ಹೆಣ್ಣುಮಕ್ಕಳ ರಕ್ಷಣೆಗಾಗಿ ರಾಜ್ಯಾದ್ಯಂತ ಪೊಲೀಸ್‌ ಮ್ಯಾರಥಾನ್‌

KannadaprabhaNewsNetwork | Published : Mar 10, 2025 12:19 AM

ಸಾರಾಂಶ

ಸದೃಢ ಕಾಯ, ದೇಹ, ಮನಸ್ಸು ಇರಬೇಕಾದರೆ ದೈಹಿಕ ಶ್ರಮ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪೊಲೀಸ್ ಇಲಾಖೆಯಿಂದ ಪುರುಷ- ಮಹಿಳೆಯರಿಗಾಗಿ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಿ ಐಜಿಪಿ ರವಿಕಾಂತೇಗೌಡ ಹೇಳಿಕೆ । ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷಣೆಯಡಿ ಆಯೋಜನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸದೃಢ ಕಾಯ, ದೇಹ, ಮನಸ್ಸು ಇರಬೇಕಾದರೆ ದೈಹಿಕ ಶ್ರಮ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪೊಲೀಸ್ ಇಲಾಖೆಯಿಂದ ಪುರುಷ- ಮಹಿಳೆಯರಿಗಾಗಿ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತೇಗೌಡ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷಣೆಯಡಿ ಹಮ್ಮಿಕೊಂಡಿದ್ದ ಪೊಲೀಸರೊಂದಿಗೆ 10 ಕೆ ಮ್ಯಾರಥಾನ್ ಮತ್ತು 5 ಕೆ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ದೈಹಿಕ ಶ್ರಮದೊಂದಿಗೆ ಸದೃಢ ಕಾಯ, ದೇಹ, ಮನಸ್ಸಿನೊಂದಿಗೆ ಬಲಿಷ್ಠ ಭಾರತವನ್ನು ಕಟ್ಟಬೇಕಾಗಿದೆ ಎಂದರು.

ಹೆಣ್ಣುಮಕ್ಕಳ ರಕ್ಷಣೆಯೂ ನಮ್ಮೆಲ್ಲರ ಅತಿ ಮುಖ್ಯ ಜವಾಬ್ದಾರಿಯಾಗಿದೆ. ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ರಾಜ್ಯವ್ಯಾಪಿ ಪೊಲೀಸ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಪೂರ್ವ ವಲಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲೂ ಮ್ಯಾರಥಾನ್ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಪೊಲೀಸರೆಂಬ ಭಯ ಬೇಡ:

ಸಾಮಾನ್ಯವಾಗಿ ಪೊಲೀಸರನ್ನು ಕಂಡರೆ ಸಾರ್ವಜನಿಕರಲ್ಲಿ ಭಯ ಸಹಜ, ವಿಶ್ವಾಸವೂ ಕಡಿಮೆ ಇದೆ. ಯಾವುದೇ ಅಹಿತಕರ ಘಟನೆಗಳು ನಡೆದರೆ, ಕಾನೂನು ಸುವ್ಯವಸ್ಥೆ, ಸಂಚಾರ ಸುವ್ಯವಸ್ಥೆ, ಅಪರಾಧ ತಡೆ, ಬಂದೋಬಸ್ತ್ ಹೀಗೆ ಪ್ರತಿಯೊಂದಕ್ಕೂ ಪೊಲೀಸರೇ ಬೇಕು. ಆದರೆ, ಅನೇಕರ ಮನಸ್ಸಿನ ಎಲ್ಲೋ ಒಂದು ಕಡೆ ಪೊಲೀಸರು ಬೇಡ ಎನ್ನುವ ಮನೋಭಾವವೂ ಇದೆ. ಇಂತಹ ಮನೋಭಾವ ಬದಲಾಯಿಸಲು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕರ ಸಹಕಾರ ಬೇಕು:

ಸದೃಢ, ಸುಲಲಿತ ಸಮಾಜ ನಿರ್ಮಿಸಲು ಪೊಲೀಸರಿಗೆ ಸಾರ್ವಜನಿಕರ ಸಹಕಾರ, ಸ್ಪಂದನೆ ಅತ್ಯಗತ್ಯ. ಸಾರ್ವಜನಿಕರು ಸಹ ಒಂದಿಲ್ಲೊಂದು ರೀತಿ ಪೊಲೀಸ್ ಕೆಲಸ ಮಾಡಬೇಕಾಗುತ್ತದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು, ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧಗಳನ್ನು ನಿಯಂತ್ರಿಸಲು, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ, ಕಾನೂನು-ಸುವ್ಯವಸ್ಥೆಯ ರಕ್ಷಣೆಗಾಗಿ ಪೊಲೀಸರು ಅನಿವಾರ್ಯ. ಪೊಲೀಸರ ಜೊತೆಗೆ ಸಾರ್ವಜನಿಕರೂ ಕೈಜೋಡಿಸಿದಾಗ ಮಾತ್ರ ಮತ್ತಷ್ಟು ಪರಿಣಾಮಕಾರಿಯಾಗಿ ಇಲಾಖೆ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯ. ಇದೇ ಉದ್ದೇಶದಿಂದ ಮ್ಯಾರಥಾನ್ ಆಯೋಜನೆಗೊಂಡಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಪ್ರತಿಜ್ಞಾವಿಧಿ ಬೋಧಿಸಿ, ಮ್ಯಾರಥಾನ್ ಕುರಿತಂತೆ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಚನ್ನಗಿರಿ ಎಎಸ್ಪಿ ಸ್ಯಾಮ್ ವರ್ಗೀಸ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ, ನಗರ ಡಿವೈಎಸ್ಪಿ ಶರಣ ಬಸವೇಶ್ವರ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಸೇರಿದಂತೆ ಜಿಲ್ಲಾ, ತಾಲೂಕು, ನಗರಮಟ್ಟದ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

- - -

ಕೋಟ್‌ ಜನತೆ ನಮ್ಮ ನೆಲದ ಅಡುಗೆ, ಆಹಾರ ಸೇವನೆಯಿಂದ ವಿಮುಖರಾಗಿ, ಜೀವನಶೈಲಿಯನ್ನೇ ಮರೆಯುತ್ತಿದ್ದಾರೆ. ರಾಗಿ ಮುದ್ದೆ, ಜೋಳದ ರೊಟ್ಟಿಗಳಂತಹ ಆಹಾರಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಆದರೆ, ಅವುಗಳನ್ನೆಲ್ಲ ಜನತೆ ಬಿಟ್ಟು, ಫಿಜ್ಜಾ, ಬರ್ಗರ್‌, ಚೈನೀಸ್ ಫುಡ್‌ ಅಂತೆಲ್ಲಾ ಫಾಸ್ಟ್ ಫುಡ್‌ ಆಸೆಗೆ ಹೋಗಿ, ಜೀವನ, ಆರೋಗ್ಯ, ದೈಹಿಕ ಸಾಮರ್ಥ್ಯಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇದು ಸಲ್ಲದು.

- ರವಿಕಾಂತೇಗೌಡ, ಐಜಿಪಿ

- - - ಬಾಕ್ಸ್‌* ಮ್ಯಾರಥಾನ್ ಸ್ಪರ್ಧೆಗಳ ವಿಜೇತರು

ಪುರುಷರಿಗಾಗಿ 10 ಕೆ ಮ್ಯಾರಥಾನ್, ಮಹಿಳೆಯರಿಗಾಗಿ 5 ಕೆ ಮ್ಯಾರಥಾನ್ ನಡೆಯಿತು. 10 ಕೆ ಪುರುಷರ ಜನರಲ್ ವಿಭಾಗದಲ್ಲಿ ಡಿ.ವೀರೇಂದ್ರ ನಾಯ್ಕ ಪ್ರಥಮ, ಬಿ.ಎಂ.ಮನು ದ್ವಿತೀಯ, ಕಾರ್ತಿಕ್‌ ತೃತೀಯ ಸ್ಥಾನ ಪಡೆದರು. 10 ಕೆ ಪೊಲೀಸ್ ವಿಭಾಗದಲ್ಲಿ ಹನುಮಂತಪ್ಪ ಅನ್ನದಾನಿ (ಡಿಎಆರ್‌ ಎಪಿಸಿ 21) ಪ್ರಥಮ, ಸಂಜೀವ್‌ ಡೈಟನ್‌ (ಡಿಎಆರ್‌ ಎಪಿಸಿ 150) ದ್ವಿತೀಯ, ಸುನಿಲ್ ನರುಟೆ (ಡಿಎಆರ್‌ ಎಪಿಸಿ 170) ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.

5ಕೆ ಪುರುಷರ ಜನರಲ್ ಮತ್ತು ಪೊಲೀಸ್ ವಿಭಾಗ:

ಜನರಲ್ ವಿಭಾಗದಲ್ಲಿ ಜಗಳೂರು ಕೃಷ್ಣಪ್ಪ ಪ್ರಥಮ, ಹರಪನಹಳ್ಳಿ ಎ.ಬಸವರಾಜ ದ್ವಿತೀಯ, ದಾವಣಗೆರೆಯ ಬಿ.ದರ್ಶನ್ ತೃತೀಯ ಸ್ಥಾನ. ಪೊಲೀಸರ ವಿಭಾಗದಲ್ಲಿ ಪೊಲೀಸ್ ಸಿಬ್ಬಂದಿ ಹುಲುಗೆಪ್ಪ(ಡಿಎಆರ್‌-0047) ಪ್ರಥಮ, ದೊಡ್ಡಮನಿ ಚಲುವರಾಜ(ಡಿಆರ್‌ 0079)ದ್ವಿತೀಯ, ಸುನಿಲ್ ಸರೋಟೆ(ಡಿಆರ್‌ 0062) ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದ 5ಕೆ ಮ್ಯಾರಥಾನ್:

ಜಗಳೂರು ಪೊಲೀಸ್ ಠಾಣೆಯ ಜಿ.ಎಂ.ಮಧುರಾ (ಡಬ್ಲ್ಯುಪಿಸಿ-79), ದಾವಣಗೆರೆ ಬಸವ ನಗರ ಠಾಣೆಯ ಮಾಲತಿ ಬಾಯಿ (ಡಬ್ಲ್ಯುಪಿಸಿ-443), ಅಲಮಸ್ ಬೇಗಂ (ಹೋಂ ಗಾರ್ಡ್ಸ್‌-305) ತೃತೀಯ ಸ್ಥಾನ. ಸಾಮಾನ್ಯ ಮಹಿಳೆಯರ ವಿಭಾಗದಲ್ಲಿ ಅಕ್ಷತಾ ಪ್ರಥಮ, ಅರ್ಚನಾ ದ್ವಿತೀಯ, ರಕ್ಷಾ ತೃತೀಯ ಸ್ಥಾನ ಪಡೆದಿದ್ದಾರೆ.

- - - -9ಕೆಡಿವಿಜಿ1, 2.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ 10 ಕೆ, 5 ಕೆ ಮ್ಯಾರಥಾನ್‌ಗೆ ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಹಸಿರು ನಿಶಾನೆ ತೋರಿದರು. ಎಸ್‌ಪಿ ಉಮಾ ಪ್ರಶಾಂತ, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್‌.ಅರುಣಕುಮಾರ ಇತರರು ಇದ್ದರು. -9ಕೆಡಿವಿಜಿ3.ಜೆಪಿಪಿ:

ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ 10ಕೆ, 5ಕೆ ಮ್ಯಾರಥಾನ್‌ನಲ್ಲಿ ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ, ಎಸ್‌ಪಿ ಉಮಾ ಪ್ರಶಾಂತ, ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡರು.

-9ಕೆಡಿವಿಜಿ4.ಜೆಪಿಜಿ:

ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಹಮ್ಮಿಕೊಂಡಿದ್ದ 10ಕೆ, 5ಕೆ ಮ್ಯಾರಥಾನ್‌ಗೆ ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಜೊತೆಗೆ ಕಿರಿಯ ಅಧಿಕಾರಿ ಸಹೋದ್ಯೋಗಿಗಳ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಸೆಲ್ಫೀ ಸಂಭ್ರಮ.

Share this article