ಇಂದು ಜಾನಪದ ಕಲೆಗಳ ಸಂರಕ್ಷಣೆ ಅವಶ್ಯ: ಬಿಳಿಮಲೆ

KannadaprabhaNewsNetwork |  
Published : Jun 12, 2026, 01:30 AM IST
ಜಾನಪದ ಕಲೋತ್ಸವ.  | Kannada Prabha

ಸಾರಾಂಶ

ಕನಕಪುರ: ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಜಾನಪದ ಕಲೆಗಳನ್ನೇ ಅವಲಂಬಿಸಿರುವ ಸಮುದಾಯಗಳ ಏಳಿಗೆಗಾಗಿ ಸಂಘ ಸಂಸ್ಥೆಗಳು ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದಾಗ ಮಾತ್ರ ನಶಿಸುತ್ತಿರುವ ಜಾನಪದ ಕಲೆಗಳನ್ನು ಸಂರಕ್ಷಿಸಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು

ಕನಕಪುರ: ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಜಾನಪದ ಕಲೆಗಳನ್ನೇ ಅವಲಂಬಿಸಿರುವ ಸಮುದಾಯಗಳ ಏಳಿಗೆಗಾಗಿ ಸಂಘ ಸಂಸ್ಥೆಗಳು ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದಾಗ ಮಾತ್ರ ನಶಿಸುತ್ತಿರುವ ಜಾನಪದ ಕಲೆಗಳನ್ನು ಸಂರಕ್ಷಿಸಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.ನಗರದ ರೋಟರಿ ಭವನದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಕಲೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾದ ಜಾನಪದ ಕಲೆಗಳು ಮರೆಯಾಗುತ್ತಿವೆ. ಜಾಗತೀಕರಣ ಹಾಗೂ ಔದ್ಯೋಗೀಕರಣದ ಪ್ರಭಾವದಿಂದ ಹಿಂದೆ ಎರಡುಮೂರು ಗಂಟೆ ನಡೆಯುತ್ತಿದ್ದ ಜಾನಪದ ಗಾಯನ ಕಾರ್ಯಕ್ರಮಗಳು ಈಗ 30 ನಿಮಿಷಕ್ಕೆ ಬಂದು ನಿಂತಿವೆ. ಕರ್ನಾಟಕದಲ್ಲಿ ಸುಮಾರು 290ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳಿದ್ದು ತಮ್ಮದೇ ಆದ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿದ್ದು ಶರಾವತಿ, ನೇತ್ರಾವತಿ ನದಿಗಳ ತಿರುವನ್ನು ತಿರುಗಿಸುವುದರಿಂದ ಅ ಭಾಗದಲ್ಲಿ ಜಲ ಮೂಲಗಳು ನಶಿಸಿ ಸ್ಥಳೀಯ ಕಲೆಗಳು ಕಣ್ಮರೆಯಾಗಲಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಜಾನಪದ ಕಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ನೆರವಾಗುವುದರ ಜೊತೆಗೆ ಸರಕಾರದಿಂದ ಸಿಗುವ ಹಲವು ಸೌಲಭ್ಯಗಳನ್ನು ಕಲಾವಿದರಿಗೆ ತಲುಪಿಸುವ ಕೆಲಸ ಮಾಡುವಂತೆ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಜಾನಪದ ಕಲಾವಿದರಲ್ಲಿ ಬಹುತೇಕರು ಅವಿದ್ಯಾವಂತರು, ಅಸಂಘಟಿತರು. ಸರ್ಕಾರದಿಂದ ಕಲಾವಿದರಿಗೆ ಸೂಕ್ತ ಪ್ರಾಶಸ್ತ್ಯ ಸಿಗುತ್ತಿಲ್ಲ. ಇದರಿಂದಾಗಿ ಜಾನಪದ ಕಲೆಗಳನ್ನು ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದ ಕಲಾವಿದರು ಜಾನಪದ ಕಲೆ ಗಳಿಂದ ದೂರ ಉಳಿಯುತ್ತಿರುವುದು ನೋವಿನ ಸಂಗತಿಯಾಗಿದೆ. ಪ್ರತಿಯೊಂದು ಜಾನಪದ ಕಲೆಗಳು ಸಮಾಜಕ್ಕೆ ನಮ್ಮ ಸಂಸ್ಕೃತಿಯ ಇತಿಹಾಸದ ಸಂದೇಶ ಕೊಡುತ್ತವೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಮುದಾಯಿಕ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಆಧುನಿಕತೆಯಿಂದ ನೆಲಮೂಲದ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ನಮ್ಮ ಮೂಲ ಸಂಸ್ಕೃತಿ ಉಳಿಸಲು ಕಲಾವಿದರು ಸಂಘಟಿತರಾಗುವ ಅವಶ್ಯಕತೆ ಇದೆ. ಇಂದಿನ ಯುವಜನತೆ ಸಾಮಾಜಿಕ ಮಾಧ್ಯಮಗಳಲ್ಲಿ ಮುಳುಗಿ ಹೋಗಿದ್ದು ನಮ್ಮ ಮೂಲ ಪರಂಪರೆ ಕಡೆಗಣಿಸುತ್ತಿದ್ದಾರೆ. ಯುವಕರು ಮೊಬೈಲ್ ಹಾಗೂ ಟಿವಿಗೆ ಮಾರು ಹೋಗದೆ ಸಂಸ್ಕೃತಿ, ಪರಂಪರೆ, ಜಾನಪದ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು.

ನಟ, ನಿರ್ಮಾಪಕ ನರಸಿಂಹಮೂರ್ತಿ ಮಾತನಾಡಿ, ಜಾನಪದವಾದ್ಯಗಳ ಪರಿಕರಗಳು ಇಲ್ಲದ ಹೊತ್ತಿನಲ್ಲಿ ಹಾಡುತ್ತಿದ್ದ ಜನಪದ, ಗೀಗಿಪದ, ತತ್ವಪದ ಸೇರಿದಂತೆ ಕಲೆಗಳು ಮೌಖಿಕ ಪರಂಪರೆಯಾಗಿ ಪಸರಿಸುತ್ತಿದ್ದವು. ಆದರೆ, ಇಂದು ಆಧುನಿಕತೆಯಿಂದ ನೆಲಮೂಲದ ಕಲೆ ಕಣ್ಮರೆಯಾಗುತ್ತಿವೆ ಕಾಂತಾರದಂತಹ ಚಲನಚಿತ್ರಗಳ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ, ಆಚಾರಗಳನ್ನು ಪರಿಚಯಿಸುವ ಕೆಲಸ ಚಿತ್ರರಂಗ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಯಬಾರಿಗಳಾದ ಜಾನಪದ ಕಲಾವಿದರು ನಮ್ಮ ನಾಡಿನ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ಪೋಷಕರು ಮಕ್ಕಳಿಗೆ ಮೊದಲು ಪಾಶ್ಚಿಮಾತ್ಯ ಸಂಗೀತದಿಂದ ದೂರವಿರುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 25ಕ್ಕೂ ಹೆಚ್ಚು ತಮಟೆ, ಪೂಜಾ ಕುಣಿತ, ವೀರಗಾಸೆ, ಪಟ್ಟದ ಕುಣಿತ ಇನ್ನು ಮುಂತಾದ ಜಾನಪದ ಕಲಾ ತಂಡಗಳು ಚನ್ನಬಸಪ್ಪ ವೃತ್ತದಿಂದ ರೋಟರಿ ಭವನದವರೆಗೂ ಮೆರವಣಿಗೆಯಲ್ಲಿ ಸಾಗಿದರು.

ವೇದಿಕೆ ಕಾರ್ಯಕ್ರಮದಲ್ಲಿ ಜಾನಪದಗೀತೆ, ಹೋರಾಟದ ಗೀತೆ, ತತ್ವ ಗಾಯನ, ವಚನ ಗೀತೆ, ಸೋಬಾನೆ ಪದಗಳು, ತಮಟೆ, ಪೂಜಾಕುಣಿತ, ಪಟದಕುಣಿತ, ಸೋಮನ ಕುಣಿತ, ಕಂಸಾಳೆ, ಸೇರಿದಂತೆ ಹಲವು ಜಾನಪದ ಕಲಾ ಪ್ರದರ್ಶನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸೋಲೂರು ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷ ಡಾ. ಶ್ರೀ ಸಿದ್ಧರಾಜು ಸ್ವಾಮೀಜಿ, ನಮನ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಡಿ.ವೆಂಕಟರಮಣಸ್ವಾಮಿ, ಅಧ್ಯಕ್ಷ ಚಂದ್ರ ಎಂ, ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾ ನಿರ್ದೇಶಕ ಸತೀಶ್, ರೋಟರಿ ಅಧ್ಯಕ್ಷ ಸಿದ್ಧರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹರೀಶ್, ಸಮಾಜ ಸೇವಕರಾದ ಪೊಲೀಸ್ ಮಲ್ಲೇಶ್, ಟಿ.ಆರ್ ರಾಮಪ್ಪ, ಪರಿಸರ ಪ್ರೇಮಿ ಮರಸಪ್ಪ ರವಿ, ಡಾ. ಪ್ರತಿಮಾದೇವಿ, ಡಾ. ಶಶಿಧರ್, ಎಡಿಎಲ್‌ಆರ್ ನಂದೀಶ್, ಜಯಕರ್ನಾಟಕ ಜನಪರ ವೇದಿಕೆ ಕುಮಾರಸ್ವಾಮಿ, ಪ್ರಾಂಶುಪಾಲರಾದ ಹನುಮೇಗೌಡ, ವೆಂಕಟೇಶ್, ಕಲಾಪ್ರಿಯ ಪತ್ರಿಕೆ ಸಂಪಾದಕಿ ಸುಧಾರಣೆ, ಚಲನಚಿತ್ರ ನಟಿ ಕಾವ್ಯಗೌಡ ಇತರರಿದ್ದರು.

ಇದೇ ವೇಳೆ ಕು.ರಚನಾ ಮನು, ಎಚ್.ಎಸ್ ಲೋಕೇಶ್, ಎಚ್, ಪ್ರವೀಣ್ ಕುಮಾರ್, ಎಚ್ ಎಂ.ರಚನಾಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೆ ಕೆ ಪಿ ಸುದ್ದಿ 01(1)

ಕನಕಪುರದಲ್ಲಿ ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಕಲೋತ್ಸವ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರೋತ್ತಮ ಬಿಳಿಮಲೆ ನಗಾರಿ ಬಾರಿಸಿ ಉದ್ಘಾಟಿಸಿದರು.

ಕೆ ಕೆ ಪಿ ಸುದ್ದಿ 01(2) : ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ ಹಾಗೂ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಕಲೋತ್ಸವ ಸಮಾರಂಭದಲ್ಲಿ ಕು.ರಚನಾ ಮನು, ಎಚ್.ಎಸ್ ಲೋಕೇಶ್, ಎಚ್, ಪ್ರವೀಣ್ ಕುಮಾರ್, ಎಚ್ ಎಂ.ರಚನಾಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೌಡಿಶೀಟರ್ ಮಂಜೇಶ್ ಹತ್ಯೆ ಕೇಸ್‌ ಹತ್ತು ಆರೋಪಿಗಳ ಬಂಧನ
ಮತದಾರರ ಪಟ್ಟಿಗೆ ಅರ್ಹ ಮತದಾರರ ಸೇರ್ಪಡೆ ಮುಖ್ಯ ಉದ್ದೇಶ