ಕನ್ನಡದ ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳುಗೆ ಪ್ರತಿಷ್ಠಿತ ಪರಾಗ್ ಆಥರ್ ಪ್ರಶಸ್ತಿ-2026 ಪ್ರದಾನ

KannadaprabhaNewsNetwork |  
Published : Nov 30, 2026, 03:15 AM IST
ಮುಂಬೈನಲ್ಲಿ ಜರುಗಿದ ಸಮಾರಂಭದಲ್ಲಿ ಬಳ್ಳಾರಿಯ ಲೇಖಕ ಶಿವಲಿಂಗಪ್ಪ ಹಂದಿಹಾಳು ಅವರಿಗೆ ದೇಶದ ಪ್ರತಿಷ್ಠಿತ ಟಾಟಾ ಟ್ರಸ್ಟ್‌ನ 'ಪರಾಗ್ ಆಥರ್ ಪ್ರಶಸ್ತಿ -2026' ಪ್ರಶಸ್ತಿ ನೀಡಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಪರಾಗ್ ಆಥರ್ ಪ್ರೈಜ್ ಆಯ್ಕೆ ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತ ಹಾಗೂ ಹಲವು ತಿಂಗಳು ಕಾಲ ನಡೆಯುವ ಗೌಪ್ಯ ಪ್ರಕ್ರಿಯೆಯಾಗಿದೆ.

ಬಳ್ಳಾರಿ: ಸಮಕಾಲೀನ ಭಾರತೀಯ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಬಳ್ಳಾರಿಯ ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳು ದೇಶದ ಪ್ರತಿಷ್ಠಿತ ಟಾಟಾ ಟ್ರಸ್ಟ್‌ನ "ಪರಾಗ್ ಆಥರ್ ಪ್ರಶಸ್ತಿ -2026 ಪ್ರಶಸ್ತಿ "ಗೆ ಭಾಜನರಾಗಿದ್ದು, ಮುಂಬೈನಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿಯು ಫಲಕದೊಂದಿಗೆ ₹ 2.5 ಲಕ್ಷ ನಗದು ಬಹುಮಾನ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಿಕೆ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಶಿವಕುಮಾರ್ ಡಿ., ಪರಾಗ್ ಮಾತನಾಡಿ, ಟಾಟಾ ಟ್ರಸ್ಟ್‌ನ ಪರಾಗ್ ವಿಭಾಗವು ನೀಡುವ ಈ ಪ್ರಶಸ್ತಿಯು ಸಮಕಾಲೀನ ಭಾರತೀಯ ಮಕ್ಕಳ ಸಾಹಿತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನಾರ್ಹ ಕೊಡುಗೆ ನೀಡುತ್ತಿರುವ ಲೇಖಕರನ್ನು ಗುರುತಿಸಿ ಗೌರವಿಸುವ ಉದ್ದೇಶ ಹೊಂದಿದೆ.

ಪರಾಗ್ ಆಥರ್ ಪ್ರೈಜ್ ಆಯ್ಕೆ ಪ್ರಕ್ರಿಯೆಯು ಅತ್ಯಂತ ವ್ಯವಸ್ಥಿತ ಹಾಗೂ ಹಲವು ತಿಂಗಳು ಕಾಲ ನಡೆಯುವ ಗೌಪ್ಯ ಪ್ರಕ್ರಿಯೆಯಾಗಿದೆ. ದೇಶದ ವಿವಿಧ ಪ್ರತಿಷ್ಠಿತ ಹಾಗೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ನಾಮನಿರ್ದೇಶನ ಆಹ್ವಾನಿಸಲಾಗುತ್ತದೆ. ನಂತರ ಅರ್ಹ ಕೃತಿಗಳು ಹಾಗೂ ಲೇಖಕರ ಸಾಧನೆ ಪರಿಶೀಲಿಸಿ ಮೊದಲಿಗೆ ದೀರ್ಘಪಟ್ಟಿ, ಬಳಿಕ ಅಂತಿಮ ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ. ಕೊನೆಗೆ ತಜ್ಞರನ್ನೊಳಗೊಂಡ ತೀರ್ಪುಗಾರರ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ. ಪ್ರಸ್ತುತ ಸಾಲಿನ ಪರಾಗ್ ಆಥರ್ ಪ್ರೈಜ್ 2026ಕ್ಕೆ ಕನ್ನಡದ ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳು ಅವರನ್ನು ತೀರ್ಪುಗಾರರಾದ ತೇಜಸ್ವಿ ಶಿವಾನಂದ, ಮಮತಾ ಸಾಗರ ಹಾಗೂ ಬೃಂದಾ ರಾಯ್ ಅವರನ್ನೊಳಗೊಂಡ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ತಿಳಿಸಿದರು.

ಉಪಕ್ರಮದ ಮುಖ್ಯಸ್ಥೆ ಮೌಲ್‌ಶ್ರೀ ಕಲೋಥಿಯಾ ಹಾಗೂ ಪ್ರಶಸ್ತಿಯ ತೀರ್ಪುಗಾರ ತೇಜಸ್ವಿ ಶಿವಾನಂದ ಮಾತನಾಡಿ, ಪ್ರತಿವರ್ಷ ಪರಾಗ್ ಸಂಸ್ಥೆಯು ದೇಶದ ಗಣ್ಯ ಲೇಖಕರು, ಪ್ರಕಾಶಕರು, ಬಾಲ ಓದುಗರು ಹಾಗೂ ಮಕ್ಕಳ ಗ್ರಂಥಾಲಯ ಸಮಿತಿಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಪರಾಗ್ ಉತ್ಸವ ಆಯೋಜಿಸುತ್ತದೆ. ಈ ಸಾಹಿತ್ಯಿಕ ವೇದಿಕೆಯಲ್ಲಿ ಪರಾಗ್ ಆಥರ್ ಪ್ರೈಜ್ ಮತ್ತು ಪರಾಗ್ ಇಲ್ಲಸ್ಟ್ರೇಟರ್ ಪ್ರೈಜ್ ಪ್ರದಾನ ಮಾಡಲಾಗುತ್ತದೆ. ಮಕ್ಕಳ ಸಾಹಿತ್ಯದ ಸೃಜನಶೀಲತೆ, ಗುಣಮಟ್ಟ ಹಾಗೂ ಓದುವ ಸಂಸ್ಕೃತಿ ಉತ್ತೇಜಿಸುವ ನಿಟ್ಟಿನಲ್ಲಿ ಈ ಉತ್ಸವ ಮಹತ್ವದ ಪಾತ್ರ ವಹಿಸುತ್ತಿದೆ. ಅವರ ನೋಟ್‌ಬುಕ್ ಮತ್ತು ಟಿಫಿನ್ ಬಾಕ್ಸ್ ಕೃತಿಗಳು ತೀರ್ಪುಗಾರರ ವಿಶೇಷ ಗಮನ ಸೆಳೆದಿದ್ದು, ಮಕ್ಕಳ ಬದುಕಿನ ಸಹಜ ಅನುಭವ ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಅವರ ಸೃಜನಶೀಲತೆ ಗುರುತಿಸಲಾಗಿದೆ. ಗ್ರಾಮೀಣ ಮಕ್ಕಳ ಬದುಕಿನ ವಾಸ್ತವ, ಅವರ ಭಾವನೆಗಳು ಹಾಗೂ ಸಾಮಾಜಿಕ ಪರಿಸರ ಮಕ್ಕಳ ದೃಷ್ಟಿಕೋನದಿಂದ ಕಟ್ಟಿಕೊಟ್ಟಿರುವುದು ಪ್ರಶಸ್ತಿಗೆ ಆಯ್ಕೆಯಾಗಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಹಂದಿಹಾಳು ಮಾತನಾಡಿದರು.

ಗ್ರಾಮೀಣ ಬದುಕಿನ ಸೊಗಡು, ಅಲ್ಲಿನ ಮಕ್ಕಳ ಮುಗ್ಧತೆ, ಅವರ ಕನಸುಗಳು, ಅನುಭವ ಹಾಗೂ ಸುತ್ತಲಿನ ಪರಿಸರದೊಂದಿಗೆ ಅವರು ಹೊಂದಿರುವ ಸಂಬಂಧ ತಮ್ಮ ಕಥೆಗಳ ಮೂಲಕ ಅತ್ಯಂತ ವಿಶಿಷ್ಟವಾಗಿ ಅನಾವರಣಗೊಳಿಸಿರುವುದು ಶಿವಲಿಂಗಪ್ಪ ಹಂದಿಹಾಳು ಅವರ ಸಾಹಿತ್ಯದ ವಿಶೇಷತೆಯಾಗಿದೆ. ಮಕ್ಕಳ ಮನೋಲೋಕವನ್ನು ಆಪ್ತವಾಗಿ ಗ್ರಹಿಸಿ, ಅವರ ದೈನಂದಿನ ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನೇ ಕಥನದ ವಸ್ತುವನ್ನಾಗಿಸಿಕೊಂಡಿರುವ ಅವರ ಬರವಣಿಗೆ ಗಮನ ಸೆಳೆದಿದೆ. ವಿಶೇಷವೆಂದರೆ ಈ ಪ್ರಶಸ್ತಿ ಆರಂಭವಾದ ಬಳಿಕ ಕನ್ನಡ ಭಾಷೆಯ ಮಕ್ಕಳ ಸಾಹಿತಿಯೊಬ್ಬರಿಗೆ ಲಭಿಸಿರುವ ಮೊದಲ ಪ್ರಶಸ್ತಿ ಇದಾಗಿದೆ. ಈ ಮೂಲಕ ಕನ್ನಡದ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ವದ ಗೌರವ ದೊರೆತಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯ ಕಲ್ಲಿನ ರಥದ ಮೂಲ ಗೋಪುರ ಮರಸೃಷ್ಟಿ
ಆಂಧ್ರದ 4 ಟಿಎಂಸಿ ನೀರು ರಾಜ್ಯದ ಬೆಳೆಗಳಿಗೆ ಒದಗಿಸಲು ಎಚ್ಡಿಕೆಗೆ ಮನವಿ