ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಭಾಗದಲ್ಲಿ ರಂಗಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ರಂಗ ಸಂಗಮ ಕಲಾ ಸಂಸ್ಥೆ ತನ್ನ ವಾರ್ಷಿಕ ರಂಗ ಪುರಸ್ಕಾರ ಪ್ರದಾನಕ್ಕೆ ಸಜ್ಜಾಗಿದೆ. ಜು.18ರಂದು ಬೆ.10.30ಕ್ಕೆ ಎಸ್.ಬಿ. ಜಂಗಮಶೆಟ್ಟಿ, ಸುಭದ್ರಾದೇವಿ ಜಂಗಮಶೆಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದ ರಂಗ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.ರಂಗಸಂಗಮ ಕಲಾ ವೇದಿಕೆ ರೂವಾರಿ ಡಾ. ಸುಜಾತಾ ಜಂಗಮಶೆಟ್ಟಿ ಉಸ್ತುವಾರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ, ಸೇಡಂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಸದಾಶಿವ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕರಾಮುವಿ ಕುಲಪತಿ ಡಾ. ಶರಣಪ್ಪ ವಿ. ಹಲಸೆ, ನಾಟಕ ಅಕ್ಯಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಉಪಸ್ಥಿತರಿರಲಿದ್ದಾರೆ.
ಕಲಾವಿದರಾದ ಬಳ್ಳಾರಿಯ ಪುರುಷೋತ್ತಮ ಹಂದ್ಯಾಳ್ ಅವರಿಗೆ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ ಹಾಗೂ ಶಿಗ್ಗಾಂವ್‍ದ ಕಲಾವಿದೆ ಶ್ರೀಮತಿ ರಾಧಿಕಾ ವಿ. ಬೇವಿನಮಟ್ಟಿ ಅವರಿಗೆ ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 10 ಸಾವಿರ ರುಪಾಯಿ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತಿದೆ.ಚಿಂಚೋಳಿಯ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶ ಜಾರಿಕಾರ ಮಹಾದೇವ್ ಎಂ. ಹಂಗರಗಿ ಪ್ರಶಸ್ತಿ ಪುರಸ್ಕೃತರ ಕುರಿತು, ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಅವರು ಜಂಗಮಶೆಟ್ಟಿ ದಂಪತಿ ಕುರಿತು ಮಾತನಾಡುವರು. ರಂಗಸಂಗಮ ಕಲಾವೇದಿಕೆಯ ಅಧ್ಯಕ್ಷೆ ಶಿವಗೀತಾ ಬಸವಪ್ರಭು ಉಪಸ್ಥಿತರಿರುವರು, ಇದೇ ಸಮಾರಂಭದಲ್ಲಿ ಶ್ರೀಧರ್ ಹೊಸಮನಿ ಹಾಗೂ ಸಂಗಡಿಗರು ಗೀತಗಾಯನ ನೆರವೇರಿಸುವರು.
ಕರ್ನಾಟಕ ನಾಟಕ ಅಕ್ಯಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಮಾಸ್ತರ್ ಅಧ್ಯಕ್ಷತೆಯಲ್ಲಿ ರಂಗಕರ್ಮಿಗ ಎಚ್.ಎಸ್. ಬಸವಪ್ರಭು,ಶಾಂತಾ ಕುಲಕರ್ಣಿ, ನಾರಾಯಣ್ ಕುಲಕರ್ಣಿ, ಬಿ.ಎಚ್. ನಿರಗುಡಿ, ಡಾ. ವಿಶ್ವರಾಜ್ ಪಾಟೀಲ್, ಶಿವಗೀತಾ ಬಸವಪ್ರಭು, ಡಾ. ಸುಜಾತಾ ಜಂಗಮಶೆಟ್ಟಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ .-------------------
ಅಪ್ಪಟ ಗ್ರಾಮೀಣ ಪ್ರತಿಭೆ ಪುರುಷೋತ್ತಮ್ ಹಂದ್ಯಾಳ್ಪುರುಷೋತ್ತಮ ಬಳ್ಳಾರಿ ಜಿಲ್ಲೆಯ ಹಂದ್ಯಾಳದ ಅಪ್ಪಟ ಗ್ರಾಮೀಣ ಪ್ರತಿಭೆ. ವೃತ್ತಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿದ್ದರು 33 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯ, ಶಾಲಾ ದಿನಗಳಲ್ಲಿಯೇ ರಂಗಭೂಮಿ ಪ್ರವೇಶಿಸಿದರು. ಕುರುಕ್ಷೇತ್ರ, ಧನಿಕರ ದೌರ್ಜನ್ಯ, ಕರ್ತವ್ಯದ ಕಾಣಿಕೆ, ಮಹಿಮಾಪುರ, ಕುಂಕುಮ ತಂದ ಕೈಲಾಸ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಳ್ಳಾರಿಯ ಕಾರಾಗೃಹದ ಖೈದಿಗಳ ಮನಪರಿವರ್ತನೆಗಾಗಿ ಖೈದಿಗಳಿಗಾಗಿ ನಾಟಕ ನಿರ್ದೇಶನ ಮಾಡಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ಜನಜಾಗೃತಿಗಾಗಿ ಕಿರುಚಿತ್ರ ನಿರ್ಮಿಸಿ ಅಭಿನಯಿಸಿದ್ದಾರೆ. ಕನ್ನಡದ 4 ಧಾರವಾಹಿಗಳಲ್ಲಿಯೂ ಪುರುಷೋತ್ತಮ್ ಅಭಿನಯಿಸಿದ್ದಾರೆ.
-----------ಬಸ್ ಕಂಡಕ್ಟರ್ ನಾಟಕದಿಂದ ಬಣ್ಣದ ಬದುಕಿಗೆ ಬಂದ ರಾಧಿಕಾ
ರಂಗ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕಲಾವಿದೆ ರಾಧಿಕಾ ರಾಧಿಕಾ ವ್ಹಿ. ಬೇವಿನಮಟ್ಟಿ ಅವರು 12ನೇ ವಯಸ್ಸಿನಲ್ಲಿ ಬಸ್ ಕಂಡಕ್ಟರ್ ನಾಟಕದ ಮೂಲಕ ಬಣ್ಣದ ಬದುಕಿಗೆ ಬಂದವರು. ಓದಿದ್ದು ಕಡಿಮೆಯಾದರೂ ಎಂತಹ ಪಾತ್ರ ಕೊಟ್ಟರೂ ಸೈ ಎಂದು ಕಲಾಪ್ರದರ್ಶನ ಮಾಡಿದವರು. ಮದುಮಗಳು, ಕಿತ್ತೂರು ಚೆನ್ನಮ್ಮ, ಸಂಗ್ಯಾ ಬಾಳ್ಯಾ, ಸಂಪತ್ತಿಗೆ ಸವಾಲ್, ಸಂತ ಸಕ್ಕೂಬಾಯಿ, ಜಗಜ್ಯೋತಿ ಬಸವೇಶ್ವರ, ರೈತನ ಮಕ್ಕಳು ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದವರು. ಸಮರ ಸಿಂಹಿಯಿನಿ ಬೆಳವಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಮ್ಮ ಪಾತ್ರದಲ್ಲಿ ಪ್ರೇಕ್ಷಕರ ಮನಸೂರೆಗೊಂಡವರು.