ಕನ್ನಡ ಶಾಲೆ ಉಳಿಸುವ ಜತೆಗೆ ಮಾತೃ ಭಾಷೆ ಕಲಿಕೆ ಹೆಚ್ಚಾಗಲಿ

KannadaprabhaNewsNetwork |  
Published : Nov 24, 2026, 01:15 AM IST
ಹೂವಿನಹಡಗಲಿಯ ರಂಗಭಾರತಿ ರಂಗ ಮಂದಿರದಲ್ಲಿ ತಾಲೂಕ ಕಸಾಪ ಆಯೋಜಿದ್ದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ ನಮೋಶಿ ಮಾತನಾಡಿದರು.  | Kannada Prabha

ಸಾರಾಂಶ

ಪ್ರಾಚೀನ ಪರಂಪರೆ ಹೊಂದಿರುವ ಕನ್ನಡ ಭಾಷೆಯ ಪ್ರೀತಿ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಬೆಳಗುವಂತಾಗಲಿ

ಹೂವಿನಹಡಗಲಿ: ರಾಜ್ಯ ಸರ್ಕಾರ ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸುವ ಜತೆಗೆ ಅವುಗಳಿಗೆ ಪುಷ್ಠಿ ನೀಡಿ ಮಾತೃಭಾಷೆಯಲ್ಲಿ ಮಕ್ಕಳ ಕಲಿಕೆ ಹೆಚ್ಚಾಗುವಂತೆ ಮಾಡಬೇಕೆಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ ಒತ್ತಾಯಿಸಿದರು.

ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಮಾತೃ ಭಾಷೆಯಲ್ಲಿನ ಕಲಿಕೆ ಹೆಚ್ಚು ಪರಿಣಾಮಕಾರಿ. ಇಂದಿನ ಯುಗಮಾನಕ್ಕೆ ಹೊಂದುವಂತಹ ಕೌಶಲ್ಯಯುಕ್ತ ಶಿಕ್ಷಣ ಕನ್ನಡದಲ್ಲಿ ಸಿಗುವಂತಾದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಪ್ರೋತ್ಸಾಹ ನೀಡಬೇಕು. ಅಂತಹ ಶಿಕ್ಷಣ ನೀತಿ ಜಾರಿ ಮಾಡುವಲ್ಲಿ ಇಂತಹ ಸಮ್ಮೇಳನ ಪ್ರೇರಣೆ ನೀಡುತ್ತವೆ ಎಂದರು.

ಬಹಿರಂಗ ಅಧಿವೇಶನದಲ್ಲಿ ಮಂಡಿಸಿದ ನಿರ್ಣಯಗಳಲ್ಲಿ ಗದಗ- ಮುಂಡರಗಿ-ಹರಪನಹಳ್ಳಿ ರೈಲು ಮಾರ್ಗಕ್ಕೆ,ಸ್ಥಳೀಯ ಜನಪ್ರತಿನಿಧಿಗಳ ಜತೆಗೂಡಿ ಸಂಬಂಧಿಸಿದ ಕೇಂದ್ರ ರೈಲ್ವೆ ಸಚಿವರ ಜತೆ ಮಾತನಾಡಿ ಯೋಜನೆ ಜಾರಿಯಾಗಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಮುಂಡರಗಿ ವಿಶ್ರಾಂತ ಪ್ರಾಧ್ಯಾಪಕರು ಆರ್.ಎಲ್. ಪೊಲೀಸ್ ಪಾಟೀಲ ಸಮಾರೋಪ ಭಾಷಣ ಮಾಡಿ ಸಮ್ಮೇಳನದಲ್ಲಿ ಅರ್ಥಪೂರ್ಣವಾದ ವಿದ್ವತ್ಪೂರ್ಣವಾದ ತಾಲೂಕು ದರ್ಶನ ವಿಚಾರಗೋಷ್ಠಿ, ಕವಿಗೋಷ್ಠಿ, ವಿಶೇಷವಾಗಿ ಮಹಿಳಾ ಕವಿಗೋಷ್ಠಿ ಆಯೋಜಿಸಿದ್ದು ಅಭಿನಂದನಾರ್ಹ ಎಂದರು.

ಪ್ರಾಚೀನ ಪರಂಪರೆ ಹೊಂದಿರುವ ಕನ್ನಡ ಭಾಷೆಯ ಪ್ರೀತಿ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಬೆಳಗುವಂತಾಗಲಿ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು ಜಾರಿಯಾಗಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.

ವಿಶ್ರಾಂತ ಪ್ರಾಚಾರ್ಯ ಶಾಂತಮೂರ್ತಿ ಬಿ ಕುಲಕರ್ಣಿ, ಹಾಲಪ್ಪ ಚಿಗಟೇರಿ ಕೈದೀವಿಗೆಗಳು ಚಂದನ ಸುಜಾತ.ಎಚ್ ಇವರ ಸಿದ್ಧತೆಗಳಿಗೆ ಸಿದ್ಧೌಷದ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕರಿಶೆಟ್ಟಿ ರುದ್ರಪ್ಪ, ಮಾಜಿ ಕಸಾಪ ಅಧ್ಯಕ್ಷ ತೋ.ಮ.ಶಂಕ್ರಯ್ಯ, ಎಚ್‌.ಜಿ. ಪಾಟೀಲ, ಕೌಸಲ್ಯಾಬಾಯಿ, ಡಾ.ಎಂ.ಪಿ.ಎಂ.ಮಂಜುನಾಥ ಹಾಲಸ್ವಾಮಿಜಿ, ತಾಲೂಕು ಘಟಕದ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್, ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ. ವಿನಯರಾಜ್ ಉಪಸ್ಥಿತರಿದ್ದರು. ಕಲಾವಿದರಾದ ಪ್ರಕಾಶ್ ಜೆ.ಸಂಗಡಿಗರು, ಬಿ. ಸೋಮಶೇಖರ ಸಂಗಡಿಗರು, ನರೇಂದ್ರ ಹೊಳಲು ಇವರಿಂದ ಕನ್ನಡ ಗೀತೆಗಳ, ವಚನಗಳ ಗಾಯನ ನಡೆಯಿತು.

ಎನ್. ಮಂಜುನಾಥರ ಹಾಸ್ಯ ಚಟಾಕಿಗಳಿಗೆ ಸವಿಕರು ನಗೆಗಡಲಲ್ಲಿ ತೇಲಿದರು. ಇದೇ ವೇಳೆ ಕಲಾವಿದರನ್ನು ಸತ್ಕರಿಸಲಾಯಿತು.

ಈ ಸಮ್ಮೇಳನ ಅಂಗೀಕರಿಸಿದ ಪಂಚ ಪ್ರಮುಖ ನಿರ್ಣಯಗಳು:

ಸಮಗ್ರ ನೀರಾವರಿ ಸೌಲಭ್ಯ ತುಂಗಭದ್ರಾ ನದಿಯಿಂದ ತಾಲೂಕಿನ ಎಲ್ಲ ಕೆರೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವುದರ ಜತೆಗೆ ತಾಲೂಕಿನ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸುತ್ತದೆ.

ಗದಗ–ಮುಂಡರಗಿ–ಹಡಗಲಿ-ಹರಪನಹಳ್ಳಿ ರೈಲು ಮಾರ್ಗ ಬಹುದಿನಗಳ ಬೇಡಿಕೆಯಾಗಿರುವ ಗದಗ,ವಿಜಯನಗರ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಗದಗ–ಮುಂಡರಗಿ–ಹಡಗಲಿ–ಹರಪನಹಳ್ಳಿ ರೈಲು ಮಾರ್ಗ ಶೀಘ್ರವಾಗಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸುತ್ತದೆ.

ಹೊಸ ರೈಲು ಮಾರ್ಗ ಮತ್ತು ರೈಲ್ವೆ ಜಂಕ್ಷನ್ ಹೊಸಪೇಟೆ, ಹಡಗಲಿ, ಮೈಲಾರ, ಗುತಲ ಹಾಗೂ ಹಾವೇರಿ ಮಾರ್ಗವಾಗಿ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸಿ ಹೂವಿನಹಡಗಲಿಯಲ್ಲಿ ರೈಲ್ವೆ ಜಂಕ್ಷನ್ ನಿರ್ಮಿಸಬೇಕೆಂದು ಒತ್ತಾಯಿಸುತ್ತದೆ.

ಪ್ರವಾಸಿ ಹಾಗೂ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಹೂವಿನಹಡಗಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳಾದ ಬೆಟ್ಟದ ಮಲ್ಲೇಶ್ವರ, ಮೈಲಾರ, ಕುರುವತ್ತಿ, ಮದಲಗಟ್ಟ ಸೇರಿದಂತೆ ಪ್ರಮುಖ ಪ್ರೇಕ್ಷಣೀಯ ಸ್ಥಳ ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕೆಂದು ಒತ್ತಾಯಿಸುತ್ತದೆ.

ಉದ್ಯೋಗಾವಕಾಶಗಳ ಸೃಷ್ಟಿ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗಾಧಾರಿತ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರ ಜತೆಗೆ ವೃತ್ತಿ ಆಧಾರಿತ ಕೈಗಾರಿಕೆ ಸ್ಥಾಪಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ಒದಗಿಸಬೇಕೆಂದು ಈ ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವ ವಿಕಲಚೇತನರ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಿ: ಡಾ. ದುರಗೇಶ್
ಯುವಜನ ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ಶಾಸಕ ದಿನಕರ ಶೆಟ್ಟಿ