ಕನ್ನಡಪ್ರಭ ವಾರ್ತೆ ಬಂಟ್ವಾಳ
ದೆಹಲಿಯ ಇಂಡಿಯಾ ಗೇಟ್, ಮುಖ್ಯ ಚುನಾವಣಾ ಆಯೋಗದ ಆಯುಕ್ತರ ಕಚೇರಿ, ಆರ್ಟ್ ಗ್ಯಾಲರಿ ಮ್ಯೂಸಿಯಂ, ಜಂತರ್ ಮಂತರ್, ಲಜ್ ಪತ್ ನಗರ, ಹಜ್ರತ್ ನಿಜಾಮುದ್ದಿನ್ ರೈಲ್ವೇ ನಿಲ್ದಾಣ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನ ಮುಖ್ಯ ಕಚೇರಿ, ಆಕಾಶವಾಣಿ, ಮೆಟ್ರೋ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಮತದಾನದ ಬಗ್ಗೆ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಭಾಷಣ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವನ್ನು ಮೂಡಿಸಿ ಅಲ್ಲಿನ ಉನ್ನತ ಅಧಿಕಾರಿ ವರ್ಗದವರ ಮೆಚ್ಚುಗೆಯನ್ನು ಗಳಿಸಿದ್ದು ಮಾತ್ರವಲ್ಲದೆ ಅವರ ಪ್ರಶಂಸೆಯ ನುಡಿಗಳಿಗೆ, ಸನ್ಮಾನಗಳಿಗೆ ಈ ವಿದ್ಯಾರ್ಥಿಗಳು ಪಾತ್ರರಾದರು.
ದೆಹಲಿಯ ಆರ್ಟ್ ಗ್ಯಾಲರಿ ಮ್ಯೂಸಿಯಂನಲ್ಲಿ ಮೇ 18 ರಂದು ರಾಷ್ಟ್ರೀಯ ಮ್ಯೂಸಿಯಂ ದಿನದ ಅಂಗವಾಗಿ ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು 300 ಕ್ಕಿಂತಲೂ ಅಧಿಕ ದೆಹಲಿಯ ವಿವಿಧ ಶಾಲಾ - ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದು ಅವರಲ್ಲಿ ಹೆಚ್ಚಿನ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಮತದಾನ ಮಾಡುವವರಾಗಿದ್ದರು. ಹೆಚ್ಚಿನ ಉತ್ಸಾಹದಲ್ಲಿದ್ದ ಆ ವಿದ್ಯಾರ್ಥಿಗಳು ಸ್ವಪ್ರೇರಿತರಾಗಿ ಸನ್ನಿಧಿ ಹಾಗೂ ತಂಡದವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು, ಧ್ವನಿವರ್ಧಕದ ವ್ಯವಸ್ಥೆ ಮಾಡಿಕೊಡುವ ಮೂಲಕ ಮತದಾನದ ಬಗ್ಗೆ ಈ ಮಕ್ಕಳಿಂದ ತಿಳಿದುಕೊಳ್ಳುವ ಆಸಕ್ತಿಯನ್ನು ಮೂಡಿಸಿದ್ದು ಗಮನಾರ್ಹವಾಗಿದೆ.ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಶೆಕೋಡಿಯ ಲೋಕೇಶ್ ಗೌಡ-ಶೀಲಾವತಿ ದಂಪತಿ ಪುತ್ರಿ ಸನ್ನಿಧಿ ತನ್ನ ಎಳೆಯ ವಯಸ್ಸಿನಲ್ಲಿಯೇ ಮತದಾನದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದು ಈಗಾಗಲೇ ಕರ್ನಾಟಕದ ವಿವಿಧೆಡೆ ಹಾಗೂ ಕೇರಳ, ಗೋವಾ ರಾಜ್ಯಗಳಲ್ಲೂ ಕೊಂಕಣಿ ಮತ್ತು ಮಲೆಯಾಳಂ ಭಾಷೆಯಲ್ಲಿ ಜಾಗೃತಿ ಮೂಡಿಸುವ ಸತ್ಕಾರ್ಯವನ್ನು ಮಾಡಿರುತ್ತಾಳೆ.