ಪರಿಸರ ಹಾಳು ಮಾಡುತ್ತಿರುವ ಸಾರ್ವಜನಿಕ ಸ್ಥಳಗಳ ಬಗ್ಗೆ ಗಮನವಿಲ್ಲ । ಅಧಿಕಾರಿಗಳ ಕಾರ್ಯ ವೈಖರಿಯಿಂದ ಜನರಿಗೆ ರೋಗ ಭೀತಿ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ತಾಲೂಕು ಅರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ಲಾರ್ವಾ ಸಮೀಕ್ಷೆ ಕಾರ್ಯ ಕೈಗೊಂಡು ಮನೆ ಮನೆಗಳಿಗೆ ಭೇಟಿ ನೀಡಿ, ನಿರುಪಯುಕ್ತ ವಸ್ತುಗಳಲ್ಲಿ ನೀರು ಸಂಗ್ರಹ ಕಂಡಲ್ಲಿ ಉದ್ದುದ್ದ ಭಾಷಣ ಮಾಡಿ, ಅಮಾಯಕರಂತೆ ಕಂಡ ಜನರಿಗೆ ಜೋರು ಮಾಡಿ, ನೀರು ಚೆಲ್ಲಿಸಿ ತೆರಳುತ್ತಾರೆ. ಆದರೆ ಇದೇ ಜನರ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದೆ.ಚರಂಡಿಗಳಲ್ಲಿ ಹಾಗೂ ವಾಣಿಜ್ಯ ಸಂಕೀರ್ಣದ ಕೆಳಗೆ ಸಂಗ್ರಹವಾಗಿರುವ ನೀರು ಇವರಿಗೆ ಕಾಣುತ್ತದೋ ಇಲ್ಲವೊ ಅಥವಾ ಜಾಣ ಕುರುಡುತನ ಪ್ರದರ್ಶನವೊ ಅಥವಾ ಹಿರಿಯ ಅಧಿಕಾರಿಗಳ ಮೌಖಿಕ ಆದೇಶವೊ ತಿಳಿಯದು. ಇವರ ಕಾರ್ಯವೈಖರಿ ಜತೆಗೆ ಸಮಸ್ಯೆ ಉಲ್ಪಣಗೊಂಡು ನಾಗರಿಕರು ರೋಗದ ಭೀತಿಯಲ್ಲಿ ಆತಂಕಕ್ಕೆ ಸಿಲುಕಿದ್ದಾರೆ.
ಪಟ್ಟಣದ ಅರಕಲಗೂಡು ರಸ್ತೆಯ ಚಿಟ್ಟನಹಳ್ಳಿ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ನ್ಯಾಯಾಧೀಶರ ವಸತಿ ಸಂಕೀರ್ಣ ಸೇರಿದಂತೆ ೨೫೦ಕ್ಕೂ ಹೆಚ್ಚು ಮನೆಗಳು, ಸರ್ಕಾರಿ ನರ್ಸಿಂಗ್ ಕಾಲೇಜು, ಪ್ರತಿಷ್ಠಿತ ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆ ಜತೆಗೆ ಹೊಂದಿಕೊಂಡಂತೆ ಕೈಗಾರಿಕಾ ಪ್ರದೇಶವೂ ಇದೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಬಡಾವಣೆಯ ನಿವಾಸಿಗಳು ಮಾನಸಿಕ ಹಿಂಸೆಯ ಜತೆಯಲ್ಲಿ ಮನೆಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಬಡಾವಣೆಯಲ್ಲಿ ಇರುವ ಎಲ್ಲಾ ಚರಂಡಿಗಳಲ್ಲಿ ಹುಡುಕಿದರೂ ಚರಂಡಿ ಕಾಣದಂತೆ ಬೆಳೆದಿರುವ ಗಿಡೆಗಂಟೆಗಳಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ತ್ಯಾಜ್ಯ ಕೊಳೆತು ಕೆಟ್ಟ ವಾಸನೆಯ ಜತೆಗೆ ಸೊಳ್ಳೆ, ಕ್ರಿಮಿಕೀಟಗಳ ಉತ್ಪತ್ತಿ ತಾಣವಾಗಿ ಸಾಂಕ್ರಮಿಕ ರೋಗದ ಭೀತಿ ಎದುರಾಗಿದೆ. ಅಭಿವೃದ್ಧಿ ಹಾಗೂ ಸಮಸ್ಯೆ ವಿವಾರಣೆ ಸಂಬಂಧ ಪುರಸಭೆ ಸದಸ್ಯ ಒಮ್ಮೆಯೂ ಭೇಟಿ ನೀಡಿಲ್ಲವೆಂದು ನಿವಾಸಿಗಳ ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದು ಅಲ್ಲಿನ ದುಸ್ಥಿತಿಗೆ ಕೈಗನ್ನಡಿಯಾಗಿದೆ.
ಪಟ್ಟಣದ ಕೆಲವು ಬಡಾವಣೆಯಲ್ಲಿ ಯುಜಿಡಿಯ ಮಲದ ನೀರನ್ನು ಚರಂಡಿಗೆ ಹರಿಯಬಿಟ್ಟಿರುವ ನಾಗರಿಕರು ಒಂದಡೆಯಾದರೆ, ಚಿಟ್ಟನಹಳ್ಳಿ ಬಡಾವಣೆ, ಆಶ್ರಯ ಬಡಾವಣೆಯ ತಗ್ಗು ಪ್ರದೇಶದಲ್ಲಿನ ಮನೆಯ ಯುಜಿಡಿಯ ಮಲದ ನೀರನ್ನು ಇಳಿಜಾರಿನ ಪಕ್ಕದಲ್ಲಿರುವ ಕಾಲುವೆಗೆ ಹರಿಯಬಿಡಲಾಗಿದೆ.
ನಿರಂತರ ಮಳೆ ಜತೆಗೆ ಡೆಂಘೀ ಹಾಗೂ ಇತರೆ ಸಾಂಕ್ರಮಿಕ ರೋಗಗಳು ನಾಗರಿಕರನ್ನು ಕಾಡುತ್ತಿದ್ದು, ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ತಾಲೂಕು ಆಡಳಿತದ ಸ್ಪಷ್ಟ ನಿರ್ದೇಶನ ನೀಡುವುದು ಹಾಗೂ ಅಧಿಕಾರಿಗಳು ನೀಡುವ ವರದಿಗಳ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹ ಸೇರಿದಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಭೇಟಿ ಮತ್ತು ಪರಿಶೀಲನೆಯನ್ನು ಖದ್ದು ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.