ಸಾಂಕ್ರಾಮಿಕ ರೋಗ ತಡೆಯಿರಿ: ಕಾಳಪ್ಪ ಪತ್ತಾರ

KannadaprabhaNewsNetwork | Published : May 20, 2024 1:33 AM

ಸಾರಾಂಶ

ಮಳೆಗಾಲ ಆರಂಭವಾಗುತ್ತಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಆದ್ದರಿಂದ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕಾಳಪ್ಪ ಪತ್ತಾರ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಮಳೆಗಾಲ ಆರಂಭವಾಗುತ್ತಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಆದ್ದರಿಂದ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕಾಳಪ್ಪ ಪತ್ತಾರ ಹೇಳಿದರು.

ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡೆಂಘೀ ಜ್ವರ ತಡೆಯಲು ಪರಿಸರ ಸ್ವಚ್ಛವಾಗಿಡಬೇಕು. ವೈಯಕ್ತಿಕವಾಗಿಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಯಬೇಕು ಎಂದರು.

ನಿಂತ ಶುದ್ಧವಾದ ನೀರಿನಲ್ಲಿ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತವೆ. ಈ ಹೆಣ್ಣು ಸೊಳ್ಳೆಯೂ ಸಾಂಕ್ರಾಮಿಕ ರೋಗ ಇರುವ ವ್ಯಕ್ತಿಯನ್ನು ಕಚ್ಚಿ ನಂತರ ಅದೇ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದರೆ ಡೆಂಘೀ ಹರಡುವ ಸಾಧ್ಯತೆಯಿದೆ. ಡೆಂಘೀ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಮನೆಯಲ್ಲಿನ ನೀರಿನ ತೊಟ್ಟಿ, ಬ್ಯಾರೆಲ್ ಹಾಗೂ ಡ್ರಮ್‌ ತಪ್ಪದೇ ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಫ್ರಿಡ್ಜ್ ಹಿಂಭಾಗ, ಹೂ ಕುಂಡ ಮತ್ತು ಕೆಳಗಿನ ತಟ್ಟೆಗಳಲ್ಲಿ ಶೇಖರಣೆಯಾಗುವ ನೀರನ್ನು ನಿಯಮಿತವಾಗಿ ತೆಗೆಯಬೇಕು ಎಂದು ತಿಳಿಸಿದರು.

ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಘನತ್ಯಾಜ್ಯಗಳನ್ನು ವಿಲೇವಾರಿಗೊಳಿಸಬೇಕು. ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು, ಡೆಂಘೀ ಮತ್ತು ಚಿಕನ್‌ಗುನ್ಯ ರೋಗಿಗಳು ತಪ್ಪದೇ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಧರಿಸಬೇಕು, ಸೊಳ್ಳೆ ಬತ್ತಿ, ಮುಲಾಮು, ದ್ರಾವಣ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಇಲಾಖೆಯ ನಿಂಗಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಣ್ಣ ಚೆಟ್ಟಿ, ರಾಮಚಂದ್ರರೆಡ್ಡಿ, ಆಶಾ ಮೇಲ್ವಿಚಾರಕಿ ಜಯಶ್ರೀ, ನರಸಿಂಹನಾಯಕ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.

Share this article