ಆಶ್ರಯ ಮನೆ ₹ 3 ಲಕ್ಷ ನೀಡಲು ಸರ್ಕಾರಕ್ಕೆ ಒತ್ತಡ: ಶಾಸಕ ಕುಲಕರ್ಣಿ

KannadaprabhaNewsNetwork | Published : Aug 13, 2024 12:45 AM

ಸಾರಾಂಶ

2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿದ್ದಿರುವ ಮನೆಗಳಿಗೆ ₹ 5 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಆದರೆ ಕೆಲವು ಮನೆಗಳಿಗೆ ಪರಿಹಾರ ಬಂದಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದು ವಿನಯ ಕುಲಕರ್ಣಿ ಹೇಳಿದರು.

ಧಾರವಾಡ:

ಪ್ರಸ್ತುತ ಆಶ್ರಯ ಮನೆಗಳಿಗೆ ₹ 1.30 ಲಕ್ಷ ಅನುದಾನವಿದೆ. ಇದರಿಂದ ಮನೆ ನಿರ್ಮಾಣ ಅಸಾಧ್ಯ. ಹೀಗಾಗಿ ಕನಿಷ್ಠ ₹ 3.50 ಲಕ್ಷ ನಿಗದಿಪಡಿಸಲು ಸರ್ಕಾರಕ್ಕೆ ಒತ್ತಡ ಹಾಕಲಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದರು.

ಸಮೀಪದ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಧಾರವಾಡ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವೆಂಕಟಾಪೂರ ಸಿದ್ದರ ಕಾಲನಿ ಆಶ್ರಯ ಮನೆ ಬಿದಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಅಲ್ಲಿ ನಿರ್ಮಾಣವಾಗಿದ್ದ ಇತರೆ ಆಶ್ರಯ ಮನೆಗಳು ಸಹ ಗಟ್ಟಿಯಾಗಿಲ್ಲ. ಅವುಗಳನ್ನು ತೆರವುಗೊಳಿಸಿ ಹೊಸ ಮನೆಗಳ ನಿರ್ಮಾಣಕ್ಕೆ ಸೂಚಿಸಿದೆ ಎಂದರು.

ಪ್ರಸಕ್ತ ಅತಿವೃಷ್ಟಿಗೆ ಗ್ರಾಮೀಣ ರಸ್ತೆಗಳು ಮತ್ತು ಮನೆಗಳು ಹಾನಿಯಾಗಿವೆ. ಸಮೀಕ್ಷೆ ಕಾರ್ಯವೂ ನಡೆದಿದೆ. ಬಿದ್ದ ಮನೆಗಳಿಗೆ ಪರಿಹಾರ ನೀಡಿದ್ದು, ಗ್ರಾಮೀಣ ಅಭಿವೃದ್ಧಿಗೆ ಬದ್ಧ ಎಂದ ಅವರು, ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಇಲಾಖೆ ಸಮಸ್ಯೆಗಳು, ಅಪೂರ್ಣ ಆಶ್ರಯ ಮನೆ ಅಲ್ಲದೇ, ಕೆಲವು ಸ್ಥಳೀಯ ಮಟ್ಟದಲ್ಲಿ ಪರಿಹರಿಸಿದೆ. ಕೆಲವು ಸರ್ಕಾರದ ಮಟ್ಟದಲ್ಲಿ ಪರಿಹರಿಸುವುದಾಗಿ ತಿಳಿಸಿದರು. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 400ಕ್ಕೂ ಅಧಿಕ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ನಿಯಂತ್ರಣಕ್ಕೆ ಸೂಚಿಸಿದ್ದೇನೆ. ಕುಡಿಯುವ ನೀರಿನ ಜತೆ ಚರಂಡಿ ನೀರು ಸೇರ್ಪಡೆ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದರು.

2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿದ್ದಿರುವ ಮನೆಗಳಿಗೆ ₹ 5 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಆದರೆ ಕೆಲವು ಮನೆಗಳಿಗೆ ಪರಿಹಾರ ಬಂದಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದ ಅವರು, ಬಿಜೆಪಿ ಸರ್ಕಾರ ಲೋಕೋಪಯೋಗಿ, ಸಣ್ಣ ಹಾಗೂ ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ ಹೀಗೆ ಬೇರೆ ಬೇರೆ ಇಲಾಖೆಯಲ್ಲಿ ಬೇಕಾಬಿಟ್ಟಿ ಟೆಂಡರ್ ಕರೆದು, ಅನುದಾನ ಬಿಡುಗಡೆ ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ, ಈ ಕಾಮಗಾರಿಗಳಿಗೆ ಕಾಂಗ್ರೆಸ್ ಅನುದಾನ ನೀಡುತ್ತಿದೆ. ಜತೆಗೆ ಶಾಸಕರಿಗೂ ಪ್ರತಿವರ್ಷ ಅನುದಾನವೂ ಕೊಡುತ್ತಿದೆ. ಬೆಲ್ಲದ ಅವರು ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪ ಸುಳ್ಳು. ಅವರ ಸರ್ಕಾರದಲ್ಲಿ ಕೈ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದಾರೆ? ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಗುತ್ತಿಗೆದಾರರ ಬಾಕಿ ಹಣ ₹ 26 ಸಾವಿರ ಕೋಟಿ ಇದೆ. ಅದನ್ನೂ ಸಹ ಹಂತ-ಹಂತವಾಗಿ ಸರ್ಕಾರ ಬಿಡುಗಡೆ ಮಾಡುತ್ತಿದೆ ಎಂದರು.

ಇದೇ ವೇಳೆ ಇಬ್ಬರು ರೈತರಿಗೆ ಸರ್ಕಾರದ ರಿಯಾಯ್ತಿ ದರದಲ್ಲಿ ಟ್ರ್ಯಾಕ್ಟರ್‌ ಹಾಗೂ ಮನೆ ಬಿದ್ದ ಕುಟುಂಬಗಳಿಗೆ ಚೆಕ್‌ ವಿರಿಸಿದರು. ತಹಸೀಲ್ದಾರ್‌ ಡಾ. ಡಿ.ಎಚ್‌. ಹೂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ ಇದ್ದರು.

Share this article