ಭಾಷೆ ಉಳಿದರೆ ಸಂಸ್ಕೃತಿ, ಬದುಕು ಉಳಿದಂತೆ : ಡಾ.ಶರಣಬಸಪ್ಪ ಕೋಲ್ಕಾರ

KannadaprabhaNewsNetwork |  
Published : Nov 09, 2026, 02:15 AM IST
ಕನ್ನಡ ಹಿತರಕ್ಷಕ ಸಂಘದ 56ನೇ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಅದರ ಪರಂಪರೆ ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಸಾಹಿತ್ಯ ಮತ್ತಷ್ಟು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ.

ಕಂಪ್ಲಿ: ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ಒಂದು ಸಮುದಾಯದ ಸಂಸ್ಕೃತಿ, ಪರಂಪರೆ ಹಾಗೂ ಜೀವನ ವಿಧಾನದ ಪ್ರತಿಬಿಂಬವಾಗಿದೆ. ಕನ್ನಡ ಭಾಷೆ ಕಳೆದುಕೊಂಡರೆ ಕನ್ನಡಿಗರ ಸಂಸ್ಕೃತಿ ಮತ್ತು ಬದುಕಿನ ಮೌಲ್ಯ ಕಳೆದುಕೊಂಡಂತಾಗುತ್ತದೆ. ಆದ್ದರಿಂದ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಗಂಗಾವತಿಯ ಇತಿಹಾಸ ಸಂಶೋಧಕ ಹಾಗೂ ಕಾರಟಗಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದರು.

ಇಲ್ಲಿನ ವೀರಶೈವ ಸಂಘದ ಆವರಣದಲ್ಲಿ ಕನ್ನಡ ಹಿತರಕ್ಷಕ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಸಂಘದ 56ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಅದರ ಪರಂಪರೆ ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ಸಾಹಿತ್ಯ ಮತ್ತಷ್ಟು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸಾಹಿತ್ಯವು ಮನುಷ್ಯನ ಬದುಕಿಗೆ ಹೊಸ ಪ್ರೇರಣೆ ನೀಡುವುದರೊಂದಿಗೆ ಉತ್ತಮ ಮೌಲ್ಯ ರೂಪಿಸುತ್ತದೆ. ನೆಲ, ನುಡಿ ಹಾಗೂ ಸಂಸ್ಕೃತಿ ಪ್ರೀತಿಸುವವರಿಗೆ ವಯಸ್ಸಿನ ಮಿತಿಯಿಲ್ಲ. ಭಾಷೆ ಮತ್ತು ಸಂಸ್ಕೃತಿ ಕನ್ನಡಿಗರ ಜೀವನ ಪದ್ಧತಿಯ ಅವಿಭಾಜ್ಯ ಅಂಗಗಳಾಗಿವೆ. ಪಂಪನ ಸಾಹಿತ್ಯದಲ್ಲಿನ ಜೀವನ ಮೌಲ್ಯ ಇಂದಿನ ಸಮಾಜಕ್ಕೂ ಮಾದರಿಯಾಗಿವೆ. ಕನ್ನಡಿಗರು ಉತ್ತಮ ಜೀವನ ಮೌಲ್ಯ ಅಳವಡಿಸಿಕೊಂಡು ಬದುಕುವುದೇ ರಾಜ್ಯೋತ್ಸವದ ನಿಜವಾದ ಆಶಯವಾಗಬೇಕು ಎಂದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ-ತಾಯಿಗಳ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜತೆಗೆ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬಾಳುವ ಸಂಸ್ಕಾರ ಮತ್ತು ಮಾನವೀಯ ಗುಣ ಬೆಳೆಸಬೇಕು. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ. ನಾಗರಾಜಸ್ವಾಮಿ ಮಾತನಾಡಿ, ಕನ್ನಡ ಭಾಷೆ ಮತ್ತು ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕನ್ನಡೇತರರಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಅಗತ್ಯವಿದೆ. ಕನ್ನಡ ಭಾಷೆಯ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಾಹ ಆಮಂತ್ರಣ ಪತ್ರಿಕೆ ಕನ್ನಡದಲ್ಲಿಯೇ ಮುದ್ರಿಸುವಂತೆ ಒತ್ತಾಯಿಸುತ್ತೇನೆ. ಕನ್ನಡ ಕಟ್ಟುವ ಕಾರ್ಯವು ಒಂದು ದಿನದ ಆಚರಣೆಗೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು ಎಂದರು.

ಪ್ರಭಾರ ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಮೇಲಿನ ಪ್ರೀತಿ ಕೇವಲ ರಾಜ್ಯೋತ್ಸವದ ದಿನಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಕನ್ನಡ ಹೆಚ್ಚು ಬಳಸುವ ಮೂಲಕ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಂಪ್ಲಿಯಲ್ಲಿ ಮೈಸೂರು-ಮಹಾರಾಷ್ಟ್ರ ಗಡಿ ವಿವಾದದ ಸಂದರ್ಭದಲ್ಲಿ ಹೋರಾಟಗಾರರ ಹಿತಾಸಕ್ತಿ ರಕ್ಷಣೆ ಹಾಗೂ ಕನ್ನಡಪರ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕನ್ನಡ ಹಿತರಕ್ಷಕ ಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಸಂಘವು ಕನ್ನಡಪರ ಹೋರಾಟ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ ಎಂದರು.

ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ ಸ್ವಾಗತಿಸಿದರು. ಪದಾಧಿಕಾರಿ ಮಾ.ಶ್ರೀನಿವಾಸ್, ಕ.ಯಂಕಾರೆಡ್ಡಿ, ಬಂಗಿ ದೊಡ್ಡ ಮಂಜುನಾಥ, ಅಂಬಿಗರ ಮಂಜುನಾಥ, ಕೆ.ಇಂದ್ರಜಿತ್‌ಸಿಂಗ್, ಎಸ್.ಶಾಮಸುಂದರರಾವ್, ಅಯ್ಯೋದಿ ವೆಂಕಟೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಎಂ.ಎಸ್.ಮುನ್ನಾ, ಇಟಗಿ ಹುಲುಗಪ್ಪ, ಶಂಕರ ಮೆಟ್ರಿ, ಎನ್.ಟಿ.ಹುಸೇನ್‌ಬಾಷ, ಎಂ.ಎಂ.ಬಸವರಾಜ, ಸಿ.ಡಿ.ಚಿನ್ನರಾಜು ಮೆಟ್ರಿ, ರವಿಶಂಕರ್ ಮಾವಿನಹಳ್ಳಿ, ಡಿ.ಮಹೇಶ್‌ಬಾಬು, ಡಿ.ಮೌನೇಶ್, ನಾಗಪ್ಪ ಕಂಬಳಿ ಹಾಗೂ ಕಾಳಿಂಗವರ್ಧನ ಹಾದಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಭಾಷಾ ವಿಷಯದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ