ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಪ್ರೆಸ್‌ಟ್ರಸ್ಟ್ ವತಿಯಿಂದ ಪತ್ರಿಕಾ ಭವನದಲ್ಲಿ ಜು.31ರಂದು ಬೆಳಗ್ಗೆ 10.30ಕ್ಕೆ ಪತ್ರಿಕಾ ದಿನಾಚರಣೆ ಅಂಗವಾಗಿ ಪ್ರತಿಭಾ ಪುರಸ್ಕಾರ, ವೃತ್ತಿ ಬಂಧುಗಳಿಗೆ ಸನ್ಮಾನ, ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಕಾರ್ಯದರ್ಶಿ ನಾಗರಾಜ್ ನೇರಿಗೆ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಪಿ. ತ್ಯಾಗರಾಜ್, ನೆರವೇರಿಸಿ ಉಪನ್ಯಾಸ ನೀಡುವರು. ಬಳಿಕ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವೃತ್ತಿಬಂಧುಗಳಿಗೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮದ ಭಾಗವಾಗಿ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ಶಿವಮೊಗ್ಗ ನಂದನ್ ನೆನಪಿಗಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಪ್ರದರ್ಶನವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಹಿರಿಯ ವಾರ್ತಾಧಿಕಾರಿ ಆರ್. ಮಾರುತಿ ವಹಿಸಲಿದ್ದು, ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ವೃತ್ತಿ ಬಂಧುಗಳಿಗೆ ಸನ್ಮಾನ:ಒಂದು ಪತ್ರಿಕೆ ಪ್ರಕಟವಾಗಲು ಹಲವರ ಶ್ರಮ ಇರುತ್ತದೆ. ಫೋಟೋಗ್ರಾಫರ್, ವಿತರಕರು, ಮುದ್ರಣ ವಿಭಾಗ, ಜಾಹೀರಾತು, ಗ್ರಾಫಿಕ್ ಡಿಸೈನರ್ ಇವುಗಳೆಲ್ಲವೂ ಮುಖ್ಯವಾಗುತ್ತವೆ. ಈ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಮಾಡಿದವರನ್ನು ಗುರುತಿಸಿ ಟ್ರಸ್ಟ್ ವತಿಯಿಂದ ಅವರನ್ನು ಸನ್ಮಾನಿಸಲಾಗುತ್ತಿದೆ. ಶಿಕಾರಿಪುರ ಸರ್ವಜ್ಞ ಪತ್ರಿಕೆಯ ಸಂಪಾದಕ ಎಸ್.ಬಿ. ಮಠದ್, ಝೇಂಕಾರ್ ಅಡ್ವೆಟೈಸರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ನರೇಶ್‌ಕುಮಾರ್ , ವಿಜಯ ಕರ್ನಾಟಕ ಪತ್ರಿಕೆಯ ಮುದ್ರಣ ವಿಭಾಗದ ವ್ಯವಸ್ಥಾಪಕ ನಾರಪ್ಪ ಗೌಡ್ರು, ವಿಜಯ ಕರ್ನಾಟಕ ಹಿರಿಯ ಗ್ರಾಫಿಕ್ ಡಿಸೈನರ್ ಎಂ.ಸಿ. ರಾಜು, ಕನ್ನಡ ಪ್ರಭ ಜಾಹೀರಾತು ವಿಭಾಗದ ಮ್ಯಾನೇಜರ್ ಕಾರ್ತಿಕ್ ಚಂದ್ರಮೌಳಿ, ವಿಜಯವಾಣಿಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ರಿಪಬ್ಲಿಕ್ ಕನ್ನಡದ ವೀಡಿಯೋ ಜರ್ನಲಿಸ್ಟ್ ಚಿರಾಗ್, ಹಿರಿಯ ಪತ್ರಿಕಾ ವಿತರಕ ಬಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ವಿವರಿಸಿದರು.
ಹಾಗೆಯೇ ಪತ್ರಕರ್ತರ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರನ್ನು ಕೂಡ ಸನ್ಮಾನಿಸಲಾಗುತ್ತದೆ. ಈಗಾಗಲೇ ಸುಮಾರು 11ಕ್ಕೂ ಹೆಚ್ಚು ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.ಗೋಷ್ಠಿಯಲ್ಲಿ ಟ್ರಸ್ಟಿನ ಪದಾಧಿಕಾರಿಗಳಾದ ಜೇಸುದಾಸ್, ಆರಗ ರವಿ, ಸಂತೋಷ್ ಕಾಚಿನಕಟ್ಟೆ, ಗೋ.ವ. ಮೋಹನ್, ಕಿರಣ್ ಕಂಕಾರಿ ಇದ್ದರು.