುಂಬದವರು ಮಾಡುತ್ತಿದ್ದಾರೆ. ತಮ್ಮ ಹಿರಿಯ ಮಾರ್ಗದರ್ಶನದಲ್ಲಿ ಸಂಸ್ಕಾರ ಇಟ್ಟುಕೊಂಡು ಅಜ್ಜಂಪುರ ಶೆಟ್ರು ಮನೆತನದವರು ಸುಮಾರು 21 ವರ್ಷದಿಂದ ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಾ ಬಂದಿದ್ದಾರೆ. ಇಂತಹ ಕುಟುಂಬದವರು ಸ್ವಾಮಿಗಳಿಗಿಂತ ಮಹಾಸ್ವಾಮಿಗಳು ಎಂದರು.

ಗೌರವ ಸ್ವೀಕರಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸುರೇಶ ಹನಗವಾಡಿ ಮಾತನಾಡಿ, ಇಂದು ಇಲ್ಲಿ ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಲ್ಲದೇ ಅವರ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿಭೆಗಳ ಪರಿಶ್ರಮಕ್ಕೆ ಬೆನ್ನೆಲುಬಾಗಿ ನಿಂತು ಎಷ್ಟೋ ತ್ಯಾಗಗಳನ್ನು ಮಾಡಿರುವವರು ತಾಯಂದಿರು. ಈ ಪುರಸ್ಕಾರದಿಂದ ನಿಮಗೆ ದೇವರು ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡಿ, ಒಬ್ಬ ಸಮಾಜದಲ್ಲಿ ಸಮಾಜ ಕಟ್ಟುವ ದೇಶ ಕಟ್ಟುವ ಕಾರ್ಯದಲ್ಲಿ ನೀವೆಲ್ಲರೂ ತೊಡಗಿಕೊಳ್ಳಿರಿ. ಯುಪಿಎಸ್‌ಸಿಯಲ್ಲಿ 2025ನೇ ಸಾಲಿನಲ್ಲಿ ರಾಜ್ಯಕ್ಕೆ ಪ್ರಥಮ, ರಾಷ್ಟ್ರಕ್ಕೆ 53ನೇ ರ‍್ಯಾಂಕ್ ವಿಜೇತರಾದ ಕಿರಣ್ ಸಣ್ಣಪ್ಪ ಕಮತೆಯವರ ಸಾಧನೆ ಈ ಪ್ರತಿಭೆಗಳಿಗೆ ದಾರಿದೀಪವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಕೀರ್ತಿ ತಂದಂತಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಎ.ಎಂ.ಪ್ರಕಾಶ ಅಜ್ಜಂಪುರ ಶೆಟ್ರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ. ಎಸ್.ಎಂ.ಎಲಿ, ಯುಪಿಎಸ್‌ಇಯಲ್ಲಿ ರಾಜ್ಯಕ್ಕೆ ಪ್ರಥಮರಾದ ಚಿಕ್ಕೋಡಿಯ ಕಿರಣ್ ಸಣ್ಣಪ್ಪ ಕಮತೆ, ಅಜ್ಜಂಪುರ ಶಂಭುಲಿಂಗಪ್ಪ, ಅಜ್ಜಂಪುರ ರಾಜಣ್ಣ, ಡಾ. ಎ.ಎಂ. ರಾಜಶೇಖರ್, ಷಡಕ್ಷರಿ, ಅಜ್ಜಂಪುರ ವಿಜಯಕುಮಾರ, ಅಜ್ಜಂಪುರ ಮುತ್ತಣ್ಣ, ಪ್ರತಾಪ್, ಹಾಸಬಾವಿ ಶಿವಕುಮಾರ, ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಅಕ್ಕ ಮಹಾದೇವಿ ಸಮಾಜದ ತಾಯಂದಿರು ಪ್ರಾರ್ಥಿಸಿದರೆ, ಸುವಿಧಾ ಅಜ್ಜಂಪುರ ಶೆಟ್ರು ಸ್ವಾಗತಿಸಿ, ಪೂಜಾ ಅಜಯ್ ವಂದಿಸಿದರು. ನಮ್ರತಾ ಕಾರ್ಯಕ್ರಮ ನಿರೂಪಿಸಿದರು.

- - -

-12ಕೆಡಿವಿಜಿ35: ದಾವಣಗೆರೆಯಲ್ಲಿ ಅಜ್ಜಂಪುರ ಶೆಟ್ರು ಪ್ರತಿಭಾ ಪ್ರತಿಷ್ಠಾನದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.