- ಮುಗುಳವಳ್ಳಿ ಗ್ರಾಮದಲ್ಲಿ ’ಭದ್ರ ಬಾಲ್ಯ’ ಯೋಜನೆ ಅನುಷ್ಟಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ಹಾಗೂ ಬಾಲಕಿಯರು, ಬಾಲಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಭದ್ರ ಬಾಲ್ಯದ ಮೂಲ ಆಶಯ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.ತಾಲೂಕಿನ ಮುಗುಳುವಳ್ಳಿ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ಧ ’ಭದ್ರ ಬಾಲ್ಯ’ ಯೋಜನೆ ಅನುಷ್ಟಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ ಪೋಕ್ಸೋ ಪ್ರಕರಣ ಹಾಗೂ ಬಾಲ್ಯ ವಿವಾಹದಲ್ಲಿ 3ನೇ ಸ್ಥಾನದಲ್ಲಿರುವುದು ತಲೆ ತಗ್ಗಿಸು ವಂತಾಗಿದೆ. ಹೀಗಾಗಿ ಈ ಸಮಸ್ಯೆ ತಡೆಗಟ್ಟುವ ಸಲುವಾಗಿ ಭದ್ರ ಬಾಲ್ಯ ಕಾರ್ಯಕ್ರಮ ಜಾರಿಗೆ ತಂದು, ಶೋಷಿತರು, ಬಾಲ್ಯ ಗರ್ಭೀಣಿಯರನ್ನು ಕಾಪಾಡಲು ಜಿಲ್ಲಾ ಪಂಚಾಯ್ತಿ ಮುಂದಾಗಿದೆ ಎಂದರು.ಸಮಾಜದಲ್ಲಿ ಶೇ.80 ರಷ್ಟು ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿರಬಹುದು. ಆದರೆ, ಈ ವಿಷಯಗಳನ್ನು ಹೇಳಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಶಾಲಾ ವಿದ್ಯಾರ್ಥಿನಿಯರು ಪಾಲಕರಲ್ಲೂ ಹೇಳುವುದು ಕಷ್ಟಸಾಧ್ಯ. ಇಂತಹ ಸಮಸ್ಯೆ ಬಗೆಹರಿಸಲು ಸಲುವಾಗಿ ಮುಗುಳುವಳ್ಳಿ ಗ್ರಾಪಂನಿಂದ ವಿಶ್ವಾಸದ ಪೆಟ್ಟಿಗೆ ಪ್ರಾಯೋಗಿಕವಾಗಿ ಇರಿಸಿದ್ದು, ಮುಂದೆ ಜಿಲ್ಲೆಯ 229 ಗ್ರಾಪಂಗಳಲ್ಲಿ ಅನುಷ್ಟಾನಗೊಳಿಸುವೆ ಎಂದು ಹೇಳಿದರು.
ಭದ್ರಬಾಲ್ಯ ಯೋಜನೆ ಕೇವಲ ಹೆಣ್ಣು ಮಕ್ಕಳಿಗೆ ಸೀಮಿತಗೊಳ್ಳದೇ 18 ವರ್ಷದೊಳಗಿನ ಗಂಡು ಮಕ್ಕಳಿಗೆ ಅನ್ವಯ ವಾಗಲಿದೆ. ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಮುಕ್ತವಾಗಿ ಹೇಳಿಕೊಳ್ಳಲು ಈ ಯೋಜನೆ ಜಾರಿಗೊಳಿಸಿದ್ದು ಈ ಕಾರ್ಯಕ್ರಮ ಕೇವಲ ಪತ್ರಿಕೆಗಳಲ್ಲಿ ಪ್ರಚಾರಕ್ಕೆ ಸೀಮಿತವಾಗದೇ ಎಲ್ಲೆಡೆ ತಲುಪಿಸುವ ಜವಾಬ್ದಾರಿ ಜನತೆ ಮೇಲಿದೆ ಎಂದರು.ವಿಶ್ವಾಸದ ಪೆಟ್ಟಿಗೆ ಕ್ಷೇತ್ರದ ಪ್ರತಿ ಶಾಲೆಗಳಲ್ಲಿ ತಮ್ಮ ನೇತೃತ್ವದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಅದರಂತೆ ಈ ಪೆಟ್ಟಿಗೆ ತೆರೆಯಲು 3 ಜನರ ತಂಡವಿದೆ. ಜೊತೆಗೆ ಕಾರ್ಯಪಡೆಗಳ ಜೊತೆಗೂಡಿ ಮಕ್ಕಳ ಸಮಸ್ಯೆ ಬಗ್ಗೆ ಚರ್ಚಿಸಿ ಯಾವ ಮಟ್ಟದಲ್ಲಿ ಬಗೆಹರಿಸಲು ತೀರ್ಮಾನಿಸಿದ್ದು ಮುಗುಳುವಳ್ಳಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಈ ಯೋಜನೆ ಜಾರಿಗೊಳಿಸಿ ಸುಭದ್ರ ಗ್ರಾ.ಪಂ.ಗೆ ಪಾತ್ರವಾಗಿದೆ ಎಂದರು.ಜಿಪಂ ಸಿಇಒ ಎಚ್.ಎಸ್. ಕೀರ್ತನಾ ಮಾತನಾಡಿ, ದೈನಂದಿನ ಚಟುವಟಿಕೆಯಲ್ಲಿ ಹೆಣ್ಣು ಮಕ್ಕಳು ಕಿರಾಣಿ ಅಂಗಡಿ, ಬಸ್ ಗಳಲ್ಲಿ ತೆರಳುವಾಗ ಲೈಂಗಿಕ ದೌರ್ಜನ್ಯಗೆ ಒಳಗಾಗುತ್ತಾರೆ. ಇದು ವೈಯಕ್ತಿಕವಾಗಿ ಬಹಳಷ್ಟು ಸಮಸ್ಯೆ ಎದುರಾದರೆ ಹೇಳಿಕೊಳ್ಳಲಾರದಂತಹ ಸ್ಥಿತಿ ನಿರ್ಮಾಣಗೊಂಡಿವೆ. ಈ ಕಾರಣದಿಂದಲೇ ವಿಶ್ವಾಸ ಪೆಟ್ಟಿಗೆಯಲ್ಲಿ ಮಕ್ಕಳು ಸಮಸ್ಯೆ ಹೇಳಿಕೊಳ್ಳಬಹುದು ಎಂದು ಹೇಳಿದರು.ಇತ್ತೀಚಿನ ದಿನದಲ್ಲಿ ಬಾಲ್ಯದಲ್ಲೇ ಗರ್ಭೀಣಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಆ ನಿಟ್ಟಿನಲ್ಲಿ ಮಕ್ಕಳ ಭಾವನೆಯಲ್ಲೇ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಹೀಗಾಗಿ ಸರ್ಕಾರ ಭದ್ರ ಬಾಲ್ಯ ಯೋಜನೆಯಡಿ ಜಾರಿಗೊಳಿಸಿ ಹೆಣ್ಣು ಮಕ್ಕಳ ಲೈಂಗಿಕ ದೌರ್ಜನ್ಯ ಸಮಸ್ಯೆ ಸರಿಪಡಿಸಲು ಮುಂದಾಗಿದೆ ಎಂದು ತಿಳಿಸಿದರು.ಮುಗುಳುವಳ್ಳಿ ಗ್ರಾಪಂ ಪಿಡಿಒ ಸುಮ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ 226 ಗ್ರಾಪಂಗಳ ಪೈಕಿ ಮುಗುಳುವಳ್ಳಿ ಗ್ರಾಪಂ ಮೊದಲ ಬಾರಿಗೆ ಭದ್ರಬಾಲ್ಯ ಯೋಜನೆ ಜಾರಿಗೊಳಿಸಿ ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗುವ ಜೊತೆಗೆ ಸಮಸ್ಯೆ ಗಳಿದ್ದಲ್ಲಿ ವಿಶ್ವಾಸ ಪೆಟ್ಟಿಗೆ ಹಾಗೂ ಮಕ್ಕಳ ಕನಸು ತಿಳಿಯಲು ಕನಸಿನ ಪೆಟ್ಟಿಗೆ ಇರಿಸಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದರು.ಗ್ರಾಪಂ ವ್ಯಾಪ್ತಿಯಲ್ಲಿ ಹೆಣ್ಣು ಮಕ್ಕಳು ಶೇ.90ರಷ್ಟು ಅಂಕಗಳಿಸಿದರೆ ವಿದ್ಯಾರ್ಥಿವೇತನ, ಅನಾಥ ಮಗುವಿಗೆ ಮಾಸಿಕ 250 ರೂ., ಏಕಮಾತ್ರ ಪಾಲಕರ ಮಕ್ಕಳಿಗೆ ಪ್ರಧಾನಮಂತ್ರಿ ಜೀವವಿಮೆಯಡಿ ಜೀವವಿಮೆ, ವಿಶೇಷಚೇತನ ಮಕ್ಕಳಿಗೆ ಮಾಶಾಸನ ಹಾಗೂ ಅಪೌಷ್ಠಿಕತೆಯಿಂದ ನರಳುವ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಗ್ರಾ.ಪಂ. ಮಾಡಿಕೊಂಡು ಬರುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ವಿಜಯ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷ ಮಲ್ಲೇಶ್, ಅಂಬಳೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್, ಗ್ಯಾರಂಟಿ ಸದಸ್ಯರಾದ ಬಸವರಾಜ್, ಸಂತೋಷ್, ಗ್ರಾಪಂ ಸದಸ್ಯರಾದ ಉಮೇಶ್, ಶೇಖರ್, ವನಿತಾ, ಸವಿತಾ, ಭಾಗ್ಯ, ರಘುನಂದನ್, ಕಾಲೇಜು ಸಂಸ್ಥಾಪಕ ಇಂದುಕುಮಾರ್ ಉಪಸ್ಥಿತರಿದ್ದರು. 9 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಗ್ರಾಮದ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ಧ ’ಭದ್ರ ಬಾಲ್ಯ’ ಕಾರ್ಯಕ್ರಮವನ್ನು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಶೃತಿ, ಸುಮ ಇದ್ದರು.