ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಹಿರೇಮಲ್ಲನಹೊಳೆ ಗ್ರಾಪಂ ವ್ಯಾಪ್ತಿಯ ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಗ್ರಾಮವು ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಹಿರೇಮಲ್ಲಹನೊಳೆ-ತಾಯಿಟೋಣಿ ಗ್ರಾಮಗಳ ನಡುವೆ ಬರುವ ಅಡ್ಡ ರಸ್ತೆಯಿಂದ ಕೊರಚರಹಟ್ಟಿಗೆ ಹೋಗಬೇಕು. ಆದರೆ ಕೆಲವರು ರಸ್ತೆಯಲ್ಲಿ ಮಣ್ಣಿನ ದಿಬ್ಬ, ಕಲ್ಲು ಅಡ್ಡ ಹಾಕುವ ಮೂಲಕ ದೌರ್ಜನ್ಯ ಮಾಡುತ್ತಾರೆ. ಅತೀ ತುರ್ತು ಸಂದರ್ಭಗಳಲ್ಲಿ ಬೈಕ್, ಕಾರು ತರುವಾಗ ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ ಶೀಘ್ರವೇ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸುಮಾರು ವರ್ಷಗಳಿಂದ ನಾವು ಇದೇ ರಸ್ತೆಯಲ್ಲಿ ಎತ್ತಿನಗಾಡಿ, ಕಾರು, ಬೈಕ್, ಪಾದಾಚಾರಿ ಮೂಲಕ ಕೊರಚರಹಟ್ಟಿಯಿಂದ ಹಿರೇಮಲ್ಲನಹೊಳೆ ಸಂಪರ್ಕ ಮಾಡುತ್ತಿದ್ದೇವೆ. ಆದರೆ ಕೆಲವರು ರಸ್ತೆ ಒತ್ತುವರಿ ಮಾಡಿಕೊಂಡು ತಮ್ಮ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿಯಲ್ಲ. ಯಾರದೋ ಸಿಟ್ಟಿಗೆ ನಮ್ಮಂತ ಬಡವರ ಮೇಲೆ ಹಕ್ಕು ಚಲಾಯಿಸುವುದು ಯಾವ ನ್ಯಾಯ? ಸಾರ್ವಜನಿಕ ರಸ್ತೆ ಎಲ್ಲರ ಬಳಕೆಗೂ ಮುಕ್ತವಾಗಿದೆ. ರಸ್ತೆ ಏನಾದರು ಅವರ ಜಮೀನಿನಲ್ಲಿ ಇದ್ದರೆ ಅಳತೆ ಮಾಡಿಸಿ ಹದ್ದುಬಸ್ತು ಮಾಡಲಿ, ಅದು ಬಿಟ್ಟು ಮುಂದಿನ ಹೊಲದ ರೈತರಿಗೆ ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ವೆಂಕಟೇಶ್, ಮಾಜಿ ಗ್ರಾ.ಪಂ.ಸದಸ್ಯ ರವೀಶ್, ಯುವಮುಖಂಡರಾದ ರುದ್ರೇಶ್, ಸುರೇಶ್ ಸೇರಿದಂತೆ ಮತ್ತಿತರರಿದ್ದರು.