ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಸಾಂಪ್ರದಾಯಿಕ ಹೋಳಿ ಆಚರಣೆ ಉಳಿಸಿ ಮುಂದಿನ ಪೀಳಿಗೆಗೂ ತಿಳಿಸುವ ನಿಟ್ಟಿನಲ್ಲಿ ಮಾಧವ ಸೇವಾ ಕೇಂದ್ರ ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಹಲಗೆ ಮೇಳ ಸ್ಪರ್ಧೆ ಅಭಿನಂದನಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.ನಗರದ ಬಸವೇಶ್ವರ ವೃತ್ತದ ಹೊಳೆ ಆಂಜನೇಯ ದೇವಸ್ಥಾನ ಬಳಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ನಮ್ಮ ಊರು - ನಮ್ಮ ಹಬ್ಬ ಹಲಗೆ ಮೇಳ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಬಾಗಲಕೋಟೆ ಹೋಳಿ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸೌಹಾರ್ದ ಬೆಳೆಸುವ ಶಕ್ತಿ ಇದೆ. ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಸೇರಿ ಏಕೆತೆಯಿಂದ ಹೋಳಿ ಆಚರಿಸುವ ಪರಂಪರೆ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಮಾಧವ ಸೇವಾ ಕೇಂದ್ರ ಉತ್ತಮ ಕಾರ್ಯ ಮಾಡುತ್ತಿದೆ. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ. ಎಲ್ಲರೂ ಸೇರಿ ಹೋಳಿ ಆಚರಿಸಬೇಕು ಎಂದು ಸಲಹೆ ನೀಡಿದರು.ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬಾಗಲಕೋಟೆ ಹೋಳಿ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ನಗರದಲ್ಲಿದ್ದಾಗ ನಾನೂ ಬಣ್ಣದಾಟದ ಸಂತಸದಲ್ಲಿ ಭಾಗಿಯಾಗಿದ್ದೆ. ಎಲ್ಲರೂ ಸೇರಿ ಹಬ್ಬ ಆಚರಿಸುವ ಮೂಲಕ ಸಂಸ್ಕೃತಿ ಉಳಿಸಬೇಕು ಎಂದರು.
ಜಿಪಂ ಸಿಇಒ ಶಶಿಧರ ಕುರೇರ ಹಾಗೂ ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ಹೋಳಿ ಕೆಟ್ಟದ್ದನ್ನು ಸುಡುವ ಆಚರಣೆ. ದ್ವೇಷ ಮರೆತು ಎಲ್ಲರೂ ಏಕತೆಯಿಂದ ರಂಗಿನಾಟದಲ್ಲಿ ಭಾಗವಹಿಸಬೇಕು. ಪಿಯುಸಿ ಪರೀಕ್ಷೆಗಳಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಣ್ಣ ಆಡಬೇಕು. ಹಬ್ಬದಲ್ಲಿ ಹಿಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದ ಜನತೆ ತುಂಬಾ ಸಹಕಾರ ನೀಡಿದ್ದು, ಈ ವರ್ಷವೂ ಶಾಂತಿಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕು ಎಂದದು ತಿಳಿಸಿದರು.ಶಾಸಕ ವಿಜಯಾನಂದ ಕಾಶಪ್ಪನವರ ಹಲಗೆ ವಾದನದ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ ಹಲಗೆ ವಾದನದ ಮೂಲಕ ಜನಮನ ರಂಜಿಸಿದರು. ಡಾ.ಸಂದೀಪ ಹುಯಿಲಗೋಳ, ಡಾ ಸುನಿತಾ ಕಠಾರೆ, ಔಷಧ ಪರಿವೀಕ್ಷಕರಾದ ಅರುಣ ಕಠಾರೆ, ಪತ್ರಕರ್ತ ರವಿ ಮೂಕಿ, ಬಸಪ್ಪ ಸ್ವಾಗಿ, ಬಂಡೇರಾವ್ ಸರದೇಸಾಯಿ, ಕಿರಣ ಶೆಟ್ಟರ, ಪ್ರವೀಣ ಖಾತೆದಾರ, ನಾಗರಾಜ ಹದ್ಲಿ, ಅರವಿಂದ ನಾವಲಗಿ, ದಿನೇಶ ಬಾರ್ಶಿ, ಶಿವಕುಮಾರ ನಂದಿಕೋಲಮಠ, ಭತರ ಲೋಖಂಡೆ, ಗಣಪತಸಾ ದಾನಿ, ನಾರಾಯಣ ದೇಸಾಯಿ, ಶ್ರೀಧರ ನೀಲನಾಯಕ,, ಬಸವರಾಜ ಹೊನ್ನಳ್ಳಿ, ಶಿವಾನಂದ ಮಲ್ಲಾಪೂರ, ಪ್ರಭು ಇಂಡಿ, ಗೋಪಾಲ ಹಳಪೇಟ ಮತ್ತಿತರರು ಉಪಸ್ಥಿತರಿದ್ದರು.ಹುಚ್ಚೇಶ ಲಾಯದಗುಂದಿ ನಿರೂಪಿಸಿದರು. ಅಶೋಕ ಸಾಳುಂಕೆ ಹೋಳಿ ಹಬ್ಬದ ಮಹತ್ವ ಬಗ್ಗೆ ಮಾತನಾಡಿದರು. ಅಜೇಯ ಕಪಾಟೆ ಪ್ರಾಸ್ತಾವಿಕ ಭಾಷಣ ಸುನಿಲ ಬಾಲಗಾವಿ ವಂದಿಸಿದರು .
ಕಿಲ್ಲಾ ತಂಡ ಪ್ರಥಮ:ಹಲಗೆ ವಾದನ ಸ್ಪರ್ಧೆಯಲ್ಲಿ ಎರಡು ಮಹಿಳಾ ತಂಡಗಳು ಸೇರಿ 15 ತಂಡಗಳು ಭಾಗವಹಿಸಿದ್ದವು. ಕಿಲ್ಲಾ ತಂಡ ಪ್ರಥಮ, ಜೈನಪೇಟೆ ತಂಡ ದ್ವಿತೀಯ, ವಿದ್ಯಾಗಿರಿಯ ನಾದ ಸಿರಿ ಮಹಿಳಾ ತಂಡ ತೃತೀಯ ಸ್ಥಾನ ಪಡೆದವು. ಜ್ಯೂನಿಯರ್ ರವಿಚಂದ್ರನ್ ರಾಜೇಶ ಬಾದಾಮಿ ಹಾಗೂ ಪ್ರೇಮಲೋಕ ಮೆಲೊಡೀಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.