ರಾಜಧನ ಸೋರಿಕೆ ತಡೆಗಟ್ಟಿ, ತೊಂದರೆ ತಪ್ಪಿಸಿ: ಸಚಿವ ಮಲ್ಲಿಕಾರ್ಜುನ್ ಸೂಚನೆ

KannadaprabhaNewsNetwork | Published : Oct 26, 2024 1:04 AM

ಸಾರಾಂಶ

ಗಣಿ ಮಾಲೀಕರು, ಸರ್ಕಾರ ಹಾಗೂ ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಸಮರ್ಪಕವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜಧನವನ್ನು ಸಂಗ್ರಹ ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.

- ಬೆಂಗಳೂರಿನ ಕಚೇರಿಯಲ್ಲಿ ಗಣಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗಣಿ ಮಾಲೀಕರು, ಸರ್ಕಾರ ಹಾಗೂ ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಸಮರ್ಪಕವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜಧನವನ್ನು ಸಂಗ್ರಹ ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಎಎಸ್‌ಪಿ ಯೋಜನೆಯಿಂದ ತೆರಿಗೆ ಕಟ್ಟಲು ಗಣಿ ಮಾಲೀಕರಿಗೆ ಸಮಸ್ಯೆ ಆಗುತ್ತಿದೆ. ಸಿಮೆಂಟ್ ಕಂಪನಿಯವರಿಗೆ ಜಿಎಸ್‌ಟಿ ವತಿಯಿಂದ ತೊಂದರೆಯಾಗಿದೆ ಎನ್ನುವ ದೂರು ಕೇಳಿ ಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಕುಂದುಕೊರತೆ ಆಲಿಸಬೇಕು ಎಂದರು.

2019-2020 ರಿಂದ 2024-2025ನೇ ಸೆಪ್ಟಂಬರ್‌ವರೆಗೆ ಮುಖ್ಯ ಖನಿಜ ಹಾಗೂ ಉಪ ಖನಿಜಗಳಿಗೆ ಸಂಬಂಧಿಸಿದಂತೆ ವಸೂಲಾಗಿರುವ ರಾಜಧನದ ರಾಜಸ್ವ ಸಂಗ್ರಹಣೆ ತ್ವರಿತಗತಿಯಲ್ಲಿ ಸಾಗಬೇಕು ಎಂದು ಸೂಚಿಸಿ, ಸಚಿವರ ಪರಿಸರ ವಿಮೋಚನಾ ಪ್ರಮಾಣ ಅನುಗುಣವಾಗಿ ಕಲ್ಲು ಗಣಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಪರಿಸರ ವಿಮೋಚನಾ ಪತ್ರ ಪಡೆದ ಪ್ರಮಾಣ, ಪರ್ಮಿಟ್ ನೀಡಿದ ಪ್ರಮಾಣ ಮತ್ತು ಸರ್ಕಾರಿ ಕಾಮಗಾರಿಗಳಲ್ಲಿ ಬಳಸಬೇಕಾದ ಪ್ರಮಾಣಕ್ಕೂ ಹಾಗೂ ಪರ್ಮಿಟ್ ಪಡೆದ ಪ್ರಮಾಣ ಸಂಗ್ರಹದಲ್ಲಿ ಗಣಿ ಇಲಾಖೆ ವ್ಯಾಪ್ತಿಯ ರಾಜಧನ ಸೋರಿಕೆ ತಡೆಗಟ್ಟಿ ಜನಸಾಮಾನ್ಯರಿಗೂ ಕೂಡ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದ ಯಾವ ಯಾವ ಭಾಗಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಪಟ್ಟಂತೆ ಸಮಸ್ಯೆಗಳಿವೆಯೋ ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- - - -24ಕೆಡಿವಿಜಿ32, 33ಃ:

ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು.

Share this article