ರಾಮನಗರ: ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಪ್ರೇರಣೆ ನೀಡಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಭ್ರಷ್ಟಾಚಾರದ ವಿರುದ್ಧ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ.ವಿ. ರೇಣುಕಾ ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹಾಗೂ ಅನ್ಯಾಯದ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಹಾಗೂ ಹೋರಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಎಲ್ಲಾ ನಾಗರಿಕರು ತಮ್ಮ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕೆಂಬುದು ಈ ವರ್ಷದ ಧ್ಯೇಯವಾಕ್ಯ. ಇದನ್ನು ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯುತವಾಗಿ ಪಾಲಿಸುವುದು ಅಗತ್ಯ ಎಂದರು.
ಭ್ರಷ್ಟಾಚಾರದ ಕಾರಣದಿಂದಾಗಿ ಸರ್ಕಾರದ ಮೇಲೆ ಜನರ ವಿಶ್ವಾಸ ಕಡಿಮೆಯಾಗುತ್ತದೆ. ಅದು ಸಾರ್ವಜನಿಕ ಯೋಜನೆಗಳ ಬಲಹೀನತೆಗೆ ಕಾರಣವಾಗಬಹುದು ಹಾಗೂ ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು. ಆ ಮೂಲಕ ಜನ ಸಾಮಾನ್ಯರ ಹಕ್ಕುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಎಲ್ಲರೂ ಒಕ್ಕೊರಲಿನಿಂದ ಭ್ರಷ್ಟಾಚಾರವನ್ನು ತಿರಸ್ಕರಿಸಿ, ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಎಲ್ಲರ ಕನಸು. ಅಧಿಕಾರಿಗಳು ಇದನ್ನು ತಡೆಗಟ್ಟಲು ಅರಿವು ಕಾರ್ಯಕ್ರಮಗಳು, ಪೋಸ್ಟರ್ ಪ್ರದರ್ಶನಗಳು ಮತ್ತು ಸಮಗ್ರತೆಯನ್ನು ಉತ್ತೇಜಿಸುವ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು. ಭ್ರಷ್ಟಾಚಾರ ವಿರೋಧಿ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಇ-ಆಡಳಿತ, ತಂತ್ರಜ್ಞಾನ ಅಳವಡಿಕೆಯು ಆಡಳಿತದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಸಾಧನಗಳಾಗಿವೆ ಎಂದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪಿ.ವಿ ಸ್ನೇಹಾ ಮಾತನಾಡಿ, ಎಲ್ಲರಿಗೂ ವೈಯಕ್ತಿಕ ಜವಾಬ್ದಾರಿಗಳಿರುತ್ತದೆ. ಭ್ರಷ್ಟಾಚಾರ ನರ್ಮೂಲನೆ ಮಾಡುವುದು ಒಬ್ಬರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಆಗ ಮಾತ್ರ ಭ್ರಷ್ಟಾಚಾರ ನರ್ಮೂಲನೆ ಸಾಧ್ಯ. ಭ್ರಷ್ಟಾಚಾರ ತಡೆಗಟ್ಟಲು ಉತ್ತಮ ಮನೋಭಾವ, ಜ್ಞಾನ ಹಾಗೂ ಜಾಗರೂಕ ನಾಗರಿಕರಾಗಿ ದೇಶದ ಏಳಿಗೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಸಿ. ವೆಂಕಟೇಶ್ ಅವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಧನರಾಜ್, ಸಹಾಯಕ ಕಾರ್ಯದರ್ಶಿ ಶಿವಕುಮಾರ್ , ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ , ಕೆ.ರಾಜೇಶ್ ಉಪಸ್ಥಿತರಿದ್ದರು.
ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಜಾಗೃತಿ ಅರಿವು ಸಪ್ತಾಹ-2025 ಕಾರ್ಯಕ್ರಮವನ್ನು ನ್ಯಾಯಾಧೀಶರಾದ ರೇಣುಕಾ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.