ಬ್ಯಾರಿ ಸಮುದಾಯದ ಗೌರವ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಿ: ಯು.ಟಿ. ಖಾದರ್

KannadaprabhaNewsNetwork |  
Published : Oct 26, 2026, 02:00 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಬ್ಯಾರಿ ಸಮುದಾಯದ ಹಿರಿಯರು ತಮ್ಮ ಪರಿಶ್ರಮ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದಯುತ ಬದುಕಿನ ಮೂಲಕ ಸಮಾಜದಲ್ಲಿ ಗಳಿಸಿರುವ ಗೌರವ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಚಿಕ್ಕಮಗಳೂರು ನಗರಕ್ಕೆ ಭೇಟಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬ್ಯಾರಿ ಸಮುದಾಯದ ಹಿರಿಯರು ತಮ್ಮ ಪರಿಶ್ರಮ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದಯುತ ಬದುಕಿನ ಮೂಲಕ ಸಮಾಜದಲ್ಲಿ ಗಳಿಸಿರುವ ಗೌರವ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಆರೋಗ್ಯ ಸಚಿವರಾದ ಬಳಿಕ ಮೊದಲ ಬಾರಿಗೆ ಚಿಕ್ಕಮಗಳೂರು ನಗರಕ್ಕೆ ಶನಿವಾರ ಆಗಮಿಸಿದ ಯು.ಟಿ. ಖಾದರ್ ಅವರನ್ನು ನಗರದ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎಸ್. ಮೊಹಮ್ಮದ್ ನಿವಾಸದ ಮುಂಭಾಗ ಜಿಲ್ಲಾ ಬ್ಯಾರಿ ಒಕ್ಕೂಟದಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಮುದಾಯದ ಏಳಿಗೆಗೆ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಯುವಕರು ಮುನ್ನಡೆಯಬೇಕು. ಎಲ್ಲ ಧರ್ಮಗಳ ಜನರೊಂದಿಗೆ ಸೌಹಾರ್ದದಿಂದ ಬದುಕುವ ಮೂಲಕ ಸಮುದಾಯದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.ಚಿಕ್ಕಮಗಳೂರಿಗೆ ವಿವಿಧ ಊರುಗಳಿಂದ ಬಂದು ವ್ಯಾಪಾರ-ವಹಿವಾಟು ಆರಂಭಿಸಿದ ಬ್ಯಾರಿ ಸಮುದಾಯದವರು ತಮ್ಮ ಪರಿಶ್ರಮದಿಂದ ವೈಯಕ್ತಿಕ ಅಭಿವೃದ್ಧಿ ಜತೆಗೆ ನಗರದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಹೀಗಾಗಿ ನಗರದ ವಿವಿಧ ಧರ್ಮಗಳ ಜನರಲ್ಲಿ ಬ್ಯಾರಿ ಸಮುದಾಯದ ಬಗ್ಗೆ ಪ್ರೀತಿ, ವಿಶ್ವಾಸ ಮತ್ತು ಗೌರವ ವಿದೆ ಎಂದರು.ರಾಜಕೀಯ ನಾಯಕರು ಮತ್ತು ಜನಪ್ರತಿನಿಧಿಗಳಿಗೆ ಜನರ ಪ್ರೀತಿ, ವಿಶ್ವಾಸ ಹಾಗೂ ಬೆಂಬಲ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಚಿಕ್ಕಮಗಳೂರಿನ ಹಿರಿಯರು, ಯುವಕರು ಮತ್ತು ವಿವಿಧ ಸಮುದಾಯಗಳ ಮುಖಂಡರು ತೋರಿದ ಆತ್ಮೀಯತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯಮಟ್ಟದ ಬ್ಯಾರಿ ಅಕಾಡೆಮಿ ಸ್ಥಾಪನೆ ಸೇರಿದಂತೆ ಸಮುದಾಯದ ಪರ ಕಾರ್ಯಗಳಲ್ಲಿ ಚಿಕ್ಕಮಗಳೂರು ಬ್ಯಾರಿ ಪರಿಷತ್ ಹಾಗೂ ಸಮುದಾಯದ ಮುಖಂಡರು ಮಹತ್ವದ ಪಾತ್ರ ವಹಿಸಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ ಕೊಂಡು, ಅವರ ಸಹಕಾರವನ್ನು ಸಮಾಜದ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಖಾದರ್ ನಾಯಕತ್ವಕ್ಕೆ ಮೆಚ್ಚುಗೆ: ಬ್ಯಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ತರೀಕೆರೆ ಫಾರೂಕ್ ಮಾತನಾಡಿ ಯು.ಟಿ. ಖಾದರ್ ರಾಜ್ಯದ ವಿವಿಧ ಸಮುದಾಯಗಳ ಜನರ ವಿಶ್ವಾಸ ಗಳಿಸಿರುವ ನಾಯಕರು ಎಂದು ಬಣ್ಣಿಸಿದರು. ರಾಜ್ಯ ರಾಜಕಾರಣಕ್ಕೆ ಮುಸ್ಲಿಂ ಸಮುದಾಯದ ಹಲವು ನಾಯಕರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ಪೈಕಿ ಸಿ.ಕೆ. ಜಾಫರ್ ಷರೀಫ್, ಬಿ.ಎ. ಮೊಯ್ದಿನ್ ಮತ್ತು ಸಿ.ಎಂ. ಇಬ್ರಾಹಿಂ ಅವರ ಕೊಡುಗೆ ಸ್ಮರಣೀಯ ಎಂದರು.ವಿಧಾನಸಭೆ ಸಭಾಧ್ಯಕ್ಷರಾಗಿ ಯು.ಟಿ. ಖಾದರ್ ನಿರ್ವಹಿಸಿದ ಜವಾಬ್ದಾರಿ ವಿಧಾನಸೌಧದ ಘನತೆ ಹೆಚ್ಚಿಸಲು ಕೈಗೊಂಡ ಕಾರ್ಯ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಕಾರ್ಯಕ್ರಮ ನಿರ್ವಹಿಸಿದ ರೀತಿ ಶ್ಲಾಘಿಸಿದರು. ಚಿಕ್ಕಮಗಳೂರಿಗೆ ಆಗಮಿಸಿರುವುದು ಸಮುದಾಯದವರಿಗೆ ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜೇಗೌಡ, ಎ.ಎನ್. ಮಹೇಶ್, ಎಂ.ಎಲ್. ಮೂರ್ತಿ, ಜಿಲ್ಲಾ ಬ್ಯಾರಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ನಾಸಿರ್ ಇಂಪಾಲ್, ಗೌರವಾಧ್ಯಕ್ಷ ಕೆ. ಮಹಮ್ಮದ್, ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಮೊಹಮ್ಮದ್, ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನ ಹಮೀದ್, ಬಾಳೆಹೊನ್ನೂರಿನ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ಅಬ್ದುಲ್ ಕಬೀರ್, ಸಹಕಾರ್ಯದರ್ಶಿ ಮೊಹಿದ್ದೀನ್ ಶೇಟ್, ಅಕ್ಬರ್, ಅಬೂಬಕರ್, ಇಬ್ರಾಹಿಂ ಶಾಲಿಮಾರ್, ಇಬ್ರಾಹಿಂ ಸಿ.ಕೆ. ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊನ್ನಾವರದಲ್ಲಿ ಅನಧಿಕೃತ ಬೋಟಿಂಗ್‌ ವ್ಯವಸ್ಥೆಗೆ ಆಕ್ರೋಶ
ಉಳಿಕೆಯ ಹಣ ಒಂದೇ ಕಡೆ ಹೂಡಿಕೆ ಸರಿಯಲ್ಲ: ಸಹನಾ ಬಾಳ್ಕಲ್