ಶಿಕ್ಷಣ ಸಂಸ್ಥೆಗಳಿಂದ ಅಂಕ ಗಳಿಸುವಂತೆ ಮಕ್ಕಳ ಮೇಲೆ ಒತ್ತಡ: ಡಾ.ನಿಶ್ಚಲಾನಂದನಾಥ ಸ್ವಾಮೀಜಿ

KannadaprabhaNewsNetwork | Updated : Feb 04 2025, 01:11 PM IST

ಸಾರಾಂಶ

ಪ್ರಸ್ತುತ ಮಕ್ಕಳಿಗೆ ತೆಲೆ ಬೆಳೆಸುವ ಶಿಕ್ಷಣಕ್ಕಿಂತ ಮಕ್ಕಳಿಗೆ ಹೃದಯವಂತಿಕೆ ಬೆಳೆಸುವ ಶಿಕ್ಷಣ ಅಗತ್ಯವಾಗಿದೆ. ಜತಗೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಹಾಗೂ ದೇಶದ ಘನತೆ, ಗೌರವ ಹೆಚ್ಚಿಸುವ ರಾಷ್ಟ್ರ ಪ್ರೇಮ ಬೆಳೆಸುವ ಶಿಕ್ಷಣವಾಗಬೇಕು. 

  ಪಾಂಡವಪುರ : ಪ್ರಸ್ತುತ ಶಿಕ್ಷಣ ಸಂಸ್ಥೆಗಳು ಕೇವಲ ಅಂಕಗಳಿಸುವಂತೆ ಮಕ್ಕಳಿಗೆ ಒತ್ತಡ ಹಾಕುತ್ತಿವೆ. ಇದು ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣ ಭವಿಷ್ಯತ್ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರತಿಬಿಂಬ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ. ಶಿಕ್ಷಣದ ಜತೆಗೆ ಟೆಕ್ನಾಲಜಿ, ಹೊಸಹೊಸ ಅನ್ವೇಷಣೆ ಮೂಲಕ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.

ಪ್ರಸ್ತುತ ಮಕ್ಕಳಿಗೆ ತೆಲೆ ಬೆಳೆಸುವ ಶಿಕ್ಷಣಕ್ಕಿಂತ ಮಕ್ಕಳಿಗೆ ಹೃದಯವಂತಿಕೆ ಬೆಳೆಸುವ ಶಿಕ್ಷಣ ಅಗತ್ಯವಾಗಿದೆ. ಜತಗೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಹಾಗೂ ದೇಶದ ಘನತೆ, ಗೌರವ ಹೆಚ್ಚಿಸುವ ರಾಷ್ಟ್ರ ಪ್ರೇಮ ಬೆಳೆಸುವ ಶಿಕ್ಷಣವಾಗಬೇಕು. ಮಕ್ಕಳಿಗೆ ದೇಶ ಪ್ರೇಮ ಬೆಳೆಸುವ ಶಿಕ್ಷಣ ನೀಡಿದರೆ ತಮ್ಮ ಹಿತಾಶಕ್ತಿ ಜತೆಗೆ ತಂದೆ-ತಾಯಿ, ಸಮಾಜದ ಬಗ್ಗೆಯೂ ಇಚ್ಚಾಶಕ್ತಿ ಬೆಳೆಯುತ್ತದೆ. ಈ ಬಗ್ಗೆ ಪೋಷಕರು ಹೆಚ್ಚು ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಟ್ಟಣಕ್ಕೆ ಉತ್ತಮ ಶಿಕ್ಷಣ ಸಂಸ್ಥೆ, ಆಸ್ಪತ್ರೆಯ ಅಗತ್ಯವಿತ್ತು. ಭವಿಷ್ಯತ್ ಶಿಕ್ಷಣ ಸಂಸ್ಥೆ ಆರಂಭವಾಗುವ ಮೂಲಕ ಒಳ್ಳೆಯ ಶಿಕ್ಷಣ ಸಂಸ್ಥೆ ಕೊರತೆ ನೀಗಿಸಿದೆ. ಪಟ್ಟಣದ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಆಟವಾಡಲು ಉತ್ತಮ ಮೈದಾವನೇ ಇಲ್ಲವಾಗಿದೆ. ಆದರೆ, ಭವಿಷ್ಯತ್ ಶಿಕ್ಷಣ ಸಂಸ್ಥೆ ಉತ್ತಮ ಶಾಲಾ ಕೊಠಡಿ ಜತೆಗೆ, ಒಳ್ಳೆಯ ಆಟದ ಮೈದಾನವನ್ನು ಹೊಂದುವ ಜತೆಗೆ ಮಕ್ಕಳಲ್ಲಿ ಬೌತಿಕ ಹಾಗೂ ಬೌದ್ಧಿಕ ಶಿಸ್ತು ಬೆಳೆಸಲು ಮುಂದಾಗಿದೆ. ಅದೇರೀತಿ ಪಟ್ಟಣದಲ್ಲಿ ಉತ್ತಮವಾದ ಆಸ್ಪತ್ರೆ ಅವಶ್ಯಕತೆ ಇದೆ ಎಂದರು.

ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಗುರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಹೃದಯವಂತಿಕೆ, ಮಾನವೀಯ ಮೌಲ್ಯಗಳ ಬೆಳಸುವ ಸಂಬಂಧಿಸಿದ ಶಿಕ್ಷಣ ನೀಡಬೇಕು ಎಂದರು. ಇದೇ ವೇಳೆ ಶಾಲಾ ಮಕ್ಕಳಿಂದ ಮನಮೋಹನ ನೃತ್ಯ ಪ್ರದರ್ಶನ ಮೂಡಿ ಬಂದವು.

ಸಮಾರಂಭದಲ್ಲಿ ಬ್ಯಾಂಕ್ ಆಫ್ ಬರೋಡಾ ರೀಜನಲ್ ಮೇನೆಜರ್ ಡಾ.ನವೀನ್‌ಕುಮಾರ್, ಸಂಸ್ಥೆ ಅಧ್ಯಕ್ಷೆ, ಪ್ರಾಂಶುಪಾಲೆ ಮಾನಸ ಅನಿಲ್‌ಕುಮಾರ್, ಆಡಳಿತಾಧಿಕಾರಿ ಎಸ್.ಎನ್.ನಾರಾಯಣಗೌಡ, ಕಾರ್‍ಯದರ್ಶಿ ಅನಿಲ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article