ಚಿತ್ತಾಪುರದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿತ: ಆರ್.ರುದ್ರಯ್ಯ ಆರೋಪ । ಎಸ್‌ಐಆರ್ ಕುರಿತು ಕಾಂಗ್ರೆಸ್ ಅಪಪ್ರಚಾರ: ಆಕ್ರೋಶ
----ಕನ್ನಡಪ್ರಭ ವಾರ್ತೆ ಚಿತ್ತಾಪುರ
ರಾಜ್ಯದ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ತಾವು ಪ್ರತಿನಿಧಿಸುವ ತಮ್ಮ ಮತಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಹರಿಸದೇ ಪ್ರತಿದಿನ ಆರ್ ಎಸ್ಸೆಸ್ ಬಗ್ಗೆ ಮಾತನಾಡುವುದೇ ತಮ್ಮ ನಿತ್ಯದ ಕೆಲಸ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಆರ್. ರುದ್ರಯ್ಯ ಆರೋಪಿಸಿದರು.ಪಟ್ಟಣದ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಕ್ಷೇತ್ರಕ್ಕೆ ಭೇಟಿ ನೀಡಿ ಅವುಗಳನ್ನು ಪರಿಹರಿಸುವುದು ಮತ್ತು ಅಭಿವೃದ್ಧಿ ಕುರಿತು ಚಿಂತನೆ ಮಾಡದೇ ಬೆಂಗಳೂರಿನಲ್ಲಿ ಕುಳಿತು ಅಧಿಕಾರ ಚಲಾಯಿಸುತ್ತಿದ್ದಾರೆ. ಅವರಿಗೆ ತಾಲೂಕಿನ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ, ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಇದರಿಂದ ತಾಲೂಕಿನ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ವಸತಿ ನಿಲಯಗಳಲ್ಲಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿರುವುದು ಮತ್ತು ಮಕ್ಕಳು ರಸ್ತೆಗಿಳಿದು ಪ್ರತಿಭಟನೆ ಮಾಡಿರುವದೇ ಸಾಕ್ಷಿಯಾಗಿದೆ. ಕ್ಷೇತ್ರದಲ್ಲಿ ಇಷ್ಟೆಲ್ಲಾ ಆದರೂ ಕ್ಷೇತ್ರಕ್ಕೆ ಭೇಟಿ ನೀಡದೇ ಇರುವದು ಅವರ ಬೇಜವಬ್ದಾರಿ ತೋರಿಸುತ್ತದೆ ಎಂದರು.
ಎಸ್‌ಐಆರ್ ಕುರಿತು ಕಾಂಗ್ರೆಸ್ ಅಪಪ್ರಚಾರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬರಿಗೂ ಇರಬೇಕು ಮತ್ತು ಒಂದೇ ಕಡೆ ಇರಬೇಕು ವಲಸೆ ಹೋಗಿರುವ ಮತ್ತು ವಿದೇಶಕ್ಕೆ ಹೋಗಿರುವವರನ್ನು ಮತ್ತು ಬೋಗಸ್ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಸ್‌ಐಅರ್ ಮೂಲಕ ಪರಿಷ್ಕರಣೆ ಮಾಡುತ್ತಿದೆ.
ಆದರೆ ಕಾಂಗ್ರೆಸ್ ಪಕ್ಷವು ದಲಿತರನ್ನು, ಅಲ್ಪಸಂಖ್ಯಾತರನ್ನು ಹೊರಗಿಡುವ ಉದ್ದೇಶದಿಂದ ಎಸ್‌ಐಆರ್ ಮಾಡುತ್ತಿದೆ ಎಂದು ಸುಳ್ಳು ಅಪ ಪ್ರಚಾರ ಮಾಡುತ್ತಿದೆ ಎಂದರು.
ಖರ್ಗೆ ಕುಟುಂಬವು ಕಳೆದ ೪೦ ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ ದಲಿತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಒಮ್ಮೆಯೂ ಮಾಡಿಲ್ಲ. ೫೩ ಸಾವಿರ ಕೋಟಿ ದಲಿತರ ಅನುದಾನ ದುರ್ಬಳಕೆ ಆಗಿದ್ದರೂ ಒಮ್ಮೆಯೂ ಧ್ವನಿ ಎತ್ತಿಲ್ಲಾ ಮತ್ತು ಒಬ್ಬರೇ ಒಬ್ಬರೂ ದಲಿತ ಮುಖಂಡರನ್ನು ರಾಜಕೀಯವಾಗಿ ಬೆಳೆಸಿಲ್ಲಾ ಅವರದೇನಿದ್ದರೂ ದಲಿತರ ಹೆಸರಲ್ಲಿ ರಾಜಕೀಯ ಮಾಡಿ ತಮ್ಮ ಏಳಿಗೆಯನ್ನು ಮಾಡಿಕೊಳ್ಳುವುದು ಎಂದು ಆರೋಸಿದರು.ಬಿಜೆಪಿ ಮುಖಂಡರಾದ ವಿಶಾಲ ದರ್ಗಿ, ನಾಗರಾಜ ಬಂಕಲಗಾ, ಆನಂದ ಪಾಟೀಲ್ ನರಬೋಳಿ, ದೀಪಕ್ ಹೊಸೂರಕರ್, ಸುರೇಶ ಬೆನಕನಹಳ್ಳಿ, ಪ್ರಭು ಗಂಗಾಣಿ, ದಶರಥ ದೊಡ್ಡನಿ, ರಮೇಶ ಬೊಮ್ಮನಳ್ಳಿ, ಚಂದ್ರಶೇಖರ ಉಟಗೂರ, ಆನಂದ ಇಂಗಳಗಿ, ಅಕ್ಕಮಹಾದೇವಿ, ರವಿ ಮದನಕರ್ ಇದ್ದರು.
ಪೋಟೋ: ೧೨-೭ ಸಿಟಿಪಿಅರ್ ೧ಚಿತ್ತಾಪುರ ಪಟ್ಟಣದ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಆರ್ . ರುದ್ರಯ್ಯ ಸುದ್ದಿಗೋಷ್ಠಿ ನಡೆಸಿದರು.