ಕನ್ನಡಪ್ರಭ ವಾರ್ತೆ ಚೇಳೂರು
ನೂತನ ತಾಲೂಕಿನ ಸೋಮನಾಥಪುರ ಹಾಗೂ ನಾರೇಮದ್ದೆಪಲ್ಲಿ ಎರಡು ಗ್ರಾಂಪಂ ವ್ಯಾಪ್ತಿಗೆ ಒಳಪಡುವ ಬೆಸ್ತಲಪಲ್ಲಿಯಿಂದ ರಾಚವಾರಪಲ್ಲಿಗೆ ಸಂಪರ್ಕ ಕಲ್ಪಿಸುವ ಕುರುಬರಹಳ್ಳಿ ಹಾಗೂ ಚಿನ್ನಗಾನಪಲ್ಲಿ ಗ್ರಾಮಗಳ ರಸ್ತೆಯ ಸ್ಥಿತಿ ಇದು.
ಈ ಗ್ರಾಮಗಳಲ್ಲಿ 350 ಕುಟುಂಬಗಳಿವೆ. 1500ಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ರಾಚವಾರಪಲ್ಲಿ ಗ್ರಾಮದ ಹೊರವಲಯದ ಮಂಗಳಮಡುಗವಾರಪಲ್ಲಿ ಕ್ರಾಸ್ ನಿಂದ ಬೆಸ್ತಲಪಲ್ಲಿ ಕುರುಬರಹಳ್ಳಿ ಕ್ರಾಸ್ ನ ಆಂಜನೇಯ ಸ್ವಾಮಿಯ ವಿಗ್ರಹದವರೆಗೂ ಸುಮಾರು 5. ಕಿಮೀ ಉದ್ದದ ರಸ್ತೆ ಕಾಮಗಾರಿಯು 2022ರಲ್ಲೇ ಆರಂಭವಾದರೂ, ಈವರೆಗೆ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ಜಲ್ಲಿ ತಂದು ಸುರಿಯಲಾಗಿದೆ. ಇದಿಷ್ಟೇ ಜಿಲ್ಲಾ ಪಂಚಾಯತಿಯ ಸಾಧನೆಯಾಗಿದೆ.ಕುಂಟುತ್ತ ಸಾಗಿರುವ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರತಿ ಹೆಜ್ಜೆಗೂ ಸಿಗುವ ಗುಂಡಿಗಳು ವಾಹನ ಸವಾರರನ್ನು ಕಾಡುತ್ತಿವೆ. ಉಬ್ಬು-ತಗ್ಗುಗಳ ನಡುವೆ ವಾಹನ ಚಲಾಯಿಸಲು ಸಾಹಸ ಮಾಡಬೇಕಿದೆ.
ಇದರಿಂದ ಪ್ರತಿನಿತ್ಯ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ದುರಸ್ತಿ ಕಾಣದ ರಸ್ತೆಯಿಂದಾಗಿ ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ರಸ್ತೆಯಲ್ಲಿ ಸುರಿದಿರುವ ಜಲ್ಲಿ ಕಲ್ಲು ಮೇಲೆದ್ದಿದ್ದು ವಾಹನಗಳ ಟೈರ್‌ಗಳು ರಸ್ತೆ ಮಧ್ಯದಲ್ಲೇ ಪಂಕ್ಚರ್ ಆಗಿ ನಿಲ್ಲುವಂತಾಗಿದೆ. ಗ್ರಾಮದಲ್ಲಿ ವಾಹನಗಳು ರಭಸದಿಂದ ಸಂಚರಿಸುವಾಗ ಕಲ್ಲುಗಳು ಅಕ್ಕ-ಪಕ್ಕದ ಮನೆಗಳ ಮೇಲೆ, ಪಾದಚಾರಿಗಳಿಗೂ ಬೀಳುತ್ತಿವೆ. ಸ್ಥಳೀಯರಿಗೆ ನರಕವೇ ಕಣ್ಮುಂದೆ ಬಂದಂತಾಗಿದೆ ಎಂದು ಗ್ರಾಮಸ್ಥರು ದೂರಿದರು.
ರಾಚವಾರಪಲ್ಲಿಯಿಂದ ಚಿನ್ನಗಾನಪಲ್ಲಿವರೆಗೂ ಅಲ್ಪಮಟ್ಟಿಗೆ ಕಾಮಗಾರಿ ಮುಗಿದಿದೆ. ಅಲ್ಲಿಂದ ಬೆಸ್ತಲಪಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಮಯ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವ ಗೋಜಿಗೆ ಮುಂದಾಗಿಲ್ಲ.
ರಸ್ತೆಯನ್ನು ಕಿತ್ತು ಮರು ಡಾಂಬರೀಕರಣ ಮಾಡುವ ಉದ್ದೇಶದಿಂದ ರಸ್ತೆಗೆ ಜಲ್ಲಿ ಸುರಿದಿದ್ದರಿಂದ ಸ್ಥಳೀಯರು ಕಳೆದ ಮೂರು ವರ್ಷಗಳಿಂದಲೂ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಂತಾಗುತ್ತಿದ್ದು, ಚಿಕ್ಕ ಹೊಂಡಗಳಾಗುತ್ತಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ,ಗುಂಡಿಯಲ್ಲಿ ಇಳಿಯುವಾಗ ಗಾಡಿಗಳು ಸ್ಕಿಡ್ ಆಗಿ ಜಾರಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.
- ಸುಧಾಕರ್, ಆಟೊರಿಕ್ಷಾ ಚಾಲಕ
• ಹೆಸರು ಹೇಳಲು ಇಚ್ಛಿಸದ ಯುವಕ