ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಭೈರಮಂಗಲ ಗ್ರಾಪಂ ವ್ಯಾಪ್ತಿಯ ಚನ್ನಮ್ಮನಪಾಳ್ಯ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ನಿರ್ವಹಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಜಲ್ಲಿಕಲ್ಲು ಕ್ರಷರ್ ಘಟಕದ ಮಾಲೀಕರ ಒತ್ತಡಕ್ಕೆ ಮಣಿದು ಬೇರೆಡೆಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಈ ಕುರಿತು ಪ್ರಶ್ನಿಸುವವರ ವಿರುದ್ಧ ಬೇರೆ ಗ್ರಾಮದ ದಲಿತ ಸಮುದಾಯದವರನ್ನು ಎತ್ತಿಕಟ್ಟುವ ಮೂಲಕ ದೌರ್ಜನ್ಯದ(ಅಟ್ರಾಸಿಟಿ) ಕೇಸ್ ಹಾಕಿಸಲಾಗುತ್ತಿದೆ. ಒಳ್ಳೆಯ ದಾಖಲಾತಿಯೊಂದಿಗೆ ಉತ್ತಮ ಸ್ಥಿತಿಯಲ್ಲಿರುವ ಶಾಲೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಮಹಿಳೆಯರಾದಿಯಾಗಿ ಗ್ರಾಮಸ್ಥರು ಒಕ್ಕೂರಲ ಮನವಿ ಮಾಡಿದರು.
ಶಾಲೆಗೆ 20 ಗುಂಟೆ ನೀಡಿದ ದಾನಿಗಳು:1998-99ನೇ ಸಾಲಿನಲ್ಲಿ ಚನ್ನಮ್ಮನಪಾಳ್ಯ ಗ್ರಾಮದ ಕೆ.ಜಯಮ್ಮ ಮತ್ತು ಸಿ.ಎನ್.ನರಸಿಂಹಯ್ಯ ಎಂಬುವರು ಸರ್ವೇ ನಂ. 354ರ ತಮ್ಮ ಜಮೀನಿನ ಪೈಕಿ 20 ಗುಂಟೆ ಜಾಗವನ್ನು ಸರಕಾರಿ ಶಾಲೆಗಾಗಿ ದಾನ ನೀಡಿದ್ದು, 1999ರ ಮಾರ್ಚ್ 8ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಹೆಸರಿಗೆ ನೋಂದಣಿ ಮಾಡಿರುವುದು ದಾಖಲೆಗಳಿಂದ ಕಂಡುಬಂದಿದೆ. ಕನಕಪುರ-ರಾಮನಗರ ತಾಲೂಕು ಗಡಿಭಾಗದಲ್ಲಿರುವ ಚನ್ನಮ್ಮನಪಾಳ್ಯ ಸೇರಿ ಸುತ್ತಮುತ್ತಲ ಗಡಿ ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದರಿ ಸ್ಥಳದಲ್ಲಿ ಶಾಲಾಕಟ್ಟಡ ನಿರ್ಮಿಸಲಾಗಿದ್ದು ಕಳೆದ 25 ವರ್ಷಗಳಿಂದ ಸಾವಿರಾರು ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಸಾಕ್ಷಿಯಾಗಿದೆ.
ಚನ್ನಮ್ಮನಪಾಳ್ಯ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಸನಿಹದಲ್ಲಿ ವೆಂಕಟೇಶ್ವರ ಹಿಲ್ ಕ್ರಷರ್ ಹೆಸರಿನ ಜಲ್ಲಿಕಲ್ಲು ಪುಡಿಮಾಡುವ ಕ್ರಷರ್ ಘಟಕ ಸುರಕ್ಷಿತ ವಲಯದಲ್ಲಿಲ್ಲ. ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದು ಶಬ್ದ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದೆ ಎಂದು ಸದರಿ ಕ್ರಷರ್ ವಿರುದ್ಧ ಗ್ರಾಮದ ಮಂಜುನಾಥ್ ಎಂಬ ಸಾಮಾಜಿಕ ಕಾರ್ಯಕರ್ತ 2023ರಲ್ಲಿ ಕರ್ನಾಟಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತರು ಆದೇಶ ಹೊರಡಿಸಿದ್ದರು.
ಜಲ್ಲಿ ಕ್ರಷರ್ ಘಟಕ ಸ್ಥಗಿತಕ್ಕೆ ಕಾರಣವಾದ ಸರಕಾರಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ನಾನಾ ಪ್ರಯತ್ನಗಳು ಭರದಿಂದ ಸಾಗಿವೆ. ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ಪರ್ಯಾಯ ಜಾಗ ಕಲ್ಪಿಸುವ ಬೇಡಿಕೆ ಜತೆಗೆ ನಾನಾ ಅಮಿಷಗಳನ್ನು ಅಧಿಕಾರಿಗಳ ಮುಂದಿಡಲಾಗಿದೆ. ಅಲ್ಲದೇ ಬೆಂಗಳೂರು ದಕ್ಷಿಣ ತಾಲೂಕಿನ ನಾಗನಾಯ್ಕನಹಳ್ಳಿಯಿಂದ ಕೆಲವು ಅಮಾಯಕರನ್ನು ಕರೆತಂದು ಶಾಲಾ ಸಹರದ್ದಿನಲ್ಲಿ ಅತಿಕ್ರಮಿಸಿ ಕಟ್ಟಡ ನಿರ್ಮಿಸಲು ಮುಂದಾಗಿದ್ದು ಈ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿಬಂದಿವೆ.
ಮುಖಂಡ ಎಚ್.ಎಂ.ಲೇಪಾಕ್ಷ, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ಗ್ರಾಪಂ ಸದಸ್ಯರಾದ ಮುರಳಿ, ಹೊಂಬಯ್ಯ, ಕರ್ನಾಟಕ ಭೀಮ್ ಸೇನೆ ಉಸ್ತುವಾರಿ ದಿನೇಶ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಂಚೀಪುರ ಶೇಖರ್, ಮುಖಂಡರಾದ ಗಂಗಾಧರ್, ಲೋಕೇಶ್, ನರಸಿಂಹಯ್ಯ, ವೆಂಕಟರಮಣ, ನರಸಿಂಹಯ್ಯ, ಶಿವಣ್ಣ, ಮಂಜುನಾಥ್, ಮೋಹನ್ಕುಮಾರ್, ಯಶೋಧಮ್ಮ, ಸುಂದರಮ್ಮ, ಭಾಗ್ಯಮ್ಮ, ವೆಂಕಟಲಕ್ಷ್ಮಮ್ಮ ಮತ್ತಿತರರು ಹಾಜರಿದ್ದರು.