ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯುತ್ ಸ್ಪರ್ಶ ಕಾರಣದಿಂದ ಆನೆಗಳು ಪದೇ ಪದೆ ಸಾವಿಗೀಡಾಗುತ್ತಿರುವ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ, ಆನೆಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ನಿರ್ದೇಶನ ನೀಡಿದೆ.
ಆನೆಗಳು ಸೇರಿ ಎಲ್ಲ ರೀತಿಯ ಸಸ್ಯ ಹಾಗೂ ವನ್ಯಜೀವಿ ಸಂಕುಲ ಮಾನವಕುಲದೊಂದಿಗೆ ಬೇರ್ಪಡಿಸಲಾಗದ ಸಂಬಂಧ ಹೊಂದಿವೆ. ಅರಣ್ಯ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳಿಂದ ಆನೆ ಸಂರಕ್ಷಿಸುವುದು ಅರಣ್ಯ ಇಲಾಖೆ ಜವಾಬ್ದಾರಿ. ವನ್ಯಜೀವಿಗಳ ಸಾವು ನಿಯಂತ್ರಿಸಲು ಇಲಾಖೆ ಅಗತ್ಯ ಕ್ರಮ ಜರುಗಿಸಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ಏನೇನು ನಿರ್ದೇಶನ?- ಆನೆಗಳು ಹೆಚ್ಚು ಇರುವ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ವಿದ್ಯುತ್ ತಂತಿ ಮತ್ತು ಅಕ್ರಮ ವಿದ್ಯುತ್ ಬೇಲಿಗಳು, ಅಪಘಾತ ಸಂಭವಿಸುವ ಸಾಧ್ಯತೆಯಿರುವ ಪ್ರದೇಶಗಳನ್ನು ಗುರುತಿಸಲು ವಲಯವಾರು ಅರಣ್ಯಾಧಿಕಾರಿಗಳ ತನಿಖಾ ಸಮಿತಿ ರಚಿಸಬೇಕು.
- ವಿದ್ಯುತ್ ತಂತಿಗಳನ್ನು ಸಾಕಷ್ಟು ಮೇಲ್ಬಾಗದಲ್ಲಿ ಅಳವಡಿಸಬೇಕು. ಕೆಳ ಹಂತದಲ್ಲಿರುವ ವಿದ್ಯುತ್ ತಂತಿಗಳನ್ನು ಪರಿಶೀಲಿಸಲು ಅರಣ್ಯ ಇಲಾಖೆಯು ಇಂಧನ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು.- ಆನೆಗಳ ವಾಸಸ್ಥಾನಗಳು ಮತ್ತು ಆನೆಗಳ ಕಾರಿಡಾರ್‌ಗಳಲ್ಲಿ ಅಕ್ರಮ ವಿದ್ಯುತ್ ಬೇಲಿ, ವಿದ್ಯುತ್ ತಂತಿ ಕೆಳಗಡೆಗೆ ಜಗ್ಗದಂತೆ ಎಚ್ಚರ ವಹಿಸಬೇಕು.
- ಪರಿಸರ ಸೂಕ್ಷ್ಮ ವಲಯಗಳಲ್ಲಿ ಭೂಮಿಯ ಒಳಗಡೆ ತಂತಿಗಳ ಅಳವಡಿಕೆಗೆ ಉತ್ತೇಜಿಸಬೇಕು.- ಹೊಲ-ಗದ್ದೆಗಳಿಗೆ ಆನೆಗಳು ಪ್ರವೇಶಿಸದಂತೆ ನಿಯಂತ್ರಿಸಲು ಅಕ್ರಮವಾಗಿ ಅಳವಡಿಸಿರುವ ವಿದ್ಯುತ್ ಬೇಲಿಗಳನ್ನು ಪರಿಶೀಲಿಸಬೇಕು.
- ಹೊಲ-ಗದ್ದೆಗಳ ಬಳಿ ಆನೆಗಳಿಗೆ ವೈಜ್ಞಾನಿಕ ರಕ್ಷಣೆ ನೀಡುವಂತಹ ಬ್ಯಾರಿಕೇಡ್ ಅಳವಡಿಸಲು ಕ್ರಮ ವಹಿಸಬೇಕು.- ಆನೆಗಳ ಸುಗಮ ಸಂಚಾರಕ್ಕೆ ನೆರವಾಗಲು ಅಗತ್ಯವಿರುವಲ್ಲಿ ಸೇತುವೆ ನಿರ್ಮಿಸಿ ಅಪಘಾತ ತಡೆಯಬೇಕು.
- ರೈತರು ಅನಧಿಕೃತ ತಂತಿ ಬೇಲಿ ಅಳವಡಿಸದಂತೆ ನೋಡಿಕೊಳ್ಳಬೇಕು.- ಮೊಬೈಲ್ ಟವರ್ ಮತ್ತು ವಿದ್ಯುತ್ ಕೇಬಲ್ ಅಳವಡಿಸಲು ಹಾಲಿ ಇರುವ ಮಾನದಂಡ ಅನುಸರಿಸಬೇಕು.
- ವನ್ಯಜೀವಿಗಳ ಸಂರಕ್ಷಣೆ ಮತ್ತು ಅವುಗಳ ಅಗತ್ಯತೆ ಕುರಿತಂತೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಬೇಕು.- ಆನೆಗಳ ಅಪಘಾತ ತಡೆಯಲು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿರುವಂತೆ ವಿದ್ಯುನ್ಮಾನ ಕಣ್ಗಾವಲು (ಇ-ಸರ್ವೈಲೆನ್ಸ್) ಸೇರಿ ಸುಧಾರಿತ ತಾಂತ್ರಿಕ ಆವಿಷ್ಕಾರ ಅಳವಡಿಸಿಕೊಳ್ಳಬೇಕು.
- ಆನೆಗಳು ಸೇರಿ ವನ್ಯಜೀವಿಗಳ ಚಲನವಲನಗಳ ಮೇಲೆ ನಿಗಾ ವಹಿಸಲು ರೇಡಿಯೋ ಕಾಲರ್ ಅಳವಡಿಸಬೇಕು.- ವನ್ಯಜೀವಿ(ಸಂರಕ್ಷಣಾ)ಕಾಯ್ದೆ 1972 ಕಾನೂನುಗಳ ಉಲ್ಲಂಘನೆ ಕುರಿತು ತಕ್ಷಣ ದೂರು ದಾಖಲಿಸಿ ತನಿಖೆ ನಡೆಸಬೇಕು
- ಆನೆಗಳ ಸಾವಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಲ್ಲಿ, ಅವರನ್ನು ಕರ್ತವ್ಯ ಲೋಪಕ್ಕೆ ಹೊಣೆಗಾರರನ್ನಾಗಿ ಮಾಡಬೇಕು.ವಿದ್ಯುತ್ ಸ್ಪರ್ಶದಿಂದ 2023-24ನೇ ಸಾಲಿನಲ್ಲಿ 12 ಆನೆ ಮೃತಪಟ್ಟಿವೆ. ಈ ಪೈಕಿ 10 ಆನೆ ಅನಧಿಕೃತವಾಗಿ ಅಳವಡಿಸಿರುವ ವಿದ್ಯುತ್ ಬೇಲಿಯಿಂದ ಮೃತಪಟ್ಟಿವೆ. ಮೂರು ಆನೆಗಳು ತುಂಡಾದ ವಿದ್ಯುತ್ ತಂತಿ ಹಾಗೂ ಸೋಲಾರ್ ಬೇಲಿ ಸ್ಪರ್ಶದಿಂದ ಮೃತಪಟ್ಟಿವೆ. 2024-25ನೇ ಸಾಲಿನಲ್ಲಿ 12 ಆನೆಗಳು ವಿದ್ಯುತ್ ಸಂಪರ್ಕದಿಂದ ಸಾವಿಗೀಡಾಗಿವೆ. ಈ ಪೈಕಿ ಐದು ಆನೆ ಅಕ್ರಮ ವಿದ್ಯುತ್ ಬೇಲಿಯಿಂದ, ಆರು ಆನೆ ಕೆಳ ಹಂತದಲ್ಲಿ ಹಾದುಹೋದ ವಿದ್ಯುತ್ ತಂತಿಗಳ ಸ್ಪರ್ಶದಿಂದ ಮತ್ತು ಒಂದು ಸೋಲಾರ್ ವಿದ್ಯುತ್ ಬೇಲಿಯಿಂದ ಒಂದು ಆನೆ ಸಾವಿಗೀಡಾಗಿರುವುದಾಗಿ ರಾಜ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಲ್ಲಿಸಿರುವ ಪ್ರಮಾಣ ಪತ್ರದಿಂದ ತಿಳಿದು ಬಂದಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.