ಮಕ್ಕಳ ಮೇಲಾಗುವ ದೌರ್ಜನ ತಡೆಯುವುದು ಎಲ್ಲರ ಜವಬ್ದಾರಿ

KannadaprabhaNewsNetwork |  
Published : Aug 14, 2024, 01:02 AM IST
ಪೋಟೋ೧೩ಸಿಎಲ್‌ಕೆ೨ ಚಳ್ಳಕೆರೆ ನಗರದ  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರವನ್ನು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂವಿಧಾನ ರೂಪಿಸಿರುವ ಪ್ರತಿಯೊಂದು ಕಾನೂನು ಸಮಾಜವನ್ನು ಉತ್ತಮ ದಿಕ್ಕಿನತ್ತ ತೆಗೆದುಕೊಂಡು ಹೋಗುವಲ್ಲಿ ಸಹಕಾರಿಯಾಗಿದೆ. ಸಂವಿಧಾನ ಬದ್ಧ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದರೆ ಮಾತ್ರ ಯಾವುದೇ ದುರ್ಘಟನೆಗಳು ನಡೆಯಲು ಸಾಧ್ಯವಿಲ್ಲ. ಕಾನೂನನ್ನು ಪರಿಪಾಲನೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ನಾವೆಲ್ಲರೂ ಕಾನೂನಿನ ಮೇಲೆ ಅಪಾರವಾದ ವಿಶ್ವಾಸ, ಗೌರವವಿಟ್ಟು ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ತಡೆಯೊಡ್ಡಬೇಕಿದೆ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಶಮೀರ್ ಪಿ. ನಂದ್ಯಾಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಂವಿಧಾನ ರೂಪಿಸಿರುವ ಪ್ರತಿಯೊಂದು ಕಾನೂನು ಸಮಾಜವನ್ನು ಉತ್ತಮ ದಿಕ್ಕಿನತ್ತ ತೆಗೆದುಕೊಂಡು ಹೋಗುವಲ್ಲಿ ಸಹಕಾರಿಯಾಗಿದೆ. ಸಂವಿಧಾನ ಬದ್ಧ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದರೆ ಮಾತ್ರ ಯಾವುದೇ ದುರ್ಘಟನೆಗಳು ನಡೆಯಲು ಸಾಧ್ಯವಿಲ್ಲ. ಕಾನೂನನ್ನು ಪರಿಪಾಲನೆ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ನಾವೆಲ್ಲರೂ ಕಾನೂನಿನ ಮೇಲೆ ಅಪಾರವಾದ ವಿಶ್ವಾಸ, ಗೌರವವಿಟ್ಟು ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ತಡೆಯೊಡ್ಡಬೇಕಿದೆ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಶಮೀರ್ ಪಿ. ನಂದ್ಯಾಲ್ ತಿಳಿಸಿದರು.

ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ಸಂಯುಕ್ತವಾಗಿ ಆಯೋಜಿಸಿದ್ದ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇದ ಕಾಯ್ದೆ ಹಾಗೂ ಮಕ್ಕಳ ರಕ್ಷಣೆ ಕಾಯ್ದೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ನಿತ್ಯ ಜೀವನದಲ್ಲಿ ನಮ್ಮ ಅರಿವಿಗೆ ಬರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ನಿಯಂತ್ರಿಸಬೇಕಿದೆ. ಪುಟ್ಟಮಕ್ಕಳ ಮೇಲೆ ನಡೆಯುವ ಅಸಹ್ಯಕರ ಲೈಗಿಂಕ ದೌರ್ಜನ್ಯವನ್ನು ತಡೆಯಬೇಕು. ಮಕ್ಕಳನ್ನು ಯಾವುದೇ ಕಾರಣಕ್ಕೂ ಅಹಿತಕರ ಘಟನೆಗೆ ಸಿಲುಕದಂತೆ ರಕ್ಷಿಸಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುನಿಸೆಪ್ ಮಕ್ಕಳ ಸಂರಕ್ಷಣಾ ಯೋಜನೆ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್, ಕಾನೂನಿನ ಬಿಗಿ ಕಪಿಮುಷ್ಠಿಯಿಂದ ಪಾರಾಗುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮಲ್ಲಿರುವ ಕಾನೂನಿಗೆ ಎಲ್ಲಾ ವಿಶೇಷ ಶಕ್ತಿ, ಸಾಮರ್ಥ್ಯವಿದೆ. ಕಾನೂನು ಮೀರಿ ಯಾರೇ ದೌರ್ಜನ್ಯವೆಸಗಿದರೂ ಅವರಿಗೆ ಶಿಕ್ಷೆ ಖಚಿತವಾದಾಗ ಮಾತ್ರ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.

ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್. ಹೇಮಾ ಮಾತನಾಡಿ, ಕಾನೂನಿನಲ್ಲಿ ಅಹಿತಕರ ಘಟನೆಯನ್ನು ನಿಯಂತ್ರಿಸಲು ಬಲವಾದ ಶಕ್ತಿ ಇದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲತೆ ಎದ್ದು ಕಾಣುತ್ತಿದೆ. ಸಮಾಜದಲ್ಲಿ ದೌರ್ಜನ್ಯಕ್ಕೀಡಾದವರು ನಾಲ್ಕು ಗೋಡೆಗಳ ಮಧ್ಯೆ ಚಿಂತನೆ ಮಾಡುವ ಬದಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ವಿಶೇಷವಾಗಿ ಪೊಲೀಸ್ ಇಲಾಖೆ ಇಂತಹ ಘಟನೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿದರು. ಈ ವೇಳೆ ಜಿಲ್ಲಾ ಮಕ್ಕಳ ಕಲ್ಯಾಣ ಅಧ್ಯಕ್ಷ ಡಾ.ಎನ್.ಪ್ರಭಾಕರ, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಸಿ.ಸವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಭಾರತಿ ಆರ್.ಬಣಕರ್, ಡಿ.ಕೆ.ಶೀಲಾ, ಬಸವರಾಜು, ಸುಮನ ಎಸ್.ಅಂಗಡಿ, ಮಧುಕುಮಾರ್, ಬಿಇಒ ಕೆ.ಎಸ್.ಸುರೇಶ್, ಸಿಡಿಪಿಒ ಹರಿಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ತಾಲ್ಲೂಕು ಪಂಚಾಯಿತಿ ಎಇಒ ಸಂಪತ್‌ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!