ಓವರ್‌ ಲೋಡ್‌ ಟಿಪ್ಪರ್ ಹಾವಳಿ ತಡೆಯಿರಿ

KannadaprabhaNewsNetwork |  
Published : Sep 19, 2024, 01:53 AM ISTUpdated : Sep 19, 2024, 01:54 AM IST
ಓವರ್‌ ಲೋಡ್‌ ಟಿಪ್ಪರ್ ಹಾವಳಿ ತಡೆಗೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ | Kannada Prabha

ಸಾರಾಂಶ

ಗುಂಡ್ಲುಪೇಟೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಓವರ್‌ ಲೋಡ್‌ ಟಿಪ್ಪರ್‌ ಹಾವಳಿ ತಡೆಯಬೇಕು ಎಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನಾದ್ಯಂತ ಅಕ್ರಮ ಗಣಿಗಾರಿಕೆ ಓವರ್‌ ಲೋಡ್‌ ಟಿಪ್ಪರ್‌ಗಳ ಹಾವಳಿ ಮಿತಿ ಮೀರಿದ ವೇಗ ತಡೆಯಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿವೆ.

ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕನ್ನಡಪರ ಸಂಘಟನೆಗಳು, ಮುಖಂಡರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಆರ್‌ಟಿಒ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌ ಇಲಾಖೆ, ತಾಲೂಕು ಆಡಳಿತದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರಜಾಸೌಧದ ಮುಂಧೆ ಧರಣಿ ನಡೆಸಿ ಮಂಗಳವಾರ ಟಿಪ್ಪರ್‌ ಹರಿದು ಮೂವರು ಸಾವನ್ನಪ್ಪಿದ್ದಾರೆ. ಇದು ತಾಲೂಕು ಆಡಳಿತದ ವೈಫಲ್ಯ ಎಂದು ಪ್ರತಿಭಟನಾಕಾರರು ದೂರಿದರು.

ತಾಲೂಕಿನಲ್ಲಿ ಅನುಮತಿ ನೆಪದಲ್ಲಿ ಅಕ್ರಮ ಗಣಿಗಾರಿಕೆ ಮಿತಿ ಮೀರಿ ನಡೆಯುತ್ತಿದೆ. ಒಂದು ಟ್ರಿಪ್‌ ಪರ್ಮಿಟ್‌/ರಾಯಲ್ಟಿ ಹಾಕಿ ಹತ್ತಾರು ಟ್ರಿಪ್‌ ಕಲ್ಲು ಅಥವಾ ಕ್ರಸರ್‌ ಉತ್ಪನ್ನ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ ಜಾಣ ಮೌನ ವಹಿಸಿದೆ ಎಂದು ಆರೋಪಿಸಿದರು.

ಓವರ್‌ ಲೋಡ್‌ ತುಂಬಿದ ಟಿಪ್ಪರ್‌ಗಳ ಓಡಾಟದ ಜೊತೆಗೆ ಅತೀ ವೇಗವಾಗಿ ಸಂಚರಿಸುತ್ತಿವೆ. ಓವರ್‌ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿದ್ದರೂ ಸಂಬಂಧ ಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿವೆ ಎಂದು ದೂರಿದ್ದಾರೆ. ಟಿಪ್ಪರ್‌ಗಳ ಚಾಲಕರಲ್ಲಿ ಬಹುತೇಕರು ಮದ್ಯ ಕುಡಿದು ಟಿಪ್ಪರ್‌ ಓಡಿಸುತ್ತಿದ್ದಾರೆ ಅಲ್ಲದೆ ಮೊಬೈಲ್‌ ಜೊತೆ ಮಾತನಾಡಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ದಂಡ ಹಾಕಬೇಕಾದ ಪೊಲೀಸರು ಕೈ ಚೆಲ್ಲಿ ಕುಳಿತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಅಕ್ರಮ ಗಣಿಗಾರಿಕೆ ಹಾಗೂ ಓವರ್‌ ಲೋಡ್‌ ಕಲ್ಲು ಸಾಗಾಣಿಕೆಗೆ ಪೊಲೀಸ್‌, ಆರ್‌ಟಿಒ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಪಘಾತ ತಡೆದು ಜನರ ಜೀವ ಉಳಿಸಲಿ ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಕರವೇ, ಕಾವಲು ಪಡೆ, ಕಸ್ತೂರಿ ನ್ಯಾಯಪರ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ