ರೋಣ: ಇಲ್ಲಿಯ ಪುರಸಭೆ ಸಭಾಭವನದಲ್ಲಿ ಮಂಗಳವಾರ ಮುಖ್ಯಾಧಿಕಾರಿ ರಮೇಶ ಹೊಸಮನಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳ ಗುರಿ ಹೊಂದಿದ ಒಟ್ಟು ಆದಾಯ ₹ 14,52,69,595, ₹ 14,21,07,095 ಗಳ ಖರ್ಚು ಸೇರಿ ₹ 31,62,500 ಉಳಿತಾಯ ಬಜೆಟ್ ಮಂಡಿಸಲಾಯಿತು. ಬಜಟ್ ಮಂಡನೆ ಬಳಿಕ ಮಖ್ಯಾಧಿಕಾರಿ ಹಾಗೂ ಅಧ್ಯಕ್ಷರೊಂದಿಗೆ ಸದಸ್ಯರು ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಸದಸ್ಯ ಗದಿಗೆಪ್ಪ ಕಿರೇಸೂರ ಮಾತನಾಡಿ, ಕರ ವಸೂಲಿ ಸರಿಯಾಗಿ ಆಗುತ್ತಿಲ್ಲ. ನಳದ ಬಿಲ್ ₹ 31 ಲಕ್ಷ ಬಾಕಿ ಇದೆ. ಕರ ವಸೂಲಿ ಸರಿಯಾಗಿ ಮಾಡಿದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸದಸ್ಯ ಸಂತೋಷ ಕಡಿವಾಳ ಮಾತನಾಡಿ, ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನಾಲ್ಕು ಸ್ವಾಗತ ಕಮಾನ್ ನಿರ್ಮಾಣ ಮಾಡಲು ಪ್ರತಿ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಾ ಬಂದಿದ್ದು, ಆದರೆ ಅದು ಇದುವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಕೇವಲ ಕಾಗದಗಳಿಗೆ ಮಾತ್ರ ಸೀಮಿತವಾಗಿದೆ. ಇದುವರೆಗೂ ಸ್ವಾಗತ ಕಮಾನ್ ನಿರ್ಮಾಣ ಮಾಡುವ ಮನಸ್ಸು ಅಧಿಕಾರಿಗಳು ಮಾಡುತ್ತಿಲ್ಲ ಎಂದು ಆರೋಪಿಸಿದರು.ಕಳೆದ ಬಾರಿ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಬಂದಿದ್ದ ₹ 11 ಲಕ್ಷ ಅನುದಾನ ವಾಪಸ್ ಹೋಗಿದ್ದು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಇನ್ನಾದರೂ ಜನರಿಗೆ ಸರ್ಕಾರದಿಂದ ಬರುವ ಯೋಜನೆಗಳು ಸಮರ್ಪಕವಾಗಿ ತಲುಪುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದರು.
ಸಭೆಯಲ್ಲಿ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಸದಸ್ಯ ಮಿಥುನ್ ಜಿ. ಪಾಟೀಲ, ಗದಿಗೆಪ್ಪ ಕಿರೇಸೂರ, ದಾವಕಸಾಬ ಬಾಡಿನ, ಈಶ್ವರ ಕಡಬುನಕಟ್ಟಿ, ಸಂಗಪ್ಪ ಜಿಡ್ಡಿಬಾಗಿಲ, ವಿಜಯಲಕ್ಷ್ಮೀ ಕೊಟಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.