ಆಸ್ಪತ್ರೆಯ ಅಭಿವೃದ್ಧಿ ಸತ್ಯಾಸತ್ಯತೆ ಜನತೆಯ ಮುಂದಿಡಿ: ಅನಂತಮೂರ್ತಿ ಹೆಗಡೆ

KannadaprabhaNewsNetwork |  
Published : Dec 30, 2024, 01:01 AM IST
ಪೊಟೋ೨೯ಎಸ್.ಆರ್.ಎಸ್೧ (ಸುದ್ದಿಗೋಷ್ಠಿಯಲ್ಲಿ ಅನಂತಮೂರ್ತಿ ಹೆಗಡೆ ಮಾತನಾಡಿದರು.) | Kannada Prabha

ಸಾರಾಂಶ

ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿ ಕುರಿತಾಗಿ ಸತ್ಯಾಸತ್ಯತೆಯನ್ನು ಇನ್ನು ವಾರದೊಳಗೆ ಜನತೆಯ ಮುಂದಿಡಬೇಕು ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಶಿರಸಿ: ಒಂದು ವರ್ಷದಿಂದ ಶಿರಸಿಯಲ್ಲಿ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಹಣ ಬಿಡುಗಡೆ ಆಗಲಿ ಎಂಬ ಕಾರಣಕ್ಕೆ ಕಾಟಾಚಾರಕ್ಕೆ ಅಲ್ಪ-ಸ್ಪಲ್ಪ ಕೆಲಸವಾದಂತೆ ತೋರಿಸುತ್ತಿದ್ದಾರೆ. ಈಗ ನಿರ್ಮಾಣಗೊಳ್ಳುತ್ತಿರುವ ಶಿರಸಿಯ ಹೈಟೆಕ್ ಆಸ್ಪತ್ರೆ ಅಪಾಯದಲ್ಲಿದೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಮುತುವರ್ಜಿ ವಹಿಸಿ, ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿ ಕುರಿತಾಗಿ ಸತ್ಯಾಸತ್ಯತೆಯನ್ನು ಇನ್ನು ವಾರದೊಳಗೆ ಜನತೆಯ ಮುಂದಿಡಬೇಕು. ಇಲ್ಲವಾದಲ್ಲಿ ಜ. ೧೩ರಂದು ಎಲ್ಲ ಜನರೊಂದಿಗೆ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವಾರು ಪ್ರತಿಷ್ಠಿತ ಮಾಧ್ಯಮಗಳು ಕಳೆದ ೨೫ ದಿನದ ಹಿಂದೆ ವರದಿ ಮಾಡಿವೆ. ಆಸ್ಪತ್ರೆ ಕನಸು ಭಗ್ನ ಎಂಬುದಾಗಿ ಹೇಳಿವೆ. ನಾನು ಕೂಡ ಸುಮಾರು ೨೦ ದಿನದ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆತಂಕ ವ್ಯಕ್ತಪಡಿಸಿ, ಶಾಸಕರಿಗೆ ಬೆಂಬಲ ಸೂಚಿಸಿ ನಿಜವಾದ ಸತ್ಯವನ್ನು ಜನತೆಗೆ ತಿಳಿಸಿ ಎಂಬುದಾಗಿ ಕೇಳಿದ್ದಾಗಿದೆ. ಆದರೆ, ಇದ್ಯಾವುದಕ್ಕೂ ಶಾಸಕರು, ಸಚಿವರು ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಇದಕ್ಕೆಲ್ಲ ಡೋಂಟ್ ಕೇರ್ ಅನ್ನುವ ಮನಸ್ಥಿತಿಯಲ್ಲಿ ಇದ್ದಾರೆ. ಕ್ಷೇತ್ರದ ಜನರ ಸಮಸ್ಯೆಗೆ ಇಷ್ಟೊಂದು ನಿರ್ಲಕ್ಷ ಸಲ್ಲದು. ಜೊತೆಗೆ ಆಯುಷ್ಮಾನ್ ಭಾರತ್ ರೆಫರಲ್ ಲೆಟರ್ ಮತ್ತು ದಿವ್ಯಾಂಗದ ಯುಡಿಐಡಿ ಕಾರ್ಡ್ ಪಡೆಯಲು ರೋಗಿಗಳು ಕಾರವಾರಕ್ಕೆ ಅಲೆಯುವುದನ್ನು ತಪ್ಪಿಸಿ, ಶಿರಸಿಯಲ್ಲಿಯೇ ಆ ವ್ಯವಸ್ಥೆ ಆಗಬೇಕೆಂದು ಒತ್ತಾಯಿಸಿದರು.

ಇದೇ ಜಿಲ್ಲೆಯವರಾದ ರಾಮಕೃಷ್ಣ ಹೆಗಡೆ ಆರೋಪ ಬಂದ ಕೂಡಲೇ ರಾಜಿನಾಮೆ ಕೊಟ್ಟಿದ್ದು ನೋಡಿದ್ದೇವೆ. ಆದರೆ, ಇಂದಿನ ರಾಜಕಾರಣಿಗಳಿಗೆ ಪ್ರತಿಷ್ಠಿತ ಮಾಧ್ಯಮಗಳಲ್ಲಿ ವರದಿ ಬಂದರೂ, ಸಂಘಟನೆಗಳು ಪತ್ರಿಕಾಗೋಷ್ಠಿ ನಡೆಸಿದರೂ ಉತ್ತರ ಕೊಡುವ ವ್ಯವಧಾನ ಇಲ್ಲ ಎಂದರೆ ಏನು ಹೇಳಬೇಕು? ಈ ಕೂಡಲೇ ಶಾಸಕ ಭೀಮಣ್ಣ ನಾಯ್ಕ ಅವರು ಆಸ್ಪತ್ರೆ ಕಾಮಗಾರಿ ವಿಚಾರದಲ್ಲಿ ಸತ್ಯವನ್ನು ಜನರೆದುರು ತೆರದಿಡಬೇಕು. ಆಸ್ಪತ್ರೆಯ ಪ್ಲಾಸ್ಟರ್, ಟೈಲ್ಸ್, ಪೇಂಟಿಂಗ್, ಲಿಫ್ಟ್, ಫರ್ನಿಚರ್, ಎಲೆಕ್ಟಿಕ್, ಪ್ಲಮ್ಬಿಂಗ್ ಅಂತ ಸುಮಾರು ₹೪೦ ಕೋಟಿ ಬೇಕಾಗಬಹುದು. ಅದನ್ನ ತರುವರು ಯಾರು? ಈಗಲೇ ಆಸ್ಪತ್ರೆ ಕಾಂಟ್ರ್ಯಾಕ್ಟರ್‌ಗೆ ಹಣ ಪೂರ್ತಿ ಬಿಡುಗಡೆ ಆಗಿಲ್ಲ. ಇನ್ನು ಆಸ್ಪತ್ರೆ ಮಷಿನರಿಗಳಿಗೆ ಮೊದಲು ₹೬೦ ಕೋಟಿ ಅಂತ ಇತ್ತು. ಕೊನೆಗೆ ಅದು ₹೩೬ ಕೋಟಿ ಆಯಿತು. ಈಗ ನೋಡಿದರೆ ₹೬ ಕೋಟಿ ಕೊಡುವುದಾಗಿ ಸರ್ಕಾರ ಹೇಳುತ್ತಿದೆ. ಸರ್ಕಾರ ಆಸ್ಪತ್ರೆಯನ್ನು ಸಾಯಿಸಲು ಹೊರಟಿದೆಯಾ ಎಂಬ ಆತಂಕ ಜನರಲ್ಲಿ ಮೂಡತೊಡಗಿದೆ. ಭೀಮಣ್ಣ ನಾಯ್ಕ ತಾವು ಜನರ ಸೂಪರ್‌ವೈಸರ್ ಅಂತ ಹೇಳಿದ್ದೀರಿ. ತಾವು ಜನತೆಗೆ ಸರ್ಕಾರದ ಹಣ ತರುವ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾವು ತಮಗೆ ಒಂದು ವಾರದ ಗಡುವು ಕೊಡುತ್ತಿದ್ದೇವೆ. ಶಿರಸಿ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಸಿ ಸತ್ಯವನ್ನು ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಜ. ೧೩ರಿಂದ ಆಸ್ಪತ್ರೆಯ ಉಳಿವಿಗೆಗಾಗಿ ಜನರೊಂದಿಗೆ ಬೀದಿಗಿಳಿದು ಹೋರಾಡುವುದರ ಜೊತೆಗೆ ತಮ್ಮ ಕಚೇರಿ ಎದುರು ಉಪವಾಸದ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ ಮಾತನಾಡಿ, ಅಧಿಕಾರದ ಖುರ್ಚಿ ಯಾರಿಗೂ ಶಾಶ್ವತವಲ್ಲ. ಅಧಿಕಾರವಿದ್ದಾಗ ಜನತೆಗೆ ಅನುಕೂಲ ಮಾಡಿಕೊಡಿ, ಆಗ ಭಗವಂತ ಮೆಚ್ಚುತ್ತಾನೆ ಎಂದರು.

ಜಯಶೀಲ ಗೌಡ ಬನವಾಸಿ ಮಾತನಾಡಿ, ಬಡವರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇಂತಹ ಆಸ್ಪತ್ರೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಹೇಳಿದರು.

ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಕಾಗೇರಿಯವರು ಶಾಸಕರಿದ್ದಾಗ ಆಸ್ಪತ್ರೆಗೆ ಅನುದಾನ ತಂದಿದ್ದರು. ಹಾಲಿ ಶಾಸಕರು ಇದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ, ಆಸ್ಪತ್ರೆಯ ಕೆಲಸ ಪೂರ್ಣಗೊಳಿಸಬೇಕು ಎಂದರು.

ಸುದ್ದಿಗೋಷ್ಟಿಯಲ್ಲಿ ಶಿವಾನಂದ ದೇಶಳ್ಳಿ, ರಮಾನಂದ ಐನಕೈ, ಜಿ.ಎಸ್ ಹೆಗಡೆ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ