ಕೋಲಾರ: ಮುಂಬರುವ ದಿನಗಳಲ್ಲಿ ಬರ ಪರಿಸ್ಥಿತಿ ಎದುರಿಸಲು ಎಲ್ಲ ಅಧಿಕಾರಿಗಳು ಸಜ್ಜಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡಾ ಕಡಿಮೆ ಮಳೆ ಆಗಿದೆ, ಆದರೆ ಮಳೆ ಆಗಬೇಕಾದ ಸಮಯಕ್ಕೆ ಆಗಲಿಲ್ಲ ಆದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ರಾಗಿ ಬಿತ್ತನೆ ಆಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಈಗಾಗಲೇ ಬರ ಎದುರಿಸುವ ಸಂಬಂಧ ಸಭೆ ನಡೆಸಿ ಸಂಬಂಧಿಸಿದವರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ತಾಲೂಕುವಾರು ಟಾಸ್ಕ್‌ಪೋರ್ಸ್ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಗಾಗಿ ೯ ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದೆ, ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾದಲ್ಲಿ ಸರಿದೂಗಿಸಿಕೊಳ್ಳಲು ಅನುದಾನ ಲಭ್ಯವಿದೆ. ಇಡೀ ಜಿಲ್ಲೆಯಲ್ಲಿ ಪ್ರಸ್ತುತ ನೀರಿನ ಅಭಾವ ಇರುವುದಿಲ್ಲ. ೨-೩ ಹಳ್ಳಿಗಳಲ್ಲಿ ಮಾತ್ರ ಅಭಾವ ಉಂಟಾಗಿದ್ದು, ಆಯಾ ಹಳ್ಳಿಗಳಲ್ಲಿ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದರು.ಸುದೈವದಿಂದ ಈವರೆಗೆ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವ ಹಾನಿಯಾಗಿಲ್ಲ. ಆದರೆ ೨ ಜಾನುವಾರು ಜೀವ ಹಾನಿಯಾಗಿದೆ. ಅದಕ್ಕಾಗಿ ಪರಿಹಾರ ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಕಳೆದ ಸಭೆಯಲ್ಲಿ ಕೋರಿರುವ ಮಾಹಿತಿಗೆ ಸಂಬಂಧಿತ ಅಧಿಕಾರಿಗಳು ಈವರೆಗೆ ಉತ್ತರ ನೀಡಿಲ್ಲ, ಔಷಧಿ ಮಳಿಗೆಗಳಲ್ಲಿ ಅನಧಿಕೃತವಾಗಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿರುವ ವ್ಯವಸ್ಥೆಯ ವಿರುದ್ಧ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಮಾದಕ ದ್ರವ್ಯಗಳನ್ನು ಜಪ್ತಿ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಬಾರ್ ಮತ್ತು ವೈನ್ ಶಾಪ್‌ಗಳು ನಿಗದಿತ ಅವಧಿಯ ನಂತರವೂ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದ್ದು ಅಬಕಾರಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಈಗಾಗಲೇ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ೫೩ಸಾವಿರ ಹೆಕ್ಟೇರ್ ಜಮೀನಿನಲ್ಲಿ ಪ್ರಮುಖ ಬೆಳೆಯಾದ ರಾಗಿ ಬಿತ್ತನೆ ಮಾಡಲಾಗಿದೆ. ಶೇ.೫೨ ರಷ್ಟು ಬಿತ್ತನೆ ಆಗಿದೆ, ಹಿಂಗಾರು ಹಂಗಾಮಿನಲ್ಲಿ ೨೬೦೦ ಹೆಕ್ಟೇರ್ ಹುರುಳಿ ಬಿತ್ತನೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ೪.೭ ಕೋಟಿ ಬೆಳೆ ಪರಿಹಾರ ೧೦೭೦೦ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಚಿವರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಆಲೂಗಡ್ಡೆ ಬೆಳೆಗೆ ಕಳಪೆ ಬೀಜ ಸರಬರಾಜು ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಈಗಾಗಲೇ ೨ನೇ ಕಂತು ಹಣ ಬಿಡುಗಡೆ ಮಾಡಲಾಗಿದ್ದು ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಉಳಿದ ೨೫೦೦೦ ಫಲಾನುಭವಿಗಳಿಗೆ ಹಣ ತಲುಪುವಂತೆ ಕ್ರಮ ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಗೆ ಸೂಚಿಸಿದರು.
ಸಭೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಕೆ.ವೈ ನಂಜೇಗೌಡ, ಸಮೃದ್ಧಿ ಮಂಜುನಾಥ್, ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್‌ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಜಿಪಂ ಆಡಳಿತಾಧಿಕಾರಿ ಡಾ.ಏಕ್‌ರೂಪ್‌ಕೌರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ, ಕೆ.ಜಿ.ಎಫ್ ಪೊಲೀಸ್ ಅಧೀಕ್ಷಕ ಎಸ್.ಶಾಂತರಾಜು, ಜಿಪಂ ಸಿಇಓ ಪದ್ಮ ಬಸವಂತಪ್ಪ, ಜಿಲ್ಲಾ ಉಪ ಅರಣ್ಯ ವಿಭಾಗಧಿಕಾರಿ ಏಡುಕೊಂಡಲು ಇದ್ದರು.