ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ತಜ್ಞ ವೈದ್ಯರ ಸೇವೆಯ ಕೊರತೆಯಾಗದಂತೆ ವಯೋನಿವೃತ್ತಿಯ ನಂತರ ಐದು ವರ್ಷ ಸೇವೆಯಲ್ಲಿ ಮುಂದುವರಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.ಇಲ್ಲಿನ ಜಯಚಾಮರಾಜೇಂದ್ರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ಭೇಟಿ ಮಾಡಿದ ನಂತರ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ನೀಡುವ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ವಂಚನೆಯಾಗ ಕೂಡದು. ಆರೋಗ್ಯ ಇಲಾಖೆಯಲ್ಲಿ ತಜ್ಞ ವೈದ್ಯರ ಕೊರತೆಯೂ ಇದೆ. ಈ ಸಲುವಾಗಿ ನಿವೃತ್ತಿಯ ನಂತರವೂ ತಜ್ಞ ವೈದ್ಯರು ಹಾಗೂ ಟೆಕ್ನಿಶಿಯನ್‍ಗಳನ್ನು ಮುಂದುವರಿಸಲು ಯೋಚಿಸಲಾಗಿದೆ. ನಿಮಗಿರುವ ಕೊರತೆಯನ್ನು ನನ್ನ ಗಮನಕ್ಕೆ ತರಬೇಕು ಎಂದೂ ಅವರು ಆದೇಶಿಸಿದರು.
ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದಕ್ಕಿಂತ ಮುಖ್ಯವಾಗಿ ಇರುವ ಆಸ್ಪತ್ರೆಗಳಿಗೆ ಸಿಬ್ಬಂದಿ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವ ಅಗತ್ಯವಿದೆ. ಬಡವರು ಚಿಕಿತ್ಸೆಯಿಂದ ವಂಚಿತರಾಗಬಾರದು. ಜನ ಸಾಮಾಜ್ಯರಿಗೆ ನಿಮ್ಮ ಬಗ್ಗೆ ಸಂಶಯ ಬಾರದಂತೆ ಕೆಲಸ ಮಾಡಿ. ಸಿಬ್ಬಂದಿ ಸರಿಯಾಗಿ ಕೆಲಸ ಮಾಡದಿದ್ದರೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಜನರ ಆರೋಪಕ್ಕೆ ಗುರಿ ಆಗಬೇಕಾಗುತ್ತದೆ. ನಿಮ್ಮ ನಡುವೆ ಟೀಂ ವರ್ಕ್ ಎಂದೂ ಸಿಬ್ಬಂದಿಗೆ ತಾಕೀತು ಮಾಡಿದರು.ಹೆರಿಗೆ ವಾರ್ಡಿಗೆ ಒದಗಿಸಲಾಗಿರುವ ಬೆಡ್‍ಗಳು ಕಿರಿದಾಗಿದ್ದು ತಾಯಿ ಮಗು ಮಲಗುವುದಕ್ಕೆ ಸಾಧ್ಯವಾಗದಿರುವುದನ್ನು ಶಾಸಕ ಆರಗ ಜ್ಞಾನೇಂದ್ರ ಸಚಿವರ ಗಮನಕ್ಕೆ ತಂದರು. ಇದೇ ವೇಳೆ ನವಜಾತ ಶಿಶುವಿಗೆ ಹೊದಿಸಿದ್ದ ಹೊಲಸು ಬಟ್ಟೆಯನ್ನು ಗಮನಿಸಿದ ಸಚಿವರು, ಆಸ್ಪತ್ರೆಯಲ್ಲಿ ಇನ್ನು ಮುಂದಕ್ಕೆ ಶಿಶುಗಳಿಗೆ ಶುಭ್ರ ಬಟ್ಟೆಯ ಕೊರತೆಯಾಗಕೂಡದು. ಬಾಣಂತಿಯರಿಗೆ ಸಿಗುವ ಸವಲತ್ತುಗಳಲ್ಲಿ ವಂಚನೆಯಾಗದಂತೆಯೂ ನಿಗಾ ವಹಿಸಬೇಕು. ಬಡವರಿಗೆ ಆಸ್ಪತ್ರೆಯಲ್ಲಿ ಸಿಗದ ರಕ್ತ ಪರೀಕ್ಷೆ ಮುಂತಾದ ಟೆಸ್ಟ್‌ಳನ್ನು ಆಸ್ಪತ್ರೆಯ ವೆಚ್ಚದಲ್ಲಿಯೇ ಒದಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಹೊರಗುತ್ತಿಗೆ ಆಧಾರದ ನೌಕರರಿಗೆ ಸಕಾಲದಲ್ಲಿ ವೇತನ ಬಿಡುಗಡೆಯಾಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಳಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಗ್ಗೆ ಸಹಾನುಭೂತಿ ಅಗತ್ಯ, ಸರಿಯಾಗಿ ವೇತನ ನೀಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ಮೊಕದ್ದಮೆ ದಾಖಲಿಸಬೇಕು. ಸಮಗ್ರ ವಿವರವನ್ನು ಕೊಡಿ ರಾಜ್ಯಾದ್ಯಂತ ಇರುವ ಈ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದರು.
ಎಲ್ಲ ಸವಲತ್ತಗಳೂ ಇರುವ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಯಾಕಾಗಿ ಮಣಿಪಾಲ ಮತ್ತು ಕರಾವಳಿಯ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸುವ ಅಗತ್ಯವಿದ್ದು ಕ್ರಮ ಕೈಗೊಳ್ಳುತ್ತೇನೆ. ಸರ್ಕಾರಿ ಆಸ್ಪತ್ರೆ ಬಗ್ಗೆ ಸಾರ್ವಜನಿಕರ ಸಹಕಾರ ಬೇಕಿದೆ. ಕ್ರಿಕೆಟ್ ಮುಂತಾದ ಕ್ರೀಡಾ ಚಟುವಟಿಕೆಗಳಿಗೆ ಲಕ್ಷಾಂತರ ಹಣ ವಿನಿಯೋಗಿಸುವವರು ಸರ್ಕಾರಿ ಆಸ್ಪತ್ರೆಯ ಅಗತ್ಯಗಳಿಗೂ ಒಂದಿಷ್ಟು ನೆರವು ನೀಡಿದರೆ ಜನರಿಗೆ ಉತ್ತಮ ಸೇವೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮೊಟ್ಟೆ ಒದಗಿಸುವ ಸಲುವಾಗಿ ಸಾವಿರಾರು ಕೋಟಿ ಹಣ ನೀಡಿರುವ ಅಜೀಂ ಪ್ರೇಂಜೀಯವರ ಬಗ್ಗೆ ಮಾಧ್ಯಮದವರು ಈವರೆಗೆ ಕನಿಷ್ಠ ಪ್ರಶಂಸೆ ವ್ಯಕ್ತಪಡಿಸದಿರುವುದು ವಿಷಾದನೀಯ ಎಂದರು.
ಸಚಿವರನ್ನು ಸ್ವಾಗತಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಎರಡನೇ ಬಾರಿಗೆ ಆರೋಗ್ಯ ಸಚಿವರಾಗಿರುವ ಯು.ಟಿ. ಖಾದರ್ ಸಮರ್ಥ ಆಡಳಿತಗಾರರಾಗಿದ್ದು ಇಲಾಖೆಯ ಬಗ್ಗೆಯೂ ಪೂರ್ಣ ಅರಿವನ್ನು ಹೊಂದಿದ್ದಾರೆ. ತಾಲೂಕಿನ ಆರೋಗ್ಯ ಕ್ಷೇತ್ರದ ಸಮಸ್ಯೆಯ ಬಗ್ಗೆ ಸಮಗ್ರವಾಗಿ ಸಚಿವರ ಗಮನಕ್ಕೆ ತಂದಿದ್ದು ಈ ಬಗ್ಗೆ ಪೂರ್ಣ ಭರವಸೆಯೂ ಇದೆ ಎಂದರು.ಸಭೆಯಲ್ಲಿ ಕೆಪಿಸಿಸಿ ವಕ್ತಾರರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ,ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಡಿಎಚ್‍ಓ ಡಾ. ನಟರಾಜ್, ಜೆಸಿ ಆಸ್ಪತ್ರೆ ವೈಧ್ಯಾಧಿಕಾರಿ ಡಾ. ಅರವಿಂದ್ ಮತ್ತು ಆಸ್ಪತ್ರೆಯ ಸಿಬ್ಬಂದಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ಇದ್ದರು.
- - --11ಟಿಟಿಎಚ್ 01:
ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್.ಎಂ. ಮಂಜುನಾಥಗೌಡ ಇದ್ದರು.