ಸಮರ್ಥವಾಗಿ ಸವಾಲಿನ ದಿನ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ

KannadaprabhaNewsNetwork |  
Published : Oct 21, 2023, 12:30 AM ISTUpdated : Oct 21, 2023, 12:31 AM IST
ಫೋಟೊ: ೨೦ಎಚ್‌ಎನ್‌ಎಲ್೪ | Kannada Prabha

ಸಾರಾಂಶ

ಮಳೆಯ ತೀವ್ರ ಕೊರತೆಯಿಂದ ಈಗಲೇ ನೀರು ಮತ್ತು ವಿದ್ಯುತ್‌ನ ಅಭಾವ ಸೃಷ್ಟಿಯಾಗಿದೆ. ನವೆಂಬರ್, ಡಿಸೆಂಬರ್‌ನಲ್ಲಿ ಮಳೆ ಬಾರದೇ ಇದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ಮುಂದಿನ ಸವಾಲಿನ ದಿನಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ತಾಲೂಕಿನ ಪಿಡಿಒಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಮಳೆಯ ತೀವ್ರ ಕೊರತೆಯಿಂದ ಈಗಲೇ ನೀರು ಮತ್ತು ವಿದ್ಯುತ್‌ನ ಅಭಾವ ಸೃಷ್ಟಿಯಾಗಿದೆ. ನವೆಂಬರ್, ಡಿಸೆಂಬರ್‌ನಲ್ಲಿ ಮಳೆ ಬಾರದೇ ಇದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದ್ದು, ಮುಂದಿನ ಸವಾಲಿನ ದಿನಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ತಾಲೂಕಿನ ಪಿಡಿಒಗಳಿಗೆ ಸೂಚಿಸಿದರು.

ಶುಕ್ರವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಪಿಡಿಒಗಳೊಂದಿಗೆ ವಿಶೇಷ ಸಭೆ ನಡೆಸಿದ ಅವರು, ಸರ್ಕಾರ ಈಗಾಗಲೇ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಸದ್ಯ ತಾಪಮಾನ ಬೇಸಿಗೆಗಿಂತ ಕಡಿಮೆ ಇಲ್ಲ ಎನ್ನುವಂತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಸಮಸ್ಯೆ ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕಿದ್ದು, ಸಂಪನ್ಮೂಲ ಕ್ರೋಢೀಕರಿಸಿ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಕೊಳವೆಬಾವಿ ಕೊರೆಯಿಸಲು, ಪೈಪ್‌ಲೈನ್ ಅಳವಡಿಸಲು ಅಗತ್ಯ ಅನುದಾನಕ್ಕೆ ಸರ್ಕಾರದತ್ತ ಕಾಯ್ದು ಕುಳಿತುಕೊಳ್ಳುವುದು ಬೇಡ. ಮುಂದಿನ ೭ ತಿಂಗಳು ಪ್ರತಿದಿನವೂ ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಿದ್ದು, ಅದಕ್ಕಾಗಿ ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗಬೇಕಿದೆ. ಜನ, ಜಾನುವಾರುಗಳಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಬಹಳಷ್ಟು ಪಿಡಿಒಗಳು ಕೇಂದ್ರ ಸ್ಥಾನಗಳಲ್ಲಿ ಇರುತ್ತಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ವಾರ್ಡುಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳಿವೆ. ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಸಂಕಷ್ಟಗಳು ನೆಲೆಯೂರಿವೆ. ಇಂಥ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ. ನಿರ್ಲಕ್ಷ್ಯ ವಹಿಸುವ, ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ಸಹಿಸುವುದು ಅಸಾಧ್ಯ. ಸಮಸ್ಯೆಗಳನ್ನು ಅರ್ಥೈಸಿಕೊಂಡು ಕಳಕಳಿಯಿಂದ ಕೆಲಸ ಮಾಡದಿದ್ದರೆ ಕ್ರಮ ಜರುಗಿಸಲು ಹಿಂದೆ, ಮುಂದೆ ನೋಡುವುದಿಲ್ಲ ಎಂದು ಶ್ರೀನಿವಾಸ ಮಾನೆ ಎಚ್ಚರಿಸಿದರು.

ಸಮಯ ನೀಡಿ, ಆಸಕ್ತಿಯಿಂದ ಪಿಡಿಒಗಳು ಕೆಲಸ ನಿರ್ವಹಿಸಲು ಮುಂದಾದರೆ ಅರ್ಧದಷ್ಟು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ಜನ ಉದ್ಯೋಗಕ್ಕೆ ವಲಸೆ ತೆರಳುವಂತಾಗಬಾರದು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ದಿನ ೧೫೦ ದಿನಗಳಿಗೆ ಹೆಚ್ಚಲಿದ್ದು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮುಂದಿನ ಮೇ ತಿಂಗಳವರೆಗೆ ಕನಿಷ್ಠ ₹ಒಂದು ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದ ಶಾಸಕ ಮಾನೆ, ನವೆಂಬರ್ ಮೊದಲ ವಾರದ ಒಳಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡಿ ಎಂದು ಸೂಚನೆ ನೀಡಿದರು.

ಸರ್ಕಾರದ ಯೋಜನೆಗಳ ಅನುಷ್ಠಾನ, ಅನುದಾನ ಸದ್ಭಳಕೆಯಲ್ಲಿ ವಿಳಂಬ ಸಲ್ಲದು. ಆಡಳಿತ ವೈಫಲ್ಯಕ್ಕೆ ನಿಮ್ಮನ್ನೇ ಹೊಣೆ ಮಾಡಲಾಗುವುದು. ಹಿಂದೆ ಕೊರೋನಾ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಿರುವ ಅನುಭವ ನಿಮ್ಮ ಜೊತೆಗಿದೆ. ಮತ್ತೀಗ ನಾವೆಲ್ಲರೂ ಬರ ನಿರ್ವಹಣೆಗೆ ಸನ್ನದ್ಧರಾಗಬೇಕಿದೆ. ಪಿಡಿಒಗಳ ಮೇಲಿನ ಒತ್ತಡ ಕಡಿಮೆ ಮಾಡಲು ಒಬ್ಬರಿಗೆ ಒಂದೇ ಪಂಚಾಯಿತಿಯ ಜವಾಬ್ದಾರಿ ವಹಿಸಲು ಪ್ರಯತ್ನಿಸುತ್ತಿದ್ದು, ಗಂಭೀರತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.

ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ನೀರಿನ ಸಮಸ್ಯೆ ಎದುರಿಸಲು ಈಗಾಗಲೇ ಜಿಲ್ಲಾಡಳಿತ ಟಾಸ್ಕ್‌ ಫೋರ್ಸ್ ಖಾತೆಗೆ ₹೮೦ ಲಕ್ಷ ಜಮೆ ಮಾಡಿದೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎನ್ನುವುದನ್ನು ಈಗಲೇ ಗುರುತಿಸಿ ವರದಿ ಸಲ್ಲಿಸಿ. ಮೇವು ಸಂಗ್ರಹಣೆ ಮಾಡಿಕೊಳ್ಳಲು ಗಮನ ಹರಿಸಿ. ಹೊಸ ಕಂದಾಯ ಗ್ರಾಮ, ಉಪ ಗ್ರಾಮಗಳ ರಚನೆಗೆ ವರದಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಬೇಕು. ತಾಲೂಕಿನಲ್ಲಿರುವ ಅನಧೀಕೃತ ಮನೆಗಳನ್ನು ಅಧೀಕೃತಗೊಳಿಸಲು ವರದಿ ನೀಡಿ ಎಂದು ಸೂಚಿಸಿದರು.

ತಾಪಂ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ಯೋಜನಾಧಿಕಾರಿ ಚಂದ್ರಶೇಖರ ಸೂಡಂಬಿ ಸಭೆಯಲ್ಲಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ