ಮಳೆಯಿಂದ ಹಾನಿಯಾದ ಮೂಲಸೌಕರ್ಯಗಳ ಪುನರ್‌ನಿರ್ಮಾಣ ತ್ವರಿತಗೊಳಿಸಿ: ಡಿಸಿ ವಿದ್ಯಾಕುಮಾರಿ

KannadaprabhaNewsNetwork |  
Published : Oct 26, 2024, 01:04 AM IST
ಮಳೆಹಾನಿ25 | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

ಕನ್ನಡಪ್ರಭ ವಾರ್ತೆ ಮಣಿಪಾಲಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ವಾಡಿಕೆಗಿಂತ ಶೇ.15ರಷ್ಟು ಹೆಚ್ಚು ಮಳೆಯಾಗಿ, ರಸ್ತೆ, ಸೇತುವೆ, ವಿದ್ಯುತ್ ಸರಬರಾಜು ಕಂಬ, ಟ್ರಾನ್ಸ್ ಫಾರ್ಮರ್ ಹಾಗೂ ಲೈನ್‌ಗಳು, ಶಾಲೆಗಳು, ಅಂಗನವಾಡಿ ಕಟ್ಟಡಗಳು, ಪ್ರಾಥಮಿಕ/ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಮತ್ತಿತರ ಹಾನಿಯಿಂದಾಗಿ 28721.21 ಲಕ್ಷ ರು. ಗಳಷ್ಟು ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಳೆಯಿಂದ ಹಾನಿಗೊಳಗಾದ ಆಸ್ತಿಗಳ ಪುನರ್‌ನಿರ್ಮಾಣ ಆದ್ಯತೆಯ ಮೇಲೆ ತ್ವರಿತಗತಿಯಲ್ಲಿ ಕೈಗೊಂಡು ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕು, ಯಾವುದೇ ಇಲಾಖೆಗಳು ಮನೆಹಾನಿ, ಮಾನವ ಜೀವ ಹಾನಿ, ಜಾನುವಾರು ಜೀವ ಹಾನಿಗೆ ಪರಿಹಾರ ಬಾಕಿ ಇರಿಸಿಕೊಳ್ಳಬಾರದು. ಶಾಲೆ, ಅಂಗನವಾಡಿ, ತುರ್ತು ರಸ್ತೆ ದುರಸ್ತಿಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನವೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು.

ಭತ್ತದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯದಲ್ಲಿ ಯಾವುದೇ ಫಲಾನುಭವಿಗಳ ಹೆಸರು ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದ ಅವರು, ಮಳೆ ನಿಂತ ಹಿನ್ನೆಲೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕುಡಿಯುವ ನೀರಿಗೆ ಕಲುಷಿತ ನೀರು ಶುದ್ಧ ಕುಡಿಯುವ ನೀರಿಗೆ ಸೇರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ, ಭೂಕುಸಿತ ಉಂಟಾಗಬಹುದಾದ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕುಂದಾಪುರ ಎಸಿ ಮಹೇಶ್ಚಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಸೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.---------------11.39 ಕೋಟಿ ರು. ಅನುದಾನ ಲಭ್ಯ ಇದೆ

ಜಿಲ್ಲಾ ವಿಪತ್ತು ನಿರ್ವಹಣಾ ಕ್ರಮಕ್ಕೆ ಈಗಾಗಲೇ ಪಿ.ಡಿ ಖಾತೆಯಲ್ಲಿ 11.39 ಕೋಟಿ ರು. ಅನುದಾನ ಲಭ್ಯವಿದೆ. ಈಗಾಗಲೇ ತಾಲೂಕು ಮಟ್ಟದ ತಹಸೀಲ್ದಾರರ ವಿಪತ್ತು ಪಿ.ಡಿ ಖಾತೆಯಲ್ಲಿ 165.70 ಲಕ್ಷ ರು. ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಅನುದಾನದಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂದು ಡಿಸಿ ಹೇಳಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ