ಕನ್ನಡಪ್ರಭ ವಾರ್ತೆ ಕವಿತಾಳ
ತೀವ್ರ ಬರ ಪರಿಸ್ಥಿತಿ ಹಿನ್ನೆಲೆಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಪಾಲಕರೆ ಗುಳೇ ಹೋಗಿದ್ದಾರೆ. ಪಾಲಕರನ್ನು ಬಿಟ್ಟು ಹಳ್ಳಿಗಳಲ್ಲಿರುವ ಮಕ್ಕಳಿಗೆ ಬರಗಾಲದ ಬಿಸಿಯೂಟ ಅನುಕೂಲವಾಗಿದೆ. ಬೇಸಿಗೆ ರಜೆಯಲ್ಲಿ ಎಲ್ಲೆಲ್ಲೊ ಹೊರಗಡೆ ಬಿಸಿಲಲ್ಲಿ ಅಲೆಯುತ್ತಿದ್ದ ಮಕ್ಕಳು ಈಗ ಶಾಲೆಗೆ ಬಂದು ಊಟ ಮಾಡಿ ಹೋಗುತ್ತಿದ್ದಾರೆ.
ಸಮೀಪದ ಹಿರೇಹಣಿಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 254 ದಾಖಲಾತಿ ಇದೆ. ಬರಗಾಲ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟಕ್ಕೆ 140 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಪ್ರತಿನಿತ್ಯ 130 ಮಕ್ಕಳು ಊಟ ಸವಿಯುತ್ತಿದ್ದಾರೆ.ಮಗ, ಸೊಸೆ ದುಡಿಯಲು ಬೆಂಗಳೂರಿಗೆ ಗುಳೇ ಹೋಗಿದ್ದಾರೆ. ಮಕ್ಕಳು ಬಿಸಿಲಲ್ಲಿ ಆಟವಾಡಿ ಅಲ್ಲಲ್ಲಿ ಅಲೆದು ಸುಮ್ಮನೆ ಕಾಲಹರಣ ಮಾಡುತ್ತಿದ್ದರು. ಅವರನ್ನು ನೋಡಿಕೊಳ್ಳುವುದು ಚಿಂತೆಯಾಗಿತ್ತು. ಈಗ ಬಿಸಿಯೂಟ ಆರಂಭವಾದ ಮೇಲೆ ಮಧ್ಯಾಹ್ನದವರಗೆ ಮಕ್ಕಳು ಶಾಲೆಯಲ್ಲಿರುತ್ತಾರೆ. ಅದರಿಂದ ನೆಮ್ಮದಿಯಾಗಿದೆ ಎಂದು ಎರಡು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಜ್ಜಿ ಮಲ್ಲಮ್ಮ ಹೇಳಿದರು.
2 ಕಿ.ಮೀ. ವ್ಯಾಪ್ತಿಯ ಶಾಲೆಗಳನ್ನು ಒಂದುಗೂಡಿಸಿ ಬಿಸಿಯೂಟ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ. ಮಕ್ಕಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಸೌಮ್ಯಶ್ರೀ ಹೇಳಿದರು. ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಮಕ್ಕಳು ಬಿಸಿಲಿನಲ್ಲಿ ಅಲೆಯುವುದು ತಪ್ಪಿದೆ. ಬಿಸಿಯೂಟದ ಜೊತೆಗೆ ಪಾಠ ಹೇಳಿಕೊಡುತ್ತಿರುವುದು ಬಡ ಮಕ್ಕಳಿಗೆ ಅನುಕೂಲವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜಸ್ವಾಮಿ ಹಣಿಗಿ ತಿಳಿಸಿದರು.