ಕನ್ನಡಪ್ರಭ ವಾರ್ತೆ ರಾಮನಾಥಪುರ ಇಲ್ಲಿಯ ಸುಬ್ರಹ್ಮಣ್ಯನಗರದಲ್ಲಿರುವ ಫ್ಲಾಟ್‌ಫಾರಂ 7 ಹಾಗೂ 63 ರ ವ್ಯಾಪ್ತಿಯ 2 ಹರಾಜು ತಂಬಾಕು ಮಾರುಕಟ್ಟೆಗಳಲ್ಲಿ ಒಂದೆಡೆ ಬೆಲೆ ಕುಸಿತದಿಂದ ರೈತರು ಕಣ್ಣೀರಿಡುತ್ತಿದ್ದರೆ ಮತ್ತೊಂದೆಡೆ ದಾಸ್ತಾನಿಟ್ಟಿದ್ದ ಹೊಗೆಸೊಪ್ಪು ಕೂಡ ಕೊಳೆತು ಹಾಳಾಗಿ ಆರ್ಥಿಕವಾಗಿ ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ರಾಮನಾಥಪುರ ಈ ತಂಬಾಕು ಹರಾಜು ಮಾರುಕಟ್ಟೆ 1970 ರಿಂದ ಪ್ರಾರಂಭವಾಗಿದ್ದು ಈ ಭಾಗದಲ್ಲಿ 20 ಸಾವಿರದಿಂದ 30 ಸಾವಿರ ತಂಬಾಕು ಬೆಳೆಗಾರರಿದ್ದಾರೆ. ಈ ವಾಣಿಜ್ಯ ಬೆಳೆ ತಂಬಾಕನ್ನು ರೈತರು ಲಕ್ಷಾಂತರ ರುಪಾಯಿ ಸಾಲ ಸೋಲ ಮಾಡಿ ಉತ್ಪಾದಿಸಿರುವ ಹೊಗೆಸೊಪ್ಪನ್ನು ಮಾರಾಟಕ್ಕಾಗಿ ತಿಂಗಳುಗಟ್ಟಲೇ ಮನೆಗಳಲ್ಲಿ ಒಂದೆಡೆ ಸಂಗ್ರಹಿಸಿ ಕೆಲ ತಿಂಗಳಿನಿಂದ ದಾಸ್ತಾನಿಟ್ಟಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದ್ದರಿಂದ ಸಕಾಲದಲ್ಲಿ ಮಾರಾಟ ಮಾಡಲಾಗಲಿಲ್ಲ. ತಂಬಾಕು ಕೊಳ್ಳುವ ವರ್ತಕರು ಸಹ ಬೇಲ್‌ಗಳನ್ನು ಖರೀದಿಸಲು ಹಿಂದೇಟು ಹಾಕಿದರು. ಇತ್ತ ಬ್ಯಾರಲ್ ಮನೆಗಳಲ್ಲಿ ಹದಗೊಳಿಸಿ ಗ್ರೇಡ್ ಕಾರ್ಯ ಮುಗಿಸಿ ಅಪಾರ ದಿನಗಳ ಕಾಲ ಇಟ್ಟಿದ್ದ ಹೊಗೆಸೊಪ್ಪು ಸೀತ ಹಾಗೂ ಹುಳು ಹತ್ತಿದ್ದು ಕೆಲವೆಡೆ ಸಾಕಷ್ಟು ಪ್ರಮಾಣದಲ್ಲಿ ಕರಗಿ ನಷ್ಟವಾಗಿದೆ.ತಂಬಾಕು ಮಾರುಕಟ್ಟೆಯಲ್ಲಿಯೂ ಕನಿಷ್ಠ ಮತ್ತು ಗರಿಷ್ಠ ದರದಲ್ಲಿ ಏರಿಕೆ ಕಾಣಬೇಕಿದ್ದ ತಂಬಾಕು ಬೆಲೆ ಪಾತಾಳ ಕಂಡಿದ್ದು ಬೆಳೆಗಾರರಿಗೆ ಆಗಿರುವ ಅನ್ಯಾಯವಾಗಿ ಕೇಳುವವರೇ ಇಲ್ಲವಾಗಿದ್ದಾರೆ. ಉತ್ತಮ ದರ್ಜೆಯ ಹೊಗೆಸೊಪ್ಪು ಮಾತ್ರ ಖರೀದಿಸುತ್ತಿದ್ದ ವರ್ತಕರು ಆರಂಭದಿಂದಲೂ ಬೇಡಿಕೆ ಇಲ್ಲದ ನೆಪವೊಡ್ಡಿ ಕೆಳೆ ದರ್ಜೆಯ ಹೊಗೆಸೊಪ್ಪು ಕೊಳ್ಳದೆ ತಿರಸ್ಕರಿದ್ದರು. ಇದೀಗ ಕೆಳ ದರ್ಜೆಯ ಕೆಲವು ಬೇಲ್‌ಗಳನ್ನು ಕೇವಲ 100 ರುಪಾಯಿಗೆ ಬೇಕಾಬಿಟ್ಟಿ ದರದಲ್ಲಿ ಖರೀದಿಸುತ್ತಿದ್ದು ಸಾಕಷ್ಟು ಬೇಲ್‌ಗಳು ಬಿಡ್ ಆಗದೆ ಬೆಳೆಗಾರರು ಹೈರಾಣಾಗಿದ್ದಾರೆ.ಈ ಬಾರಿ ಹರಾಜು ಪ್ರಕ್ರಿಯೆ ಶುರುವಾದ ದಿನಗಳಲ್ಲಿ ಒಂದು ಕೆಜಿ ಗುಣಮಟ್ಟದ ತಂಬಾಕಿಗೆ 320 ರುಪಾಯಿಂದ ಆರಂಭಿಸಲಾಗಿತ್ತು. ನಂತರದ ದಿನಗಳಲ್ಲಿ 320ರಿಂದ 325 ರೂಪಾಯಿಗೆ ಏರಿಕೆ ಕಂಡಿತ್ತು. ವರ್ತಕರು ಮತ್ತಷ್ಟು ಉತ್ತಮ ದರ ನೀಡುವ ಆಶಾಭಾವನೆ ರೈತರಲ್ಲಿತ್ತು. ಈಗ ಗುಣಮಟ್ಟದ ಒಂದು ಕೆಜಿ ತಂಬಾಕು 320 ರುಪಾಯಿಗೆ ಮಾರಾಟವಾಗುವ ಬದಲಿಗೆ 150ರಿಂದ 180 ರು. ಇಳಿಕೆ ದಾಖಲಿಸಿದೆ. ಗುಣಮಟ್ಟದ ಸಾಕಷ್ಟು ಬೇಲ್‌ಗಳನ್ನು ಕಡಿಮೆ ಬೆಲೆಗೆ ಕೊಳ್ಳಲಾಗುತ್ತಿದೆ. ಹೆಚ್ಚಿನದಾಗಿ ಕೆಳ ದರ್ಜೆಯ ಬೇಲ್‌ಗಳನ್ನು ಬಿಡ್ ಮಾಡದ ಪರಿಣಾಮ ರೋಸಿಹೋದ ರೈತರು ಮಾರುಕಟ್ಟೆಯಿಂದ ಹೊರತಂದು ದಲ್ಲಾಳಿಗಳಿಗೆ ಬಿಡಿಗಾಸಿಗೆ ನೀಡಿ ಕೈತೊಳೆದುಕೊಳ್ಳುತ್ತಿದ್ದು ಸಾಗಾಟದ ವೆಚ್ಚ ಕೂಡ ಸಿಗದಾಗಿ ಚಿಂತಾಕ್ರಾಂತರಾಗಿದ್ದಾರೆ.ಕೇಂದ್ರ ಸರ್ಕಾರದ ಸುಂಕ:
ಕೇಂದ್ರ ಸರ್ಕಾರ ಅಬಕಾರಿ ಸುಂಕ ಏರಿಸಲಿದೆ ಎಂದು ಆರೋಪಿಸಿ ದಿಢೀರ್ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸುವ ವರ್ತಕರು ಬೆಲೆ ಏರಿಕೆ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಲಿಲ್ಲ. ಮಂಡಳಿ ಕೂಡ ರೈತರಿಗೆ ಆಗುತ್ತಿರುವ ಬೆಲೆ ನಷ್ಟ ಸರಿಪಡಿಸದೆ ಮೌನವಾಗಿದೆ. ಕೆಲವು ರೈತರು ಇನ್ನೂ ಪೂರ್ಣಪ್ರಮಾಣದಲ್ಲಿ ತಂಬಾಕು ಮಾರಾಟ ಮಾಡಿಲ್ಲ. ದಾಸ್ತಾನಿಟ್ಟಿರುವ ಹೊಗೆಸೊಪ್ಪು ಮನೆಯಲ್ಲೇ ಹುಳು ಹತ್ತಿದ್ದು ಜತೆಗೆ ಬೆಲೆ ಕುಸಿತದಿಂದ ಅನ್ನದಾತರು ಸಾಲದ ಶೂಲದಲ್ಲಿ ನರಳುವಂತಾಗಿದೆ. ಕೇಂದ್ರದ ಜನಪ್ರತಿನಿಧಿಗಳ ಭೇಟಿ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎ. ಮಂಜು ಅವರು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ದರ ಏರಿಕೆ ಮಾಡಿ ಕಷ್ಟದಲ್ಲಿರುವ ರೈತರ ಸಮಸ್ಯೆಗೆ ಸ್ಪಂದಿಸುವತೆ ಮಾಡಿದ್ದ ಮನವಿಗೂ ಮಾನ್ಯತೆ ಸಿಕ್ಕಿಲ್ಲ. ರೈತರ ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ತಂಬಾಕು ಬೆಳೆಗಾರರ ಸ್ಥಿತಿ ನರಿ ಕೂಗು ಗಿರಿ ಮುಟ್ಟಿತೇ ಎಂಬಂತಾಗಿದ್ದು ಸರ್ಕಾರ ತಳೆದಿರುವ ನಿರ್ಲಕ್ಷ ಧೋರಣೆಯಿಂದಾಗಿ ಬೆಲೆಯಲ್ಲಿ ಅಪಾರ ಅನ್ಯಾಯವಾಗಿದ್ದು ದಿಕ್ಕುತೋಚದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಬೆಳೆಗಾರರು.===* ಹೇಳಿಕೆ1
ತಂಬಾಕು ಉತ್ಪಾದಿಸಿದ ರೈತರ ಸ್ಥಿತಿ ಚಿಂತಾಜಕವಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಸುಧಾರಣೆ ಕಾಣದೆ 320 ರೂನಿಂದ 100 ರೂಪಾಯಿಗೆ ಬೆಲೆ ಕುಸಿದಿದೆ. ಕೆಳ ದರ್ಜೆಯ ಬೇಲ್‌ಗಳನ್ನು ಖರೀದಿಸುತ್ತಿಲ್ಲ. ವಿದೇಶದಲ್ಲಿ ಇಲ್ಲಿನ ಹೊಗೆಸೊಪ್ಪಿಗೆ ಉತ್ತಮ ಬೆಲೆ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾತ್ರ ಬೇಕಾಬಿಟ್ಟಿ ಬೆಲೆಗೆ ಕೊಳ್ಳಲಾಗುತ್ತಿದೆ. ಬೆಳೆಗಾರರು ಬೆಲೆ ಕುಸಿತದಿಂದ ತತ್ತರಿಸಿದ್ದರೂ ಸರ್ಕಾರ ರೈತರ ಕಣ್ಣೀರು ಒರೆಸುತ್ತಿಲ್ಲ. ದಾಸ್ತಾನಿಟ್ಟಿರುವ ತಂಬಾಕು ಹುಳ್ಳು ಹತ್ತಿ ಕರಗುತ್ತಿದ್ದು ಕಷ್ಟಪಟ್ಟು ಹೊಗೆಸೊಪ್ಪು ಬೆಳೆದರೂ ನೆಮ್ಮದಿ ಇಲ್ಲ. ರೈತರ ಸಮಸ್ಯೆಗೆ ಸ್ಪಂದಿಸದ ಶಾಸಕರು ಮತ್ತು ಸಂಸದರು ಏಕಿರಬೇಕು. ಮಾರುಕಟ್ಟೆಯಲ್ಲಿ ನಮ್ಮ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.- ಮಂಜುನಾಥ, ಮಲ್ಲಾಪುರ, ರೈತ ಮುಖಂಡ=
ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಕೆಳ ದರ್ಜೆಯ ಬೇಲ್‌ಗಳನ್ನು 100 ರೂಪಾಯಿಗೆ ಕೊಳ್ಳಲಾಗುತ್ತಿದ್ದು ಕೆಲವು ಬೇಲ್‌ಗಳು ಬಿಡ್ ಆಗುತ್ತಿಲ್ಲ. ಇನ್ನೊಂದು 10 ಅಥವಾ-12 ದಿವಸಗಳ ಕಾಲ ತಂಬಾಕು ಹರಾಜು ಪ್ರಕ್ರಿಯೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಬೇಡಿಕೆ ಉಂಟಾದರೆ ಮುಂದಿನ ದಿನಗಳಲ್ಲಿ ವರ್ತಕರು ಕೆಳ ದರ್ಜೆಯ ಬೇಲ್‌ಗಳನ್ನು ಖರೀದಿಸುವರೇ ಎಂಬುದನ್ನು ಕಾದು ನೋಡಬೇಕಿದೆ. - ಕೊಟ್ರೇಶ್ ರಾವ್, ತಂಬಾಕು ಮಾರುಕಟ್ಟೆ, ಹರಾಜು ಅಧೀಕ್ಷಕ, ರಾಮನಾಥಪುರ