ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ

KannadaprabhaNewsNetwork |  
Published : Nov 03, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ತಂದು, ಅವರ ಸೌಲಭ್ಯ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಭರವಸೆ ನೀಡಿದರು.

- ಶಾಸಕ ಎಚ್.ಡಿ. ತಮ್ಮಯ್ಯ ಅಭಿಮತ। ನೂತನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪರಿಚಯ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ತಂದು, ಅವರ ಸೌಲಭ್ಯ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಭರವಸೆ ನೀಡಿದರು.ನಗರದ ತಾಪಂನಲ್ಲಿ ಸೋಮವಾರ ಚಿಕ್ಕಮಗಳೂರು ತಾಲೂಕಿನ ನೂತನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆಯೋಜಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇವರ ಸೇವೆ ಅತ್ಯಂತ ಗೌರವಯುತವಾಗಿದ್ದು ಇದು ಕೇವಲ ಉದ್ಯೋಗವಲ್ಲ, ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಜವಾಬ್ದಾರಿ. 3-6 ವರ್ಷದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಆರೈಕೆ ಒದಗಿಸುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ವಿಶೇಷವಾಗಿ ಬಡ ಕುಟುಂಬಗಳ ಮಕ್ಕಳಿಗೆ ಅಂಗನ ವಾಡಿಗಳು ಆಸರೆಯಾಗಿವೆ ಎಂದರು.ಒಂದು ಮನೆಯಲ್ಲಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದೇ ಪೋಷಕರಿಗೆ ಸವಾಲಾಗಿರುವಾಗ ಅಂಗನವಾಡಿಗಳಲ್ಲಿ 12-40 ಮಕ್ಕಳವರೆಗೆ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಹೀಗಾಗಿ ಮಕ್ಕಳ ಮನಸ್ಥಿತಿ ಅರಿತು ಪ್ರೀತಿ, ಕಾಳಜಿ ಮತ್ತು ತಾಳ್ಮೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಪ್ರಸ್ತುತ ಅಂಗನವಾಡಿ ಸಹಾಯಕಿಯರಿಗೆ ₹6ರಿಂದ 7 ಸಾವಿರ ಹಾಗೂ ಕಾರ್ಯಕರ್ತೆಯರಿಗೆ ₹12ರಿಂದ 13 ಸಾವಿರ ಗೌರವಧನ ದೊರೆಯುತ್ತಿದೆ. ಇದು ಹೆಚ್ಚಾಗಬೇಕಿದ್ದು, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಸದನ ಸಮಿತಿ ಯಲ್ಲಿ ಈ ಕುರಿತು ಚರ್ಚಿಸಿ ಶಿಫಾರಸು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಗಮನ ಸೆಳೆದು ಗೌರವಧನ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು ಎಂದರು.ರಾಜ್ಯ ಸರ್ಕಾರದ ಪಾಲಿನ ಅನುದಾನ ಮತ್ತು ಗೌರವಧನ ಹೆಚ್ಚಳದ ಜೊತೆಗೆ ಕೇಂದ್ರ ಸರ್ಕಾರದ ಪಾಲಿನ ಅನುದಾನ ಹೆಚ್ಚಿಸುವ ಕುರಿತು ಸಂಸತ್ ಸದಸ್ಯರ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸ ಲಾಗು ವುದು ಎಂದರು.ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗೌರವಧನ ಮಕ್ಕಳ ಉತ್ತಮ ಶಿಕ್ಷಣಕ್ಕೆ ಬಳಸಿ ಅವರನ್ನು ವಿದ್ಯಾವಂತರಾಗಿ ರೂಪಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಾಧ್ಯ ಎಂಬ ಡಾ.ಬಿ.ಆರ್. ಅಂಬೇಡ್ಕರ್ ಆಶಯ ಪಾಲಿಸಬೇಕು. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2 ಸಾವಿರ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಯರ ಗೌರವಧನ ಹೆಚ್ಚಳದ ಕುರಿತು ಸದನ ಸಮಿತಿಯಲ್ಲಿ ಚರ್ಚೆ ನಡೆಯುತ್ತಿದೆ. ಈ ಸಂಬಂಧ ನಿರ್ಣಯ ಕೈಗೊಂಡು ವಿಧಾನ ಸಭೆ ಹಾಗೂ ಪರಿಷತ್ತಿಗೆ ಶಿಫಾರಸು ಸಲ್ಲಿಸಲಾಗುವುದು ಎಂದರು.ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಳವಡಿಸಿರುವ ವಾಟರ್ ಫಿಲ್ಟರ್‌ಗಳ ಸ್ಥಿತಿಗತಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಕ್ಕಳ ಆರೋಗ್ಯ, ಪೌಷ್ಟಿಕತೆ ಹಾಗೂ ಕೇಂದ್ರಗಳಲ್ಲಿನ ಮೂಲಸೌಕರ್ಯದ ಬಗ್ಗೆ ಸಮಿತಿ ಚರ್ಚಿಸುತ್ತಿದ್ದು, ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತ ಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಂಗನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ