ಹೊಸಪೇಟೆ: ಸ್ಮಾರಕಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ರಮೇಶ್ ನಾಯಕ್ ಹೇಳಿದರು.
ಐತಿಹಾಸಿಕ ಸ್ಮಾರಕ ಮತ್ತು ಪಾರಂಪರಿಕ ತಾಣಗಳ ಸಂರಕ್ಷಣೆಯ ಮಹತ್ವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಸ್ಮಾರಕ ನಮ್ಮ ಪೂರ್ವಜರು ನೀಡಿರುವ ಅಮೂಲ್ಯ ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಪಾರಂಪರಿಕ ಸ್ಮಾರಕಗಳ ರಕ್ಷಣೆಯಲ್ಲಿ ವಿಶೇಷ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್ ರಾವ್ ಬಿ. ಪಂಚಾಳ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ರಕ್ಷಣೆ ಕೇವಲ ಒಂದು ಇಲಾಖೆಯ ಅಥವಾ ಸಂಸ್ಥೆಯ ಜವಾಬ್ದಾರಿಯಲ್ಲ. ಅದು ದೇಶದ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ತಜ್ಞ ಕೆ. ರಾಮಕೃಷ್ಣ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಐತಿಹಾಸಿಕ ಸ್ಮಾರಕಗಳ ಮೇಲೆ ಹೆಸರು ಬರೆಯುವುದು, ಕೆತ್ತುವುದು ಸೇರಿದಂತೆ ಯಾವುದೇ ರೀತಿಯಲ್ಲಿ ಸ್ಮಾರಕಗಳಿಗೆ ಹಾನಿ ಉಂಟುಮಾಡಬಾರದು. ಪಾರಂಪರಿಕ ತಾಣಗಳ ಮಹತ್ವ ಅರಿತು ಗೌರವಿಸುವ ಮನೋಭಾವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ವಿಶ್ವ ಪಾರಂಪರಿಕ ಸಪ್ತಾಹದ ಮಹತ್ವ ಹಾಗೂ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯ ಕುರಿತು ತಮ್ಮ ಅಭಿಪ್ರಾಯ ಸಭೆಯಲ್ಲಿ ಹಂಚಿಕೊಂಡರು.