ಬಳ್ಳಾರಿ: ಎಚ್‌ಐವಿ ಮತ್ತು ಏಡ್ಸ್ ಕುರಿತು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಲೇ ಇರಬೇಕು. ವಿದ್ಯಾರ್ಥಿ ಯುವ ಸಮುದಾಯಕ್ಕೆ ಈ ರೋಗದಿಂದಾಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡುವ ಕೆಲಸವಾಗಬೇಕು. ಆಗ ಮಾತ್ರ ಬಳ್ಳಾರಿ ಜಿಲ್ಲೆಯನ್ನು ಎಚ್‌ಐವಿ, ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಿಷನ್ ಏಡ್ಸ್ ಸುರಕ್ಷಾ’ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಎಚ್.ಐ.ವಿ ಏಡ್ಸ್ ನಿಯಂತ್ರಣ ಘಟಕದ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ವಿ. ಮಾತನಾಡಿ, ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳಲ್ಲಿ 2019ರಿಂದ 2026ರ ವರೆಗಿನ ಅವಧಿಯಲ್ಲಿ ಸಂಗ್ರಹಿಸಲಾದ ರಕ್ತದ ಮಾದರಿಗಳ ತಪಾಸಣೆಯಿಂದ ಒಟ್ಟು 115 ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾದ ಒಟ್ಟು 115 ಪ್ರಕರಣಗಳ ಪೈಕಿ 37 ಜನರನ್ನು ಹೆಚ್ಚಿನ ತಪಾಸಣೆ ಮತ್ತು ಕೌನ್ಸೆಲಿಂಗ್‌ಗಾಗಿ ಐಸಿಟಿಸಿ ಕೇಂದ್ರಗಳಿಗೆ ಶಿಫಾರಸ್ಸು ಮಾಡಲಾಗಿದೆ. ಬಾಕಿ ಉಳಿದಿರುವ 78 ಪ್ರಕರಣಗಳ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ವೈದ್ಯಕೀಯ ಮಾರ್ಗದರ್ಶನ ನೀಡುವುದು ಆರೋಗ್ಯ ಇಲಾಖೆಯ ಮುಂದಿರುವ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ‘ಮೈಕ್ರೋ ಲೆವೆಲ್ ಪ್ಲಾನ್'' ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ಡಿಎನ್‌ಒ ಗಿರೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಮ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ವಿವಿಧ ರಕ್ತ ಭಂಡಾರದ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.