ದರ ಕುಸಿತ, ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ಪ್ರತಿಭಟನೆ

KannadaprabhaNewsNetwork |  
Published : Sep 14, 2025, 01:04 AM IST
ಪೊಟೋ-ಲಕ್ಷ್ಮೇಶ್ವರದ ಎಪಿಎಂಸಿ ಯಾರ್ಡನಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏಕಾಏಕಿ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಬೆಳ್ಳುಳ್ಳಿ ರಸ್ತೆಗೆ ಸುರಿದ ರೈತರು ಅಕ್ರೋಶ ವ್ಯಕ್ತಪಡಿಸಿದರು.ಪೊಟೋ-ಬೆಳ್ಳುಳ್ಳಿ ರಸ್ತಗೆ ಸುರಿದು ರೈತರಿಂದ ಪ್ರತಿಭಟನೆ. | Kannada Prabha

ಸಾರಾಂಶ

ಏಕಾಏಕಿ ಬೆಳ್ಳುಳ್ಳಿ ದರ ಕುಸಿತದಿಂದ ಆಕ್ರೋಶಗೊಂಡ ರೈತರು ಬೆಳ್ಳುಳ್ಳಿ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಂಡು ಬಂದಿತು.

ಲಕ್ಷ್ಮೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಆಕ್ರೋಶಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಏಕಾಏಕಿ ಬೆಳ್ಳುಳ್ಳಿ ದರ ಕುಸಿತದಿಂದ ಆಕ್ರೋಶಗೊಂಡ ರೈತರು ಬೆಳ್ಳುಳ್ಳಿ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಂಡು ಬಂದಿತು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶನಿವಾರ ಎಂದಿನಂತೆ ರೈತರು ತಾವು ಬೆಳೆದಿದ್ದ ಬೆಳ್ಳುಳ್ಳಿ ಮಾರುಕಟ್ಟೆಗೆ ತಂದಿದ್ದರು. ಕಳೆದ ವಾರಕ್ಕಿಂತಲೂ ಈ ವಾರ ದರ ಕುಸಿದಿದ್ದರಿಂದ, ಆಕ್ರೋಶಗೊಂಡ ರೈತರು ಬೆಳ್ಳುಳ್ಳಿಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮೊದಲೇ ಅತಿವೃಷ್ಟಿಯ ಹೊಡೆತಕ್ಕೆ ನಲುಗಿರುವ ರೈತರು ತಾವು ಬೆಳೆದಿದ್ದ ಅಲ್ಪ ಪ್ರಮಾಣದ ಬೆಳ್ಳುಳ್ಳಿ ಮಾರುಕಟ್ಟೆಗೆ ತಂದರೆ ಇಲ್ಲಿ ಬೆಲೆ ಕುಸಿತವೆಂಬ ಭೂತ ಹೊಟ್ಟೆಯ ಮೇಲೆ ಬರೆ ಎಳೆಯುವ ಕಾರ್ಯ ಮಾಡುತ್ತಿದೆ. ಆದರೆ ಇದೀಗ ಅಳಿದುಳಿದ ಬೆಳೆಗೂ ಬೆಲೆ ಇಲ್ಲದಂತಾಗಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.

ಅತಿವೃಷ್ಟಿಯಿಂದ ಬೆಳ್ಳುಳ್ಳಿಯ ಗುಣಮಟ್ಟ ಕಡಿಮೆಯಾಗಿದೆ ಎನ್ನುವ ದೃಷ್ಟಿಯಿಂದ ಖರೀದಿಗೆ ವ್ಯಾಪಾರಸ್ಥರು ಬರದೆ ಇರುವದರಿಂದ ಬೆಲೆ ಸಿಗುತ್ತಿಲ್ಲ ಎನ್ನುವ ವಾದ ಇನ್ನೊಂದು ಕಡೆ. ಅಲ್ಲದೆ ಖರೀದಿಗೆ ವ್ಯಾಪಾರಸ್ಥರೇ ಬರದೆ ಇರುವುದರಿಂದ ದಲ್ಲಾಳಿಗಳು ಸಹ ಬೆಳ್ಳುಳ್ಳಿ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಕಳೆದ ವಾರ ಕ್ವಿಂಟಲ್‌ಗೆ ₹ ೫೦೦೦-೭೦೦೦ ವರೆಗೆ ಇದ್ದ ಧಾರಣೆ ಈ ವಾರ ಏಕಾಏಕಿ ಕುಸಿತವಾಗಿದೆ. ಈ ವಾರ ಕ್ವಿಂಟಲ್‌ಗೆ ₹ 4೦೦೦-3೦೦೦ ರು. ಗಳಿಗೆ ಕುಸಿತ ಕಂಡಿದ್ದರಿಂದ ಅಕ್ರೋಶಗೊಂಡ ರೈತರು ಬೆಳ್ಳುಳ್ಳಿ ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡಿದ್ದಾರೆ. ರೈತರ ನೋವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ವ್ಯವಸ್ಥೆಯ ವಿರುದ್ದ ರೈತರು ಘೋಷಣೆ ಕೂಗಿದರು.ಗದಗ, ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಳ್ಳುಳ್ಳಿಗೆ ಹೆಚ್ಚಿನ ಬೆಲೆ ಇದ್ದರೂ. ಇಲ್ಲಿ ಮಾತ್ರ ಕಡಿಮೆ ದರ ಯಾಕೆ ನಿಗದಿಪಡಿಸಿದ್ದಾರೆ ಎಂದು ರೈತ ಶಿವು ಕಡೆಮನಿ ಪ್ರಶ್ನಿಸಿದರು. ಕಳೆದ ವಾರ ಬೆಳ್ಳುಳ್ಳಿ ದರದ ಬಗ್ಗೆ ಸಮಾಧಾನ ಆಗಿತ್ತು. ಈಗ ಬೆಳ್ಳುಳ್ಳಿ ದರ ಇಳಿಸಲಾಗಿದೆ. ರೈತರಿಗೆ ನ್ಯಾಯ ಒದಗಿಸದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ರೈತರಾದ ಮಂಜುನಾಥ ಬೆಟಗೇರಿ, ಬಸವರಾಜ ಯಂಗಾಡಿ ಮತ್ತು ಪರಸುರಾಮ ಲಕ್ಕಣ್ಣವರ್ ಎಚ್ಚರಿಸಿದರು.ಈಗಾಗಲೇ ಮಳೆಯ ಹೊಡೆತಕ್ಕೆ ಶೇ.೮೦ರಷ್ಟು ಪ್ರಮಾಣದಲ್ಲಿ ಬೆಳೆ ಹಾಳಾಗಿದೆ, ಉಳಿದ ಶೇ.೧೦-೨೦ರಷ್ಟು ಇರುವ ಬೆಳೆಗೂ ಸಹ ಬೆಲೆ ಇಲ್ಲದಿದ್ದರೆ ರೈತರು ಬದುಕುವುದಾದರೂ ಹೇಗೆ ? ಬೆಲೆ ಕಡಿಮೆಯಾಗಿರುವುದು ಗೊತ್ತು, ಆದರೆ ಅತಿ ಕನಿಷ್ಠ ದರಕ್ಕೆ ಮಾರಾಟ ಮಾಡುವದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ರೈತರಾದ ಶ್ರೀನಾಥ ಗೋಂದಿ, ಪರಶುರಾಮ ಲಕ್ಕಣ್ಣವರ ಆಕ್ರೋಶ ವ್ಯಕ್ತಪಡಿಸಿದರು.ಈ ವಿಷಯ ತಿಳಿಯುತ್ತಿದ್ದಂತೆ ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ ಸ್ಥಳಕ್ಕೆ ಧಾವಿಸಿ, ಮೊದಲು ರೈತರು ತಂದ ಮಾಲನ್ನು ಇಳಿಸಿಕೊಳ್ಳಿರಿ ಎಂದು ದಲ್ಲಾಲಿಗಳಿಗೆ ಸೂಚಿಸಿದರು. ಈ ವೇಳೆ ಕೆಲಹೊತ್ತು ರೈತರ ಮತ್ತು ದಲ್ಲಾಲಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಗದ್ದಲದ ವಾತಾವರಣ ತಿಳಿಯಾಗುತ್ತಿದ್ದಂತೆ ಮತ್ತೆ ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು.ರೈತರಾದ ರಮೇಶ ಪೂಜಾರ, ಸಾದೇವಪ್ಪ ಜುಲ್ಪಿ, ಬಸವರಾಜ ಬೆಳವಣಿಕಿ, ಶಿವಾನಂದ ಗುಮ್ಮಗೋಳ, ನಿಂಗರಾಜ ಬಿಜಗತ್ತಿ, ಆದಿತ್ಯ ಹದ್ದಣ್ಣವರ, ಹನುಮಂತ ಪೂಜಾರ ಸೇರಿದಂತೆ ಅನೇಕ ರೈತರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ