ಪಿಯು ಪರೀಕ್ಷೆ ಸುಸೂತ್ರವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಜಿ.ಪ್ರಭು

KannadaprabhaNewsNetwork |  
Published : Feb 25, 2026, 01:15 AM IST
 ಸಿಕೆಬಿ-1 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಕುರಿತು   ಪೂರ್ವ ಭಾವಿಸಿದ್ದತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಸಂಪೂರ್ಣ ಜವಾಬ್ದಾರಿ ಹೊಂದಿದ್ದು, ನಿಯಮಗಳಂತೆ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪರೀಕ್ಷಾ ಪಾವಿತ್ರತೆ ಕಾಪಾಡಿಕೊಂಡು ಗುಣಮಟ್ಟದ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ - 1ನ್ನು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತು ಪೂರ್ವ ಭಾವಿಸಿದ್ದತಾ ಸಭೆ ನಡೆಸಿ ಮಾತನಾಡಿ, ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 24 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ- 6 ಬಾಗೇಪಲ್ಲಿ ತಾಲೂಕಿನಲ್ಲಿ-3, ಗೌರಿಬಿದನೂರು ತಾಲೂಕಿನಲ್ಲಿ- 5, ಶಿಡ್ಲಾಘಟ್ಟ -3, ಗುಡಿಬಂಡೆ -1 ಹಾಗೂ ಚಿಂತಾಮಣಿ ತಾಲೂಕಿನಲ್ಲಿ-6 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 12,986 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರವೇಶ ಪತ್ರಗಳನ್ನು ಆನ್ಲೈನ್ ಮೂಲಕ ಎಲ್ಲ ಕಾಲೇಜುಗಳಿಗೆ ವಿತರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಸಂಪೂರ್ಣ ಜವಾಬ್ದಾರಿ ಹೊಂದಿದ್ದು, ನಿಯಮಗಳಂತೆ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಬೇಕು. ಪರೀಕ್ಷಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಹಾಗೂ ಆಸನಗಳ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕಾಲೇಜು ಆವರಣದಲ್ಲಿ ಸ್ಪಷ್ಟವಾಗಿ ಸೂಚನಾ ಫಲಕದಲ್ಲಿ ಪರೀಕ್ಷಾ ದಿನದಂದು ಪ್ರಕಟಿಸುವುದು ಎಂದು ಸೂಚನೆ ನೀಡಿದರು.ಅದರಂತೆ ಇನ್‌ಸ್ಟಾಗ್ರಾಂ, ವ್ಯಾಟ್ಸಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗಳಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಇಂತಹ ವದಂತಿ ಹರಡಿಸುವವರ ವಿರುದ್ಧವೂ ಕ್ರಮ ಆಗಲಿದೆ. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಸಕಲ ಭದ್ರತೆಯಲ್ಲಿ ಜವಾಬ್ದಾರಿಯುತ ಅಧಿಕಾರಿಗಳ ವ್ಯಾಪ್ತಿಯಲ್ಲಿ ಇರುವುದರಿಂದ ಆಯಾ ಅಧಿಕಾರಿಗಳು ಹೆಚ್ಚಿನ ಜಾಗೃತಿವಹಿಸಲು ಅವರು ಸೂಚಿಸಿದರು. ಮಾರ್ಗಸೂಚಿಯಂತೆ ಪರೀಕ್ಷೆ ಸಿಸಿಟಿವಿ ಕಣ್ಗಾವಲುನಲ್ಲಿ ನಡೆಸಲು ಹಾಗೂ ವೆಬ್ ಕಾಸ್ಟಿಂಗ್ ನಿರ್ವಹಣೆಗೆ ಸೂಚಿಸಲಾಗಿದೆ. ಪರೀಕ್ಷೆ ಕೊಠಡಿಯೊಳಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ರ್ಫೋನ್, ಮೈಕ್ರೋಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್ ಸಾಧನ ಅನುಮತಿಸಲಾಗುವುದಿಲ್ಲ. ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಯಾಗಲಿ ಮೊಬೈಲ್ ಬಳಕೆಗೆ, ಫೋಟೋಗ್ರಾಫಿಗೆ ಸಂಪೂರ್ಣ ನಿಷೇಧಿಸಲಾಗಿದೆ. ಬೆಳಕಿನ ವ್ಯವಸ್ಥೆ, ಆಸನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು ಎಂದು ತಿಳಿಸಿದರು. ಸುಸೂತ್ರ ಪರೀಕ್ಷೆಗೆ ಪೋಲಿಸ್ ಇಲಾಖೆ, ಖಜಾನೆ ಇಲಾಖೆ, ಸಂಬಂಧಿಸಿದ ಇಲಾಖೆಗಳ ಸಹಕಾರಕ್ಕೆ ಸೂಚಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ವಸ್ತುಗಳನ್ನು ನಿಯಮಾನುಸಾರ ಠೇವಣಿ ಇರಿಸಿ ಸೂಚಿತ ನಿರ್ದೇಶನದಂತೆ ಖಜಾನಾಧಿಕಾರಿಗಳು ವಿತರಿಸಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಿಂದ ಉತ್ತರ ಪತ್ರಿಕೆಗಳನ್ನು ಪರೀಕ್ಷೆ ಮುಗಿದ ನಂತರ ನೇರವಾಗಿ ಅಂಚೆ ಕಚೇರಿಗೆ ಪೊಲೀಸ್ ಬೆಂಗಾವಲಿನಲ್ಲಿ ತಲುಪಿಸಬೇಕು. ಪರೀಕ್ಷೆ ಕೇಂದ್ರಗಳ ಹೊರಗೆ ಜನಸಂದಣಿ ಇರಕೂಡದು. ಜನಸಂದಣಿ ಮೇಲೆ ನಿಗಾ ಇಡಬೇಕು. ಪರೀಕ್ಷೆ ಕೇಂದ್ರಗಳ ಸ್ವಚ್ಛತೆ, ಸಿಸಿಟಿವಿ ವ್ಯವಸ್ಥೆ, ಬಳಸುವ ವಾಹನಗಳು, ವೆಬ್ ಕಾಸ್ಟಿಂಗ್ ಸರಿಯಾಗಿರಬೇಕು. ನಿರಂತರ ವಿದ್ಯುತ್ ಸೌಲಭ್ಯ ಇರಬೇಕು. ಈ ಎಲ್ಲ ಸೌಲಭ್ಯಗಳಿಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ.ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಇರಲಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿನ ಸೂಚನೆಗಳನ್ನು ಓದಿಕೊಂಡು ಪರೀಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ದಿನದಂದು ಅರ್ಧ ಗಂಟೆ ಮುಂಚಿತವಾಗಿ ಹಾಜರಿರಬೇಕು. ಜಿಲ್ಲಾಡಳಿತವು ಪರೀಕ್ಷಾ ವಾತಾವರಣಕ್ಕೆ ಪೂರಕವಾದ ಸಕಲ ವ್ಯವಸ್ಥೆಯನ್ನು ಕಲ್ಪಿಸಿದ್ದು, ನಿರ್ಭಿತಿಯಿಂದ ಪರೀಕ್ಷೆಯನ್ನು ಎದುರಿಸಿ ಜಿಲ್ಲೆಗೆ ಉತ್ತಮ ಫಲಿತಾಂಶ ತರುವಂತೆ ವಿದ್ಯಾರ್ಥಿಗಳಿಗೆ ಈ ವೇಳೆ ಶುಭಕೋರಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ಆದಿಶೇಷರಾವ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಸಿಕೆಬಿ-1 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ಕುರಿತು ಪೂರ್ವ ಭಾವಿಸಿದ್ದತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿ ಪರಿಷ್ಕರಣೆಗೆ ಆಗ್ರಹ
27ಕ್ಕೆ ಬಸವತತ್ವ ಪೀಠದ ಸುವರ್ಣ ಮಹೋತ್ಸವ