ಕನ್ನಡಪ್ರಭ ವಾರ್ತೆ ಹರಿಹರ
ಆಕಸ್ಮಿಕ ಅಪಘಾತಗಳಲ್ಲಿ ಕೈ ಮತ್ತು ಕಾಲುಗಳನ್ನು ಕಳೆದುಕೊಂಡವರಿಗೆ ಕೃತಕ ಕೈ ಮತ್ತು ಕಾಲು ಜೋಡಣೆ ಉಚಿತವಾಗಿ ನೆರವೇರಿಸಲಾಗಿದೆ. ಇಂಥ ಜನಪರ ಸೇವೆ ಅವಕಾಶ ನಮ್ಮ ಸೌಭಾಗ್ಯವೆಂದು ಭಾವಿಸುತ್ತೇನೆ. ಕೈಗಾರಿಕೆ ಸುತ್ತಮುತ್ತ ಅಸುರಕ್ಷತೆಗಳು ಕಂಡುಬಂದಲ್ಲಿ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಗ್ರಾಸಿಂ ಕುಮಾರಪಟ್ಟಣಂ ಕಂಪನಿ ಮುಖ್ಯಸ್ಥೆ ಸೌಮ್ಯ ಮೊಹಂತಿ ಹೇಳಿದರು.ನಗರಕ್ಕೆ ಸಮೀಪದ ಕುಮಾರಪಟ್ಟಣಂನ ಗ್ರಾಸಿಂ ಸಭಾಂಗಣದಲ್ಲಿ ಗ್ರಾಸಿಂ ಜನಸೇವಾ ಟ್ರಸ್ಟ್, ಬೆಂಗಳೂರಿನ ಕರ್ನಾಟಕ ಮಾರವಾಡಿ ಯುತ್ ಫೆಡರೇಶನ್ ಸಹಯೋಗದೊಂದಿಗೆ ಆದಿತ್ಯ ವಿಕ್ರಮ ಬಿರ್ಲಾಜಿ ಜನ್ಮದಿನ ಜ್ಞಾಪಕಾರ್ಥ, ಉಚಿತ ಕೃತಕ ಕೈ ಮತ್ತು ಕಾಲು ಜೋಡಣೆ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದು 30ನೇ ಶಿಬಿರವಾಗಿದ್ದು, ಇದುವರೆಗೆ 4722ಕ್ಕಿಂತ ಹೆಚ್ಚು ಜನರು ಶಿಬಿರದ ಫಲಾನುಭವಿಗಳಾಗಿದ್ದಾರೆ. ಗ್ರಾಸಿಂ ಜನಸೇವಾ ಟ್ರಸ್ಟ್ ಭಾರತದಾದ್ಯಂತ ಜನಪರ ಕಾಳಜಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕಂಪನಿಯು ಹಳ್ಳಿಗಳ ಮಕ್ಕಳಿಗೆ ವಿದ್ಯಾಭ್ಯಾಸ, ಶಾಲೆಗಳ ದುರಸ್ತಿ ಉಚಿತ ಆರೋಗ್ಯ ಚಿಕಿತ್ಸೆ, ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ, ಸುಲಭ ಸಂಚಾರಕ್ಕೆ ರಸ್ತೆ, ರೈತರಿಗೆ ಹೊಸ ತಳಿ ಬಿತ್ತನೆ ಬೀಜಗಳು ಮತ್ತು ತೋಟಗಾರಿಕೆ ಸಸಿಗಳ ವಿತರಣೆ ಹೀಗೆ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಟ್ರಸ್ಟ್ ನಡೆಸುತ್ತಿದೆ ಎಂದು ವಿವರಿಸಿದರು.ಹಾವೇರಿಯ ಜಿಲ್ಲಾ ಕುಷ್ಠರೋಗ ಹಾಗೂ ವಿಕಲಚೇತನರ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ.ಚನ್ನಬಸಯ್ಯ ವಿರಕ್ತ ಮಠ ಹಾಗೂ ಗ್ರಾಸಿಂ ಜನಸೇವಾ ಟ್ರಸ್ಟ್‌ನ ಸಿಎಸ್‌ಆರ್ ವಿಭಾಗದ ಮಂಜಪ್ಪ ಮೇಗಳಗೇರಿ ಮಾತನಾಡಿದರು.
ಕಾರ್ಖಾನೆ ಉಪಾಧ್ಯಕ್ಷರಾದ ಸಂದೀಪ ಭಟ್, ವಿಜೇಂದ್ರಬಾಬು, ಸುಭಾಷ್ ಕುಮಾರ್ ಶರ್ಮ, ಸಂತೋಷ ಶೆಟ್ಟಿ, ಡಾ. ಬಲವಿಂದರ್ ಸಿಂಗ್ ಮತ್ತಿತರರಿದ್ದರು.