ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಶಿಕ್ಷಣ ಎಂದರೆ ಬರೀ ಪುಸ್ತಕದ ಜ್ಞಾನ ಅಲ್ಲ. ಅದು, ಕೌಶಲ್ಯ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಒಂದು ಪ್ರಕ್ರಿಯೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಕಳಾಸಪುರದ ವಿನಾಯಕ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ನಡೆದ ವಿನಾಯಕ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ, ಸಮಾಜದ ಸುಧಾರಣೆ ಮತ್ತು ಉತ್ತಮ ಭವಿಷ್ಯಕ್ಕೆ ಶಿಕ್ಷಣದ ಅವಶ್ಯಕತೆ ಇದೆ. ಈ ಮಾತನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದರು.
ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ, ಮಾನವೀಯತೆ, ಸಚ್ಛಾರಿತ್ರ್ಯ, ಉತ್ತಮ ಆಲೋಚನೆಗಳು ಬೆಳೆಯುತ್ತವೆ. ಆರ್ಥಿಕ ಸ್ವಾವಲಂಬನೆ ಜೀವನ ನಿರ್ವಹಣೆಗೆ ಸಹಕಾರಿ. ಶಿಕ್ಷಣ ಕಲೆತರೆ ಸಾಮಾಜಿಕ ಜಾಗೃತಿ ಬರುತ್ತದೆ ಎಂದ ಅವರು, ವ್ಯಕ್ತಿಯನ್ನ ಪ್ರಭುದ್ಧಾರರಾಗಿ ಮಾಡಿ ಸುತ್ತಮುತ್ತಲ ಸಮಸ್ಯೆಗಳಿಗೆ ಸಂವೇದನಶೀಲರಾಗಿ ಸ್ಪಂದಿಸುವವರಾಗಬೇಕು ಎಂದು ಕರೆ ನೀಡಿದರು.ವಿದ್ಯೆಯೆಂಬುವುದು ಸಮಾಜವನ್ನು ಮುನ್ನಡೆಸಿಕೊಂಡು ಹೋಗಲು ಇರುವ ಜ್ಞಾನ. ಜ್ಞಾನಕ್ಕೆ ಸಂಸ್ಕಾರ ಇದ್ದರೆ ಮಾತ್ರ ಪರಿಪೂರ್ಣ ಆಗಲು ಸಾಧ್ಯ. ಸಂಸ್ಕಾರಯುತ ಶಿಕ್ಷಣ ಬೇಕು ಎಂದರು.
ಒಂದು ಶಾಲೆಯ ಯಶಸ್ಸು, ಆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಕೈಯಲ್ಲಿ ಇರುತ್ತದೆ. ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ದಾರಿಯಲ್ಲಿ ಸಾಗಿದರೆ, ಆ ಶಾಲೆಯ ಮಕ್ಕಳು ಮುಂದೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮಾತನಾಡಿ, ವಿದ್ಯೆಯೆಂಬುವುದು ಸಮಾಜವನ್ನು ಮುನ್ನಡೆಸಿ ಕೊಂಡು ಹೋಗಲು ಇರುವ ಸಾಧನಾ. ಜ್ಞಾನ, ಪರಿಜ್ಞಾನ ಇದ್ದರೆ ಅದು ಪರಿಪೂರ್ಣ ಆಗುವುದಿಲ್ಲ ಜ್ಞಾನಕ್ಕೆ ಸಂಸ್ಕಾರ ಇದ್ದರೆ ಮಾತ್ರ ಪರಿಪೂರ್ಣ ಆಗಲು ಸಾಧ್ಯ. ಅಂತಹ ಶಿಕ್ಷಣ ಬೇಕು ಎಂದು ಹೇಳಿದರು.
ವಿನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎನ್. ಚಂದ್ರಮೌಳಿ ಅವರು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಸೋನಾಲ್‌ಗೌಡ, ತಾಪಂ ಮಾಜಿ ಅಧ್ಯಕ್ಷ ಮೋಹನ್, ವಿಎಸ್‌ಎಸ್‌ಎನ್ ಅಧ್ಯಕ್ಷ ಸೋಮಶೇಖರ್, ಮಾಡೆಲ್ ಶಾಲೆಯ ಕಾರ್ಯದರ್ಶಿ ವಿನಾಯಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಬಿ.ವಿ.ಗಂಗಾಧರ್, ಆಡಳಿತ ಮಂಡಳಿಯವರು ಹಾಜರಿದ್ದರು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ. ಮಲ್ಲಾರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.