ಮಂಗಳೂರು: ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿರುವ ಎಂಸಿಸಿ ಬ್ಯಾಂಕ್ 2025-26ನೇ ಸಾಲಿನ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರತಿಷ್ಠಿತ ‘ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ 2025-26’ಗೆ ಭಾಜನವಾಗಿದೆ.
2025-26ನೇ ಹಣಕಾಸು ವರ್ಷದಲ್ಲಿ ವ್ಯವಹಾರ ವಹಿವಾಟಿನಲ್ಲಿ ದಾಖಲಿಸಿದ ಸರ್ವತೋಮುಖ ಪ್ರಗತಿ, ಗಮನಾರ್ಹ ಬೆಳವಣಿಗೆ, ಸ್ಥಿರವಾದ ಆರ್ಥಿಕ ಸಾಧನೆ, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಸಮರ್ಪಿತ ಗ್ರಾಹಕ ಸೇವೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಹಕಾರ ಚಳವಳಿಯ ಗಣ್ಯ ನಾಯಕರ ಸಮ್ಮುಖದಲ್ಲಿ ನಡೆಯಿತು.ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪ್ರದಾನ ಮಾಡಿದರು.ಎಂಸಿಸಿ ಬ್ಯಾಂಕ್ ಪರವಾಗಿ ಬ್ಯಾಂಕಿನ ಉಪಾಧ್ಯಕ್ಷರು, ಪ್ರಧಾನ ವ್ಯವಸ್ಥಾಪಕರು, ನಿರ್ದೇಶಕರು ಮತ್ತು ಉಪ ಪ್ರಧಾನ ವ್ಯವಸ್ಥಾಪಕರು ಪ್ರಶಸ್ತಿ ಸ್ವೀಕರಿಸಿದರು.
ಬ್ಯಾಂಕ್ ಕರ್ನಾಟಕ ರಾಜ್ಯದಾದ್ಯಂತ ತನ್ನ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, 23 ಶಾಖೆಗಳ ವ್ಯಾಪಕ ಜಾಲದೊಂದಿಗೆ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. 2025–26ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ 1,525 ಕೋಟಿ ರು.ಗಳ ಒಟ್ಟು ವ್ಯವಹಾರ ವಹಿವಾಟು ಸಾಧಿಸಿ, ಹಿಂದಿನ ಸಾಲಿನೊಂದಿಗೆ ಹೋಲಿಸಿದರೆ ಶೇ. 22.89ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕ್ ತನ್ನ ನಿರಂತರ ಬೆಳವಣಿಗೆಯ ಪಥವನ್ನು ಮುಂದುವರಿಸಿಕೊಂಡಿದ್ದು, ಪ್ರಸ್ತುತ ಬ್ಯಾಂಕಿನ ಒಟ್ಟು ವ್ಯವಹಾರ ವಹಿವಾಟು 1,600 ಕೋಟಿ ರು.ಗಳನ್ನು ಮೀರಿದೆ.