ಬೇಲೂರು ಕೃಷಿ ಇಲಾಖೆಯ ಎಸ್.ರಂಗಸ್ವಾಮಿ ಮಾಹಿತಿ
ಬೇಲೂರು: ಈಗಾಗಲೇ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದ್ದು, ತಾಲೂಕಿನ ಐದು ಕೃಷಿ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಬೇಲೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ರಂಗಸ್ವಾಮಿ ಹೇಳಿದರು.ಪತ್ರಿಕೆಯೊಂದಿಗೆ ಮಾತನಾಡಿ, ವಾಡಿಕೆಯಂತೆ ೧೬೯ ಮಿಮಿ ಮಳೆಯಾಗಬೇಕಿತ್ತು. ಆದರೆ ಪ್ರಸಕ್ತ ಮುಂಗಾರಿನಲ್ಲಿ ಇಲ್ಲಿಯ ತನಕ ೨೩೮ ಮಿ.ಮೀ. ಮಳೆಯಾಗಿದೆ. ಐದು ಹೋಬಳಿಗಳ ಪೈಕಿ ಹಳೇಬೀಡಿಗೆ ಶೇ ೯೯ ರಷ್ಟು ಮಳೆ ಬಂದಿದೆ. ಈ ನಿಟ್ಟಿನಲ್ಲಿ ಕೃಷಿ ತಮ್ಮ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ೨೦೨೪-೨೫ ಸಾಲಿನಲ್ಲಿ ಇಲಾಖೆಯಿಂದ ೨೩೪೩೦ ಹೆಕ್ಟೇರ್ ಬಿತ್ತನೆ ಕಾರ್ಯದ ಗುರಿ ಹೊಂದಲಾಗಿದೆ. ಇದರಲ್ಲಿ ಪ್ರಮುಖವಾಗಿ ಸುಮಾರು ೧೭ ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ ಗುರಿಯಿದೆ ಎಂದು ಹೇಳಿದರು.
ಐದು ಹೋಬಳಿಯಲ್ಲಿ ರೈತರಿಗೆ ಅಗತ್ಯವಾದ ಮುಸುಕಿನ ಜೋಳ, ರಾಗಿ, ಅಲಸಂದೆ ಇನ್ನಿತರ ಧಾನ್ಯಗಳ ಬಿತ್ತನೆಯನ್ನು ದಾಸ್ತಾನು ಮಾಡಲಾಗಿದೆ. ರೈತರು ಅಗತ್ಯ ದಾಖಲಾತಿಯನ್ನು ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕು. ರೈತರು ಉಳುಮೆ ನಡೆಸಿದ ಬಳಿಕ ದೃಢೀಕರಿಸಿದ ಬಿತ್ತನೆ ಬೀಜಗಳನ್ನು ಹಾಕಬೇಕಿದೆ. ದ್ವಿದಳಧಾನ್ಯ ಬೆಳೆಗಳಿಗೆ ಹೆಚ್ಚಿನ ಒಲವು ನೀಡಬೇಕು ಎಂದು ತಿಳಿಸಿದರು.ರೈತರ ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಂತೆ ತಾಲೂಕಿನ ೭೪ ರಸಗೊಬ್ಬರ ಮಾರಾಟದ ಅಂಗಡಿಯಲ್ಲಿ ಎಲ್ಲಾ ರೀತಿಯ ರಸಗೊಬ್ಬರ ದಾಸ್ತಾನು ಮಾಡಿದೆ. ಕೃತಕ ಅಭಾವ ಸೃಷ್ಟಿಗೆ ಯತ್ನಿಸಿದವರ ವಿರುದ್ಧ ಮತ್ತು ಹೆಚ್ಚಿನ ಬೆಲೆಯಲ್ಲಿ ಮಾರಾಟ ಕಂಡರೆ ಅವರ ಮೇಲೆ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಪ್ರತಿ ರಸಗೊಬ್ಬರದ ಅಂಗಡಿಗಳಲ್ಲಿ ದರಪಟ್ಟಿಯನ್ನು ಪ್ರದರ್ಶಿಸಬೇಕಿದೆ. ಹೆಚ್ಚಿನ ಮಾಹಿತಿಗೆ ರೈತರು ತಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದರು.