ಕನ್ನಡಪ್ರಭ ವಾರ್ತೆ ಕಾರವಾರ
ಬೆಳಗ್ಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಗೋವಾದಿಂದ ಇಲ್ಲಿನ ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಚೀಫ್ ಆಫ್ ದಿ ನೇವಲ್ ಸ್ಟಾಫ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ಬಳಿಕ, ಕಲ್ವರಿ ಕ್ಲಾಸ್‌ನ ಜಲಾಂತರ್ಗಾಮಿ ಐಎನ್ಎಸ್ ವಾಗ್ಶೀರ್‌ನಲ್ಲಿ ನೌಕಾಪಡೆಯ ಸಮವಸ್ತ್ರದಲ್ಲಿ ನೌಕಾಪಡೆಯ ಉನ್ನತ ಅಧಿಕಾರಿಗಳೊಂದಿಗೆ ಕೆಲ ಸಮಯ ಪ್ರಯಾಣಿಸಿದರು. ಬಳಿಕ, ಯುದ್ಧನೌಕೆಗೂ ಭೇಟಿ ನೀಡಿದರು. ಈ ವೇಳೆ, ನೌಕಾಪಡೆ ಸಾಧಿಸಿದ ಪ್ರಗತಿ, ಸ್ವದೇಶಿ ನಿರ್ಮಿತ ಯುದ್ಧ ನೌಕೆಗಳ ಬಗ್ಗೆ ಹಾಗೂ ಕದಂಬ ನೌಕಾನೆಲೆ ಬಗ್ಗೆ ರಾಷ್ಟ್ರಪತಿಯವರಿಗೆ ನೌಕಾಪಡೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ, ನೌಕಾಪಡೆಯ ಸಾಧನೆ, ಸಮರ್ಪಣೆಯನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು.ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಗೋವಾ ಗಡಿಯಿಂದ ಅಂಕೋಲಾ ತನಕ ಮೀನುಗಾರಿಕೆಯನ್ನು ನಿರ್ಬಂಧಿಸಲಾಗಿತ್ತು. ಬಿಗಿಯಾದ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.ಐಎನ್ಎಸ್ ವಾಗ್ಶೀರ್; ಸ್ವದೇಶಿ ತಂತ್ರಜ್ಞಾನದ ಹೆಮ್ಮೆ
ಪ್ರಧಾನಿ ನರೇಂದ್ರ ಮೋದಿ ಅವರಿಂದ 2025ರ ಜನವರಿ 15ರಂದು ಅಧಿಕೃತವಾಗಿ ಲೋಕಾರ್ಪಣೆಗೊಂಡ ಈ ನೌಕೆ, ಸಮುದ್ರದ ಆಳದಲ್ಲಿ ಗಂಟೆಗೆ ಗರಿಷ್ಠ 37 ಕಿ. ಮೀ. (20 ನಾಟ್ಸ್) ವೇಗದಲ್ಲಿ ಚಲಿಸುವ ಅದ್ಭುತ ಸಾಮರ್ಥ್ಯ ಹೊಂದಿದೆ. ಸುಮಾರು 350 ಮೀಟರ್ ಆಳದವರೆಗೆ ಮುಳುಗಬಲ್ಲದು. ಇದು ''''''''ಕಲ್ವರಿ'''''''' ದರ್ಜೆಯ ಜಲಾಂತರ್ಗಾಮಿಯಾಗಿದ್ದು, ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ನೀಡಿದೆ. ಫ್ರೆಂಚ್ ಸ್ಕಾರ್ಪೀನ್ ವಿನ್ಯಾಸದ ಆಧಾರದ ಮೇಲೆ ಮುಂಬೈನ ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ಸಂಪೂರ್ಣವಾಗಿ ಸ್ವದೇಶಿಯಾಗಿ ನಿರ್ಮಾಣಗೊಂಡ ಕಲ್ವರಿ ದರ್ಜೆಯ ಅತ್ಯಾಧುನಿಕ ಜಲಾಂತರ್ಗಾಮಿ ಇದಾಗಿದೆ. ವೈರಿಗಳಿಗೆ ಪತ್ತೆ ಹಚ್ಚಲಾಗದ ''''''''ಸ್ಟೆಲ್ತ್'''''''' ತಂತ್ರಜ್ಞಾನ, ಹೆವಿವೇಯ್ಟ್ ಟಾರ್ಪಿಡೊಗಳು ಮತ್ತು ಎಕ್ಸೋಸೆಟ್ ಹಡಗು ವಿರೋಧಿ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ವಿಶ್ವದ ಶಬ್ಧರಹಿತ, ಬಹುಪಯೋಗಿ ಡೀಸೆಲ್-ವಿದ್ಯುತ್ ಜಲಾಂತರ್ಗಾಮಿ ನೌಕೆಗಳಲ್ಲಿ ಇದು ಒಂದಾಗಿದೆ. ಸುಧಾರಿತ ಸೋನಾರ್ ವ್ಯವಸ್ಥೆಗಳಿಂದ ಶಸ್ತ್ರಸಜ್ಜಿತವಾದ ಈ ನೌಕೆಯನ್ನು ಗುಪ್ತಚರ ಸಂಗ್ರಹಣೆ, ಕಣ್ಗಾವಲು ವ್ಯವಸ್ಥೆ ಸೇರಿದಂತೆ ವ್ಯಾಪಕ ಶ್ರೇಣಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.ಈ ಮಧ್ಯೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ದೀರ್ಘಕಾಲೀನ ಭದ್ರತಾ ಹಿತಾಸಕ್ತಿಗಳನ್ನು ಪರಿಗಣಿಸಿ ಭಾರತೀಯ ನೌಕಾಪಡೆಯು ಕಾರವಾರ ನೆಲೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.ಮೊದಲ ಮಹಿಳಾ ರಾಷ್ಟ್ರಪತಿ:ಕಾರವಾರ ಸಮೀಪದ ಐಎನ್ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ. ಜತೆಗೆ, ಸಬ್ ಮರೀನ್‌ನಲ್ಲಿ ಪ್ರಯಾಣಿಸಿದ ಮೊದಲ ಮಹಿಳಾ ರಾಷ್ಟ್ರಪತಿಯೂ ದ್ರೌಪದಿ ಮುರ್ಮು ಅವರಾಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಅವರು ಹರಿಯಾಣದ ಅಂಬಾಲಾ ವಾಯುಪಡೆ ನಿಲ್ದಾಣದಿಂದ ದೇಶದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ, ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎಂಬ ಖ್ಯಾತಿಗೆ ಒಳಗಾಗಿದ್ದರು. ಇದಕ್ಕೂ ಮೊದಲು, 2023ರ ಏಪ್ರಿಲ್ 8ರಂದು ಅವರು ತೇಜ್‌ಪುರ ವಾಯುಪಡೆ ನಿಲ್ದಾಣದಿಂದ ಸುಖೋಯ್ -30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು. ಇದರೊಂದಿಗೆ ಭಾರತೀಯ ವಾಯುಪಡೆಯ ಎರಡು ವಿಭಿನ್ನ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ದೇಶದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.