ಶ್ರೀಧರ ಮುರುಡಿ ಹಿರೇಮಠದ ಪರಂಪರೆ ಉಳಿಸಿ: ಡಾ. ಮಹಾದೇವ

KannadaprabhaNewsNetwork | Published : Feb 6, 2025 12:16 AM

ಸಾರಾಂಶ

ಶ್ರೀಧರ ಮುರುಡಿ ಹಿರೇಮಠಕ್ಕೆ ತನ್ನದೆ ಆದ ಐತಿಹಾಸಿಕ ಪರಂಪರೆ ಇದ್ದು, ಅದನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಭಕ್ತರು ಶ್ರಮಿಸಬೇಕು.

ಬಸವಲಿಂಗೇಶ್ವರ ಸ್ವಾಮೀಜಿ ಪೀಠಾರೋಹಣ ಮಹೋತ್ಸವದಲ್ಲಿ ಚಿಂತನ-ಮಂಥನಕನ್ನಡಪ್ರಭ ವಾರ್ತೆ ಯಲಬುರ್ಗಾ

ಶ್ರೀಧರ ಮುರುಡಿ ಹಿರೇಮಠಕ್ಕೆ ತನ್ನದೆ ಆದ ಐತಿಹಾಸಿಕ ಪರಂಪರೆ ಇದ್ದು, ಅದನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಭಕ್ತರು ಶ್ರಮಿಸಬೇಕು ಎಂದು ಕುಕನೂರು-ಮುಂಡರಗಿ ಶಾಖಾಮಠದ ಡಾ. ಮಹಾದೇವ ಹೇಳಿದರು.

ಪಟ್ಟಣದ ಶ್ರೀಧರ ಮುರುಡಿ ಹಿರೇಮಠದಲ್ಲಿ ಆವರಣದಲ್ಲಿ ನಡೆದ ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ೨೩ನೇ ವರ್ಷದ ಪೀಠಾರೋಹಣ ಮಹೋತ್ಸವದಲ್ಲಿ ಚಿಂತನ-ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದಿನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಇಂದಿನ ಶ್ರೀಗಳು ಭಕ್ತರಿಗೆ ಹತ್ತಿರವಾಗುವ ಮೂಲಕ, ಅವರ ಬದುಕನ್ನು ಹಸನವಾಗಿಡಲು, ಅವರಲ್ಲಿ ಧಾರ್ಮಿಕತೆ ಬೆಳೆಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರತಿಯೊಬ್ಬರು ಧಾರ್ಮಿಕ ಕಾರ್ಯ, ದಾನ, ಧರ್ಮ, ಸಂಸ್ಕಾರ, ಗುಣಗಳನ್ನು ಅಳವಡಿಸಿಕೊಳ್ಳಬೇಕು. ಯಲಬುರ್ಗಾದಲ್ಲಿ ಪ್ರತಿವರ್ಷ ಸರ್ವ ಭಕ್ತಾದಿಗಳ ಸಹಕಾರ, ಭಕ್ತಿ, ಭಾವ ದಾಸೋಹ, ಧಾರ್ಮಿಕತೆಗೆ ಎಂದಿಗೂ ಕೊನೆಯಿಲ್ಲ ಎನ್ನುವುದಕ್ಕೆ ಶ್ರೀಧರ ಮುರಡಿ ಹಿರೇಮಠದ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಜಿಗೇರಿಯ ಗುರು ಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿರುವ ಕಂದಕ ಹೋಗಲಾಡಿಸಿ, ವೈಚಾರಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಮಾಡುವ ಮೂಲಕ ಶೋಷಣೆರಹಿತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಪಣ ತೊಡುವುದು ಅವಶ್ಯವಾಗಿದ್ದು, ಆಧ್ಯಾತ್ಮಿಕ ಚಿಂತನೆಗಳಿಂದ ಮನುಷ್ಯನ ನೈತಿಕ ಬಲ ಹೆಚ್ಚುತ್ತದೆ. ಜತೆಗೆ ಪಟ್ಟಣದ ಭಕ್ತರು ಜತೆಗೂಡಿ ಜಾತಿ-ಭೇದ ತೊರೆದು ಏಕತೆಯಿಂದ ಮಾಡಿದಾಗ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಾಗುತ್ತದೆ ಎಂದರು.

ಶ್ರೀಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ತುಲಾಭಾರ ಸ್ವೀಕರಿಸಿ ಮಾತನಾಡಿ, ಶ್ರೀಮಠಕ್ಕೆ ಭಕ್ತ ಸಮೂಹವೇ ಜೀವಾಳವಾಗಿದ್ದು, ಇಂತಹ ಸಮಾಜಮುಖಿ ಕಾರ್ಯಕ್ರಮ ನಡೆಯಲು ಅವರೆಲ್ಲರ ತನು-ಮನ ಧನದಿಂದಲ್ಲೇ ಸಾಧ್ಯವಾಗಿದೆ ಎಂದರು. ಪತ್ರಕರ್ತ ಶಿವಮೂರ್ತಿ ಇಟಗಿ ತುಲಾಭಾರ ಸೇವೆ ನೆರವೇರಿಸಿದರು.

ಆದಪ್ಪ ಗುಳಗುಳಿ, ಮಹಾಗುಂಡಪ್ಪ ಕಟಗೇರಿ, ಭವರ್‌ಸಿಂಗ್, ತೇಜಸಿಂಗ್ ರಾಜಪುರೋಹಿತ, ನಿಂಗಪ್ಪ ಹೂಗಾರ, ಚಂದನ್ ಸಿಂಗ್, ರಾಜಾರಾಮ, ಲಾಲ್ ಸಿಂಗ್, ಜೀವನಸಿಂಗ್, ಶರಣಪ್ಪ ಬನ್ನಿಕೊಪ್ಪ, ವಿರೂಪಾಕ್ಷಪ್ಪ ಗದ್ದಿ, ರಾಚಯ್ಯ ಸಾಲಿಮಠ, ಲಕ್ಷ್ಮಣ ಕಾಳಿ, ಬಗದರಾಮ ಪಟೇಲ ಇದ್ದರು. ಮಂಗಳೇಶ ಶ್ಯಾಗೋಟಿ ಪ್ರಾರ್ಥಿಸಿದರು. ವೀರಣ್ಣ ಹುಬ್ಬಳ್ಳಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಕೊಂಡಗುರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅನ್ನದಾಸೋಹ ನಡೆಯಿತು.

Share this article