‘ರೈಲ್ವೇ ವಲಯ ಬದಲಾವಣೆ’ ಹಬ್ಬದಂತೆ ಆಚರಿಸಿ ಒತ್ತಡ ಹೇರಬೇಕು: ಧೀರಜ್ ಶಾಂತಿ

KannadaprabhaNewsNetwork |  
Published : Aug 28, 2026, 02:45 AM IST
ಹಾನಗಲ್ಲ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧ | Kannada Prabha

ಸಾರಾಂಶ

ಮಂಗಳೂರು ರೈಲ್ವೆ ವಲಯ ಮೈಸೂರು ವಿಭಾಗಕ್ಕೆ ಸೇರಿದ್ದು, ನಮ್ಮೆಲ್ಲರಿಗೆ ಬಹಳ ದೊಡ್ಡ ಹಬ್ಬದಂತೆ ಆಚರಣೆಯಾಗಬೇಕಾಗಿತ್ತು, ಯಾಕೆಂದರೆ ಮಂಗಳೂರು ವಲಯ ನಮಗೆ ದಕ್ಕಿರುವುದರಿಂದ ನಮ್ಮ ರಾಜ್ಯಕ್ಕೆ ಬಹಳ ದೊಡ್ಡ ಲಾಭದಾಯಕ, ಅನುಕೂಲಕರ ಆಗಲಿದೆ, ಆದ್ದರಿಂದ ನಮ್ಮ ಜನಪ್ರತಿನಿಧಿಗಳು ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಸ್ವಾಗತಿಸಬೇಕು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಎನ್. ಶಾಂತಿ ಹೇಳಿದ್ದಾರೆ.

ಉಡುಪಿ: ಮಂಗಳೂರು ರೈಲ್ವೆ ವಲಯ ಮೈಸೂರು ವಿಭಾಗಕ್ಕೆ ಸೇರಿದ್ದು, ನಮ್ಮೆಲ್ಲರಿಗೆ ಬಹಳ ದೊಡ್ಡ ಹಬ್ಬದಂತೆ ಆಚರಣೆಯಾಗಬೇಕಾಗಿತ್ತು, ಯಾಕೆಂದರೆ ಮಂಗಳೂರು ವಲಯ ನಮಗೆ ದಕ್ಕಿರುವುದರಿಂದ ನಮ್ಮ ರಾಜ್ಯಕ್ಕೆ ಬಹಳ ದೊಡ್ಡ ಲಾಭದಾಯಕ, ಅನುಕೂಲಕರ ಆಗಲಿದೆ, ಆದ್ದರಿಂದ ನಮ್ಮ ಜನಪ್ರತಿನಿಧಿಗಳು ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಸ್ವಾಗತಿಸಬೇಕು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಧೀರಜ್ ಎನ್. ಶಾಂತಿ ಹೇಳಿದ್ದಾರೆ.

ಒಂದು ರೈಲ್ವೆ ವಲಯವು ತಮ್ಮ ಕೈತಪ್ಪಿದ್ದಕ್ಕೆ ಕೇರಳ ರಾಜ್ಯದ ಎಲ್ಲಾ ಪಕ್ಷಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸುತ್ತಿವೆ ಎಂದರೆ, ನಮ್ಮ ಮಂಗಳೂರು ವಲಯದಿಂದ ಕೇರಳಂಕ್ಕೆ ಎಷ್ಟು ಲಾಭವಾಗುತ್ತಿತ್ತು ಎಂದು ಊಹಿಸಬಹುದು. ಇದುವರೆಗೆ ನಮಗೆ ಅರಿವಿಲ್ಲದೇ ಈ ಎಲ್ಲಾ ಲಾಭ, ಅನುಕೂಲಗಳೆಲ್ಲಾ ಕೇರಳಂ ಅನುಭವಿಸುತಿತ್ತು, ಈಗ ಅದು ತಪ್ಪುವುದರಿಂದಲೇ ಕೇರಳಂನಲ್ಲಿ ಅಷ್ಟು ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುತ್ತಿರುವುದು ಎನ್ನುತ್ತಾರೆ ಧೀರಜ್ ಶಾಂತಿ.ಕೇರಳದ ಪಾಲ್ಘಾಟ್ ವಿಭಾಗದ ಶೇ 90 ರಷ್ಟುಆದಾಯ ಮಂಗಳೂರು ರೈಲ್ವೆ ವಲಯದಿಂದಲೇ ಹೋಗುತ್ತಿದೆ, ಅಂದರೆ ಆರಂಭದಿಂದಲೂ ಇಷ್ಟು ದೊಡ್ಡ ಆದಾಯದಿಂದ ಕರ್ನಾಟಕ ವಂಚಿತವಾಗುತ್ತಿದೆ, ನಮ್ಮ ಕಣ್ಣೆದುರಲ್ಲೇ ಅದು ಕೇರಳ‍ಂನ ಪಾಲಾಗುತ್ತಿದೆ. ಮಂಗಳೂರಿನಿಂದ ಕೋಟ್ಯಾಂತರ ಆದಾಯ ಪಡೆಯುವ ಪಾಲ್ಘಾಟ್ ವಿಭಾಗ, ರೈಲು ನಿಲ್ದಾಣಗಳ, ಹಳಿಗಳ, ಪ್ರಯಾಣಿಕರಿಗೆ ಸೌಕರ್ಯಗಳ ಅಭಿವೃದ್ಧಿಯ ವಿಷಯ ಬಂದಾಗ ಮಾತ್ರ ಮಂಗಳೂರನ್ನು ಪೂರ್ಣ ಕಡೆಗಣಿಸಿದೆ !ಕೊನೆಗೂ ನಮ್ಮ ರೈಲ್ವೆ ವಲಯದ ಆದಾಯ ನಮ್ಮಲ್ಲಿಯೇ ಉಳಿಯುವ, ನಮ್ಮ ರಾಜ್ಯದ ರೈಲ್ವೆಗೆ ಬಳಕೆಯಾಗುವ ಕಾಲ ಸನ್ನಿಹಿತವಾಗುತ್ತಿದೆ. ಇದರಿಂದ ಕೇರಳಂ ಕೆರಳಿದೆ ಎನ್ನುವುದು ಅವರ ಅಭಿಪ್ರಾಯ.ಕೇವಲ ಮಂಗಳೂರು ವಲಯದ ಪ್ರಯಾಣಿಕ ರೈಲುಗಳಿಂದ ಇಷ್ಟು ದೊಡ್ಡ ಲಾಭ ಬರುತ್ತಿರುವುದಲ್ಲ, ಮಂಗಳೂರು ದೇಶದ ಬೃಹತ್ ವಾಣಿಜ್ಯ ಬಂದರಾಗಿರುವುದರಿಂದ ಇಲ್ಲಿ ಆಮದಾಗುವ ಮತ್ತು ರಫ್ತಾಗುವ ಸರಕುಗಳ ಸಾಗಣಿಕೆಗೆ ಗೂಡ್ಸ್‌ ರೈಲ್ವೆಯೇ ಅತ್ಯುತ್ತಮ ಮಾರ್ಗವಾಗಿದೆ, ಇಲ್ಲಿನ ಎಂಸಿಎಫ್, ಯುಪಿಸಿಎಲ್‌ಗಳೂ ಮಂಗಳೂರು ವಲಯದ ಗೂಡ್ಸ್ ರೈಲುಗಳ ದೊಡ್ಡ ಬಳಕೆದಾರರಾಗಿವೆ, ಜೊತೆಗೆ ಕಾಫಿ, ಅಡಕೆ ಸಾಗಾಟವೂ ಇಲ್ಲಿನ ಗೂಡ್ಸ್ ರೈಲುಗಳಲ್ಲಿಯೇ ಆಗುತ್ತದೆ. ಈ ಗೂಡ್ಸ್‌ ರೈಲಿನ ಪೂರ್ಣ ಆದಾಯ ಪಾಲ್ಘಾಟ್‌ ವಿಭಾಗಕ್ಕೆ ಹೋಗುತ್ತಿದೆ.ಮಂಗಳೂರು ನೆಲ ನಮ್ಮದು, ಬಂದರು ನಮ್ಮದು, ರೈಲು ಬಳಸುವವರು ನಾವು, ಸರಕುಗಳು ನಮ್ಮದು, ಆದಾಯ ಕೊಡುವವರು ನಾವು, ಆದರೆ ಆದಾಯ ಹೋಗುವುದು ಮಾತ್ರ ಕೇರಳಂಗೆ, ಇದು ಇದುವರೆಗೆ ನಡೆಯುತ್ತಿತ್ತು, ನಮಗೆ ಮೋಸವಾಗುತ್ತಿತ್ತು.ಇನ್ನು ಮುಂದೆ ನಡೆಯಬಾರದು, ಹಾಗಂತ ಕೇಂದ್ರ ರೈಲ್ವೆ ಮಂತ್ರಿ ಸೋಮಣ್ಣ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಕೇರಳಂನ ಸರ್ವಪಕ್ಷ ನಾಯಕರ ಉಗ್ರ ಪ್ರತಿಭಟನೆಯಿಂದ ಕೇಂದ್ರ ಸರ್ಕಾರದ ನಿರ್ಧಾರ ಸಡಿಲವಾಗದಂತೆ ನೋಡಿಕೊಳ್ಳಬೇಕು. ಆದ್ದರಿಂದಲೇ ನಮ್ಮೆಲ್ಲಾ ನಾಯಕರು, ಜನಪ್ರತಿನಿಧಿಗಳು, ರೈಲು ಬಳಕೆದಾರರು, ಮಂಗಳೂರು ವಲಯ ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರವನ್ನು ಒಂದು ದೊಡ್ಡ ಹಬ್ಬದ ರೀತಿಯಲ್ಲಿ ಆಚರಿಸಿ, ಸ್ವಾಗತಿಸಬೇಕು ಮತ್ತು ಈ ನಿರ್ಧಾರ ಸಡಿಲವಾಗದಂತೆ ಒತ್ತಡ ಹೇರಬೇಕು ಎಂದು ಧೀರಜ್ ಶಾಂತಿ ಹೇಳಿದ್ದಾರೆ. ಬೇಕಾದ ರೈಲುಗಳನ್ನು ಹಕ್ಕಿನಿಂದ ಪಡೆಯಬಹುದು: ಮಂಗಳೂರು ರೈಲ್ವೆ ವಲಯವು ನಮ್ಮದೇ ರಾಜ್ಯದ ಆಸ್ತಿಯಾಗುವುದರಿಂದ, ಆದರ ಆದಾಯದ ದೊಡ್ಡಪಾಲು ನಮ್ಮ ರೈಲ್ವೆಯ ಅಭಿವೃದ್ಧಿಗೆ ಬಳಕೆಯಾಗುವುದರ ಜೊತೆಗೆ, ನಮ್ಮ ರಾಜ್ಯಕ್ಕೆ ಬೇಕಾದ ರೈಲುಗಳನ್ನು ನಾವು ಹಕ್ಕಿನಿಂದ ಪಡೆಯುವುದಕ್ಕೆ ಸಾಧ್ಯವಾಗುತ್ತದೆ, ಯಾರದೇ ಮರ್ಜಿಗೆ ಕಾಯಬೇಕಾಗಿಲ್ಲ. ಅಲ್ಲದೇ ಇದುವರೆಗೆ ಮಂಗಳೂರು ರೈಲ್ವೆ ವಲಯವು ಬಹುತೇಕ ಮಳಯಾಳಂಮಯಂ ಆಗಿತ್ತು, ಇದು ಕನ್ನಡಿಗರಿಗೆ ಸಾಕಷ್ಟು ಕಿರಿಕಿರಿಗೂ ಕಾರಣವಾಗಿತ್ತು, ಇನ್ನು ಇಲ್ಲಿ ಕನ್ನಡದಲ್ಲಿಯೇ ಆಡಳಿತ ನಡೆಸುವುದಕ್ಕೆ ಸಾಧ್ಯವಾಗಲಿದೆ ಎಂದು ಧೀರಜ್ ಶಾಂತಿ ಹೆಮ್ಮೆಯಿಂದ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಪೋಕ್ಲು ವ್ಯಾಪ್ತಿಯಲ್ಲಿ ಸಂಭ್ರಮದ ಈದ್ ಮಿಲಾದ್
ಟಿಟಿ ಮೇಲೆ ಲಾರಿ ಉರುಳಿ ನಾಲ್ವರಿಗೆ ಗಾಯ