ಕೆಎಂಸಿ ಮಣಿಪಾಲಕ್ಕೆ ಪ್ರತಿಷ್ಠಿತ ಸ್ಪಾರ್ಕ್ ಅನುದಾನ

KannadaprabhaNewsNetwork |  
Published : Jan 24, 2025, 12:50 AM IST
23ಸ್ಪಾರ್ಕ್‌ | Kannada Prabha

ಸಾರಾಂಶ

ಕೆಎಂಸಿ ನೇತ್ರಶಾಸ್ತ್ರ ವಿಭಾಗದ ಡಾ. ಮನಾಲಿ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವನ್ನು ಉತ್ತೇಜಿಸುವ ಯೋಜನೆ ಅಡಿಯಲ್ಲಿ ಪ್ರತಿಷ್ಠಿತ ಸ್ಪಾರ್ಕ್ ಅನುದಾನವನ್ನು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೇತ್ರಶಾಸ್ತ್ರ ವಿಭಾಗದ ಡಾ. ಮನಾಲಿ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವನ್ನು ಉತ್ತೇಜಿಸುವ ಯೋಜನೆ (ಎಸ್‌ಪಿಎಆರ್‌ಸಿ) ಅಡಿಯಲ್ಲಿ 41,13,233 ರು.ಗಳ ಪ್ರತಿಷ್ಠಿತ ಸ್ಪಾರ್ಕ್ ಅನುದಾನವನ್ನು ನೀಡಲಾಗಿದೆ.

‘ಆರೋಗ್ಯ ರಕ್ಷಣೆ: ಸಾಂಕ್ರಾಮಿಕ ರೋಗಗಳು ಮತ್ತು ಅವುಗಳ ಪ್ರಭಾವದ ಉದಯೋನ್ಮುಖ ಪ್ರದೇಶಗಳು’ ಎಂಬ ಕ್ಷೇತ್ರದಲ್ಲಿ ಈ ಅನುದಾನವನ್ನು ನೀಡಲಾಗಿದ್ದು, ಇದನ್ನು ಪಡೆದ ಕೆಎಂಸಿ ಭಾರತದ ಏಕೈಕ ವೈದ್ಯಕೀಯ ಕಾಲೇಜಾಗಿದೆ.

ಡಾ. ಮನಾಲಿ ಹಜಾರಿಕಾ ಅವರು ‘ನವಜಾತ ಶಿಶುಗಳ ಕಣ್ಣಿನ ಮೇಲ್ಮೈಯಲ್ಲಿ ಬ್ಯಾಕ್ಟೀರಿಯಾ ಸೂಕ್ಷ್ಮಜೀವಿಯ ಮೌಲ್ಯಮಾಪನ’ ಎಂಬ ಯೋಜನೆಯ ಪ್ರಧಾನ ಸಂಶೋಧಕಿಯಾಗಿದ್ದು, ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಡಾ. ಮಾರ್ಕ್ ವಿಲ್ಕಾಕ್ಸ್, ಡಾ. ಜೆರೋಮ್ ಓಜ್ಕಾನ್, ಕೆಎಂಸಿಯ ಡಾ. ಸುಲತಾ ಭಂಡಾರಿ, ಡಾ. ಲೆಸ್ಲಿ ಲೆವಿಸ್ ಮತ್ತು ಡಾ. ಕಿರಣ್ ಚಾವ್ಲಾ ಅವರ ಸಹಯೋಗದೊಂದಿಗೆ ಈ ಸಂಶೋಧನೆಯನ್ನು ನಡೆಸಲಾಗುತ್ತಿದೆ. ಇದು ಭಾರತದಲ್ಲಿ ಈ ರೀತಿಯ ಮೊದಲ ಅಧ್ಯಯನವಾಗಿದೆ.

ಈ ಸ್ಪಾರ್ಕ್ ಉಪಕ್ರಮದ ಭಾಗವಾಗಿ, ಕೆಎಂಸಿಯ ನೇತ್ರಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗಗಳು, ಮಾಹೆಯ ಇತರ ಸಂಸ್ಥೆಗಳೊಂದಿಗೆ ಜ. 13–17 ರವರೆಗೆ ‘ಸೂಕ್ಷ್ಮಜೀವಿಯ ವೈವಿಧ್ಯತೆಯ ಗುಪ್ತ ಪ್ರಪಂಚವನ್ನು ಅನ್ವೇಷಿಸುವುದು’ ಎಂಬ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಡಾ ಜೆರೋಮ್ ಓಜ್ಕಾನ್ ಅವರು ಭಾಗವಹಿಸಿದ್ದರು.

ದಕ್ಷಿಣ ಭಾರತದ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಒಟ್ಟುಗೂಡಿಸಿದ ಈ ಕಾರ್ಯಾಗಾರವನ್ನು ಮಾಹೆ ಸಂಶೋಧನಾ ನಿರ್ದೇಶಕ ಡಾ. ಸತೀಶ್ ರಾವ್ ಮತ್ತು ಕೆಎಂಸಿ ಮಣಿಪಾಲ ಡೀನ್ ಡಾ. ಪದ್ಮರಾಜ್ ಹೆಗ್ಡೆ ಉದ್ಘಾಟಿಸಿದರು.

ಈ ಸಂದರ್ಭ ಮಾಹೆಯ ಉಪಕುಲಪತಿ ಡಾ. ಎಂ.ಡಿ. ವೆಂಕಟೇಶ್, ಸಹ ಉಪಕುಲಪತಿ ಡಾ. ಶರತ್ ರಾವ್ ಅವರು ಡಾ.ಮನಾಲಿ ಅವರ ಸಾಧನೆಯನ್ನು ಶ್ಲಾಘಿಸಿದರು. ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕಾಮತ್, ಸೂಕ್ಷ್ಮ ಜೀವವಿಜ್ಞಾನದ ಮುಖ್ಯಸ್ಥೆ ಡಾ. ವಂದನಾ, ನೇತ್ರ ನ್ಯಾನೋವಿಜ್ಞಾನ ಕೇಂದ್ರದ ಪ್ರಾಧ್ಯಾಪಕರಾದ ಡಾ. ಸುಲತಾ ಭಂಡಾರಿ ಮತ್ತು ಡಾ. ಭರತ್ ರಾಜ್ ಗುರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಣಿಪಾಲ ಜೀವ ವಿಜ್ಞಾನ ಶಾಲೆಯ ಡಾ. ಭರತ್ ಪ್ರಸಾದ್ ಮತ್ತು ಡಾ. ಬುಧೇಶ್ವರ್ ದೇಹೂರಿ ಕಾರ್ಯಾಗಾರದಲ್ಲಿ ನೀಡಲಾಗುವ ಪ್ರಾಯೋಗಿಕ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!